ಮೋದಿ ಪರ ಅಲೆ, ಮೈತ್ರಿಗಿಲ್ಲ ನೆಲೆ; ಪ್ರತಿ ರಾಜ್ಯದಲ್ಲಿ ತ್ರಿಕೋನ ಸ್ಪರ್ಧೆ, ಬಿಜೆಪಿಗಿಲ್ಲ ನೇರ ಸ್ಪರ್ಧೆ

ಸಾಧನೆಗಳ ಆಧಾರದಲ್ಲಿ ಮತ್ತೊಮ್ಮೆ ಅವಕಾಶ ನೀಡಿ ಎನ್ನುತ್ತಿರುವ ಮೋದಿ ಸರ್ಕಾರಕ್ಕೆ ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದ್ದು, ಬಿರುಸಿನ ಪ್ರಚಾರ ನಡೆಸುತ್ತಿದೆ. ಚುನಾವಣೆ ಹೊಸ್ತಿಲಲ್ಲಿ ಮೂಡಿರುವ ಗೊಂದಲಗಳಿಗೆ ಪರಿಹಾರ, ಚುನಾವಣೆ ತಂತ್ರ, ನಂತರದ ಹೆಜ್ಜೆಗಳ ಕುರಿತು ರಾಜ್ಯ ಬಿಜೆಪಿ ಪ್ರಭಾರಿ ಪಿ. ಮುರಳೀಧರ ರಾವ್ ವಿಜಯವಾಣಿ ಜತೆ ಹಂಚಿಕೊಂಡಿದ್ದಾರೆ.

| ರಮೇಶ ದೊಡ್ಡಪುರ ಬೆಂಗಳೂರು

# 2014ರ ಚುನಾವಣೆ ಹೋಲಿಕೆಯಲ್ಲಿ ಈ ಚುನಾವಣೆ ಸೈದ್ಧಾಂತಿಕವಾಗಿ ಹೇಗೆ ಭಿನ್ನ?

-2019ರಲ್ಲಿ ಬಿಜೆಪಿಯೇ ಇಡೀ ಚುನಾವಣೆಯ ಕೇಂದ್ರ ಬಿಂದು. ಉಳಿದವರೆಲ್ಲರೂ ಬಿಜೆಪಿ ವಿರುದ್ಧ ಇದ್ದಾರೆ. 2014ರಲ್ಲಿ ಅಸ್ಪಷ್ಟವಾಗಿದ್ದ ಈ ಭಿನ್ನತೆ ಈಗ ಸ್ಪಷ್ಟವಾಗಿ ಗೋಚರಿಸುತ್ತಿದೆ. ಮಹಾಘಟಬಂಧನ್ ಎಂಬ ಪ್ರಯತ್ನ ವಿಫಲವಾಗಿದೆ. ಪ್ರತಿ ರಾಜ್ಯದಲ್ಲಿ ತ್ರಿಕೋನ ಸ್ಪರ್ಧೆ ಇದೆಯೇ ಹೊರತು, ಬಿಜೆಪಿ ವಿರುದ್ಧ ನೇರ ಹಣಾಹಣಿ ಇಲ್ಲ. ಮಹಾಘಟಬಂಧನಕ್ಕೆ ನಾಯಕರೇ ಇಲ್ಲ. 2014ರಲ್ಲಿ ಮೋದಿ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಬಿಂಬಿತವಾಗಿದ್ದ ಹೊರಗಿನ ನಾಯಕ. ಆದರೀಗ ಐದು ವರ್ಷ ಸಾಧನೆ ಮಾಡಿದ ರಾಷ್ಟ್ರೀಯ ನಾಯಕರಾಗಿದ್ದಾರೆ. 2014ರಲ್ಲಿ ಬಿಜೆಪಿ 4 ರಾಜ್ಯದಲ್ಲಿ ಅಧಿಕಾರದಲ್ಲಿತ್ತು, ಈಗ 16 ರಾಜ್ಯದಲ್ಲಿದೆ.

# ಮೋದಿ ಸರ್ಕಾರದ ಕುರಿತು ಆಡಳಿತ ವಿರೋಧಿ ಅಲೆ ಇಲ್ಲ ಎಂದು ಹೇಳುತ್ತೀರಾ?

-ದೇಶಾದ್ಯಂತ ‘ಆಡಳಿತ ಪರ ಅಲೆ’ ಇದೆ. 5 ಲಕ್ಷದವರೆಗೆ ಆದಾಯ ತೆರಿಗೆ ಮಿತಿ ಹೆಚ್ಚಳ, ಆರ್ಥಿಕ ಹಿಂದುಳಿದ ಸಮುದಾಯಗಳಿಗೆ ಶೇ.10 ಮೀಸಲಾತಿ, ಪಾಕಿಸ್ತಾನ ಜತೆಗಿನ ನಿಷ್ಠುರ ವ್ಯವಹಾರಗಳಿಂದಾಗಿ ಅಂತಹ ಸಣ್ಣ ಪುಟ್ಟ ಕೊರತೆಗಳಿದ್ದರೂ ಪರಿಹಾರವಾಗಿವೆ.

# ಪಕ್ಷದ ನಾಯಕರು ಅಂತಮುಖಿಯಾಗಿರಬೇಕು ಎಂದು ಎಲ್.ಕೆ.ಆಡ್ವಾಣಿ ತಿಳಿಸಿದ್ದರ ಅರ್ಥವೇನು?

-ಅಂತಮುಖಿಯಾಗಬೇಕು ಎಂಬ ಮಾತ್ರಕ್ಕೆ ಏನೋ ತೊಂದರೆ ಇದೆ ಎಂದರ್ಥವಲ್ಲ. ಬಿಜೆಪಿ ಉಳಿದ ಪಕ್ಷಗಳಿಗಿಂತ ಭಿನ್ನವಾಗಿರಬೇಕು ಎಂಬುದು ಅಪೇಕ್ಷೆ. ಚುನಾವಣೆಗೂ ಮುನ್ನ ಅವಲೋಕನ ಮಾಡಿಕೊಂಡು ಮುನ್ನಡೆಯಿರಿ ಎಂದು ನಮ್ಮ ನಾಯಕರು ಮಾರ್ಗದರ್ಶನ ಮಾಡಿದ್ದಾರೆ, ಅವರ ಬಗ್ಗೆ ಅಪಾರ ಗೌರವವಿದೆ.

# ಮೋದಿ ವಿರೋಧಿಗಳನ್ನು ದೇಶ ವಿರೋಧಿಗಳು ಎಂದು ಬಿಂಬಿಸುವುದು ಸರಿಯೇ?

-ನಾವು ಎಂದಿಗೂ ಅಂತಹ ಕೆಲಸಕ್ಕೆ ಕೈ ಹಾಕಿಲ್ಲ. ಮೋದಿ ವಿರೋಧಿಗಳು ದೇಶ ವಿರೋಧಿ ಅಲ್ಲವೇ ಅಲ್ಲ. ಆದರೆ ಸೇನೆ ವಿರೋಧಿಗಳು ದೇಶ ವಿರೋಧಿಗಳು. ಸೇನೆ ಬಿಜೆಪಿಗೆ ಸೇರಿದ್ದಲ್ಲ. ಅದರ ಬಗ್ಗೆ ಏಕೆ ನಕಾರಾತ್ಮಕ ಮಾತು? ಪಾಕಿಸ್ತಾನದ ಮಾತಿಗೆ ಬೆಂಬಲ ಏಕೆ?

# ಮೈತ್ರಿಯಿಂದ ಬಿಜೆಪಿಗೆ ಅಪಾಯವಿದೆಯೇ?

-ಕೆಲವು ಕ್ಷೇತ್ರಗಳಲ್ಲಿ ಅವರು ಒಟ್ಟಾದರೆ ಒಂದು ಪಕ್ಷದ ಬುಡವೇ ಅಲ್ಲಾಡುತ್ತದೆ. ಮೈಸೂರು ಪ್ರದೇಶದಲ್ಲಿ ಈ ಚುನಾವಣೆ ನಂತರ ಬಿಜೆಪಿ ಸದೃಢ ಪಕ್ಷವಾಗಿ ಹೊರಹೊಮ್ಮಲಿದೆ. ಎರಡೂ ಪಕ್ಷಗಳು ಅತ್ಯಂತ ನಷ್ಟ ಅನುಭವಿಸಲಿವೆ ಎಂಬುದಂತೂ ಸತ್ಯ.

# ಭಾರತದ ಪ್ರಜಾತಂತ್ರಕ್ಕೆ ಬದಲಾಗಿ ಅಮೆರಿಕ ಅಧ್ಯಕ್ಷೀಯ ಮಾದರಿ ಚುನಾವಣೆ ನಡೆಯುತ್ತಿದೆ ಎಂಬ ಆಪಾದನೆಯಿದೆಯಲ್ಲ?

-ಚುನಾವಣೆ ಎಂಬುದು ಯುದ್ಧ. ಗೆಲ್ಲುವ ಗುರಿ ಇಟ್ಟುಕೊಂಡು ಚುನಾವಣೆ ನಡೆಸಲಾಗುತ್ತದೆಯೇ ಹೊರತು, ಸಿದ್ಧಾಂತಕ್ಕೆ ಸಂಬಂಧವಿಲ್ಲ. ಯುದ್ಧದಲ್ಲಿ ತಂತ್ರಗಳಿರುತ್ತವೆ, ತಂತ್ರಗಳು ಎಂದೂ ಶಾಶ್ವತವಲ್ಲ. ಆಯಾ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತವೆ. ಮೋದಿ ಇಂದು ಪ್ರಬಲ ನಾಯಕರಾಗಿದ್ದಾರೆ, ಅವರನ್ನು ಮುಂದಿಟ್ಟುಕೊಂಡು ಸೆಣೆಸುತ್ತಿದ್ದೇವೆ. ಕೆಲವು ರಾಜ್ಯಗಳ ಚುನಾವಣೆಯಲ್ಲಿ ನಾಯಕರನ್ನು ಘೋಷಿಸದೆಯೇ ಸ್ಪರ್ಧೆ ಮಾಡಿದ್ದೇವೆ. ಇದಕ್ಕೂ ಸಂವಿಧಾನಕ್ಕೂ, ಪಕ್ಷದ ಬದ್ಧತೆಗೂ ಸಂಬಂಧವಿಲ್ಲ. ಈ ಹಿಂದೆ ಇಂದಿರಾ ಗಾಂಧಿ, ನೆಹರೂ ಮುಂದಿಟ್ಟುಕೊಂಡು ಕಾಂಗ್ರೆಸ್ ಚುನಾವಣೆ ನಡೆಸಿಲ್ಲವೇ?

# ಮಂಡ್ಯದದಲ್ಲಿ ಅಂಬರೀಷ್​ಗೆ ಅನ್ಯಾಯ ಎನ್ನುತ್ತಲೇ ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿನಿ ಅನಂತಕುಮಾರ್​ಗೆ ಟಿಕೆಟ್ ನಿರಾಕರಿಸಿದ್ದನ್ನು ಹೇಗೆ ಸಮರ್ಥನೆ ಮಾಡಿಕೊಳ್ಳುತ್ತೀರ?

-ಅಂಬರೀಷ್​ಗೆ ಅನ್ಯಾಯವಾಗಿದೆ ಎಂದು ಬಿಜೆಪಿ ಎಲ್ಲಿಯೂ ಹೇಳಿಲ್ಲ. ಅದಕ್ಕೂ ನಮಗೂ ಸಂಬಂಧವಿಲ್ಲ. ಸುಮಲತಾ ಅಂಬರೀಷ್ ಹಾಗೆ ಹೇಳಬಹುದು. ಮಂಡ್ಯದಲ್ಲಿ ಸುಮಲತಾ ಗೆಲ್ಲುವ ಸಾಧ್ಯತೆ ಇದ್ದು, ಮೈತ್ರಿ ಸೋಲಿಸುವ ನಮ್ಮ ಗುರಿಗೆ ಸಹಕಾರಿ ಎನ್ನಿಸಿದ್ದರಿಂದ ಬೆಂಬಲ ನೀಡಿದ್ದೇವೆ.

# ರಾಹುಲ್ ಕೇರಳ ಸ್ಪರ್ಧೆ ಬಗ್ಗೆ ನಿಮ್ಮ ವಿಶ್ಲೇಷಣೆ?

-ಅವರಿಗೆ ಅಸ್ತಿತ್ವದ ಪ್ರಶ್ನೆ. ಅಮೇಠಿಯಲ್ಲಿ ಗೆಲ್ಲುವುದು ಕಷ್ಟ. ಬೇರೆ ಯಾವ ರಾಜ್ಯದಲ್ಲೂ ಜಯ ಸಾಧ್ಯವಿಲ್ಲ. ಅಸ್ತಿತ್ವಕ್ಕಾಗಿ ಅಲ್ಲಿ ಸ್ಪರ್ಧಿಸಿದ್ದಾರೆ. ಬ್ರಾಹ್ಮಣ ಎಂದು ಹೇಳಿಕೊಂಡಿದ್ದು, ದೇವಸ್ಥಾನ ಸುತ್ತಿದ್ದೆಲ್ಲವೂ ಗಿಮಿಕ್. ಅವರ ಗುರಿಯೇನಿದ್ದರೂ ಚುನಾವಣೆ ಗೆಲುವು ಮಾತ್ರ.

# 75 ವರ್ಷ ದಾಟಿದವರಿಗೆ ಚುನಾವಣೆ ನಿರ್ಬಂಧ ಎಂಬುದು ಕರ್ನಾಟಕಕ್ಕೂ ಅನ್ವಯಿಸುತ್ತದೆಯೇ?

-ನಮಗೆ ಯಾವುದೇ ಸಮಸ್ಯೆ ಇಲ್ಲದ ಸಂದರ್ಭ ಈ ಪ್ರಶ್ನೆ ಏಕೆ? ಮುಖ್ಯಮಂತ್ರಿ ಅಭ್ಯರ್ಥಿ ಎಂದು ಯಡಿಯೂರಪ್ಪ ಅವರನ್ನು ಘೋಷಿಸಿದ ನಂತರ ಐದು ವರ್ಷಕ್ಕೆ ಅನ್ವಯ ತಾನೆ? ಮುಂದಿನ ಐದು ವರ್ಷದ ನಂತರ ಏನೆಂದು ಈಗಲೇ ಹೇಗೆ ಹೇಳುವುದು? ಸೇತುವೆ ದಾಟಿದ ಮೇಲೆ ಆ ಬಗ್ಗೆ ಯೋಚನೆ ತಾನೆ?

# ಬಿಜೆಪಿ ಎಲ್ಲ ಸಂವಿಧಾನಾತ್ಮಕ ಸಂಸ್ಥೆಗಳನ್ನು ಹಾಳು ಮಾಡಿದೆ, ನಮ್ಮನ್ನು ಹಿಂಸಿಸುತ್ತಿದೆ ಎಂದು ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರಲ್ಲ?

-ಹಾಗೇನಾದರೂ ಇದ್ದಿದ್ದರೆ ನೀವು ನನ್ನನ್ನು ಪ್ರಶ್ನಿಸಲೇ ಸಾಧ್ಯವಾಗುತ್ತಿರಲಿಲ್ಲ. ರಾಹುಲ್ ಗಾಂಧಿ ಇಷ್ಟರಮಟ್ಟಿಗೆ ನಮ್ಮನ್ನು ಟೀಕಿಸುತ್ತಿದ್ದಾರೆ, ಸಂಸತ್​ನಲ್ಲಿ ತಬ್ಬಿಕೊಳ್ಳುತ್ತಾರೆ. ಅವರಿಗೆ ಏನಾದರೂ ಆಗಿದೆಯೇ? ಆರೆಸ್ಸೆಸ್ ನಿರ್ಬಂಧಿಸಿದವರು, ಹಿಂದು ತಾಲಿಬಾನ್ ಪದ ಪ್ರಯೋಗಿಸಿದವರು, ತುರ್ತಪರಿಸ್ಥಿತಿ ಹೇರಿದ ಕಾಂಗ್ರೆಸ್ ಇಂದು ಪ್ರಜಾಪ್ರಭುತ್ವದ ಮಾತಾಡುತ್ತಿದೆ. ಹಾಗೆ ನೋಡಿದರೆ ಎರಡೂ ಪಕ್ಷಗಳಿಗೆ ಹಣ ಮಾಡುವ ಉದ್ದೇಶದಿಂದ, ಕರ್ನಾಟಕವನ್ನು ಎಟಿಎಂ ರೀತಿ ಬಳಸಿಕೊಳ್ಳುವ ಸಲುವಾಗಿ ಮೈತ್ರಿ ಮಾಡಿಕೊಂಡು ಕರ್ನಾಟಕದ ಜನರನ್ನು ಹಿಂಸಿಸುತ್ತಿರುವುದು ಸಿಎಂ ಕುಮಾರಸ್ವಾಮಿಯೇ ಹೊರತು ನಾವಲ್ಲ.

# ತೇಜಸ್ವಿನಿಗೆ ಟಿಕೆಟ್ ದೊರಕದಿರಲು ಕಾರಣವೇನು?

-ಏನೂ ಇಲ್ಲ. ಅವರಿಗೇ ಏಕೆ ನೀಡಬೇಕು? ಹೊಸ ಪೀಳಿಗೆಗೆ ನೀಡಬೇಕು ಎಂದು ಪಕ್ಷ ನಿರ್ಧರಿಸಿದೆ ಅಷ್ಟೇ. ತೇಜಸ್ವಿನಿ ಅವರನ್ನು ಗಂಭೀರವಾಗಿ ಪರಿಗಣಿಸಿದ್ದೇವೆ, ಅವರು ಬಹುಮುಖ್ಯ. ಸೈದ್ಧಾಂತಿಕವಾಗಿ, ರಾಜಕೀಯವಾಗಿ ಬದ್ಧತೆಯಿರುವ, ಪ್ರತಿಭೆ ಇರುವ, ತಮ್ಮದೇ ವರ್ಚಸ್ಸು ಬೆಳೆಸಿಕೊಂಡಿರುವ ತೇಜಸ್ವಿನಿ ಅನಂತಕುಮಾರ್ ಅವರಿಗೆ ಪಕ್ಷದಲ್ಲಿ ಹಾಗೂ ರಾಜಕೀಯದಲ್ಲಿ ಉಜ್ವಲ ಭವಿಷ್ಯವಿದೆ. ಪ್ರಭಾರಿಯಾಗಿ ಈ ಮಾತನ್ನು ಹೇಳುತ್ತಿದ್ದೇನೆ.

ದೇಶ ಸಂಭ್ರಮಿಸಿದರೆ ಎಚ್​ಡಿಕೆಗೆ ಸಿಟ್ಟೇಕೆ?

ಬೆಂಗಳೂರು: ಬಾಲಾಕೋಟ್​ನಲ್ಲಿ ಭಾರತೀಯ ಸೈನಿಕರ ಕಾರ್ಯಾಚರಣೆ ಮೆಚ್ಚಿ ಇಡೀ ದೇಶವೇ ಸಂಭ್ರಮಿಸುತ್ತಿದ್ದರೆ, ಸಿಎಂ ಕುಮಾರಸ್ವಾಮಿ ಮಾತ್ರ ಸಂಭ್ರಮಾಚರಣೆಯಿಂದ ಅಲ್ಪಸಂಖ್ಯಾತರಿಗೆ ನೋವಾಗುತ್ತದೆ ಎನ್ನುತ್ತಾರೆ ಎಂದು ರಾಜ್ಯ ಬಿಜೆಪಿ ಪ್ರಭಾರಿ ಪಿ.ಮುರಳೀಧರ ರಾವ್ ಟೀಕಿಸಿದ್ದಾರೆ.

ಮಲ್ಲೇಶ್ವರದ ಚೌಡಯ್ಯ ಸ್ಮಾರಕ ಭವನದಲ್ಲಿ ಬಿಜೆಪಿ ಮಾಧ್ಯಮ ವಿಭಾಗ ಮತ್ತು ಯುವ ಮೋರ್ಚಾ ಆಯೋಜಿಸಿದ್ದ ನ್ಯೂ ಇಂಡಿಯಾ ಟೌನ್​ಹಾಲ್ ಸಂವಾದದಲ್ಲಿ ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳ ಜತೆ ಮಾತನಾಡಿದರು. ಸೈನಿಕರ ಪರಾಕ್ರಮವನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿಲ್ಲ. ಇದು ದೇಶವೇ ಸಂಭ್ರಮಿಸುವ ವಿಚಾರ. ಇದರಿಂದ ಕುಮಾರಸ್ವಾಮಿ ಅವರಿಗೇಕೆ ನೋವಾಗುತ್ತದೆ? ದೇಶದ ಮುಸ್ಲಿಮರು ಪಾಕಿಸ್ತಾನಕ್ಕೆ ಬೆಂಬಲ ಸೂಚಿಸುವುದಿಲ್ಲ. ಅತ್ತ ಒಮರ್ ಅಬ್ದುಲ್ಲ ಕಾಶ್ಮೀರ ಸ್ವತಂತ್ರ ದೇಶವಾಗಬೇಕು, ಪ್ರತ್ಯೇಕ ಬಾವುಟ ಇರಬೇಕು ಎನ್ನುತ್ತಾರೆ. ದೇಶ ಒಟ್ಟಾಗಿರುವುದು ಅವರಿಗೆಲ್ಲ ಬೇಕಾಗಿಲ್ಲ. ಬೆಂಗಳೂರಿನಲ್ಲಿ ಬಾಂಗ್ಲಾ ಅಕ್ರಮ ವಲಸಿಗರ ಸಮಸ್ಯೆಗೆ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಕಾರಣ. ಇವರಿಗೆ ಸ್ಥಳೀಯರಿಂದ ಮತ ಪಡೆಯುವ ಸಾಮರ್ಥ್ಯ ಇಲ್ಲ. ವಲಸಿಗರ ಮತದ ಮೇಲೆಯೇ ಕಣ್ಣು. ಇವರೆಲ್ಲರೂ ದೇಶದ ಅಖಂಡತೆಯ ವಿಚಾರದಲ್ಲಿ ನಿಲುವು ಸ್ಪಷ್ಟಪಡಿಸಬೇಕು ಎಂದರು.