ವಿಧಾನಸೌಧದಲ್ಲೇ 100 ಕೋಟಿ ರೂ. ಡೀಲ್!

ಬೆಂಗಳೂರು: ರಾಜ್ಯದ ಆಡಳಿತ ಕೇಂದ್ರ, ಶಕ್ತಿ ದೇಗುಲ ವಿಧಾನಸೌಧವೇ ಲಂಚ-ವಂಚನೆಗಳಿಗೆ ಅಡ್ಡೆಯಾಗಿ ಬದಲಾಗುತ್ತಿರುವ ಆತಂಕಕಾರಿ ಸಂಗತಿ ಅನಾವರಣಗೊಂಡಿದೆ. ಇತ್ತೀಚೆಗಷ್ಟೇ ವಿಧಾನಸೌಧದ ಪಶ್ಚಿಮ ಗೇಟ್ ಬಳಿ 25.76 ಲಕ್ಷ ರೂ. ಲಂಚದ ಹಣ ಪತ್ತೆಯಾದ ಬೆನ್ನಲ್ಲೇ ವಿಧಾನಸೌಧದ 1ನೇ ಮಹಡಿಯಲ್ಲಿ 100 ಕೋಟಿ ರೂ. ಡೀಲ್ ನಡೆದಿರುವ ವಿಚಾರ ಬೆಳಕಿಗೆ ಬಂದಿದೆ.

ಗೋಡಂಬಿ ವ್ಯಾಪಾರಿಯೊಬ್ಬರಿಗೆ ಸಚಿವರ ಫಂಡ್​ನಿಂದ 100 ಕೋಟಿ ರೂ. ಸಾಲ ಕೊಡಿಸುವುದಾಗಿ ನಂಬಿಸಿ ವಿಧಾನಸೌಧದ 1ನೇ ಮಹಡಿಗೆ ಕರೆದೊಯ್ದ ಮಧ್ಯವರ್ತಿಗಳು 1.12 ಕೋಟಿ ರೂ. ಹಣ ಪಡೆದು ವಂಚಿಸಿದ್ದಾರೆ. ತಮಿಳುನಾಡಿನ ಕಡಲೂರಿನ ಉದ್ಯಮಿ ರಮೇಶ್ ವಂಚನೆಗೆ ಒಳಗಾದವರು. ಈ ಸಂಬಂಧ ರಾಷ್ಟ್ರೀಕೃತ ಬ್ಯಾಂಕ್​ವೊಂದರ ಮಾಜಿ ಉದ್ಯೋಗಿ ಎಸ್.ಇಂದಿರಾ (45) ಎನ್ನುವವರು ವಿಧಾನಸೌಧ ಠಾಣೆಗೆ ಶುಕ್ರವಾರ ದೂರು ನೀಡಿದ್ದಾರೆ. ಇದರ ಆಧಾರದ ಮೇಲೆ ಆಂಧ್ರಪ್ರದೇಶದ ಇಳಮದಿರ, ಸುಂದರಂ, ಸೆಲ್ವಂ, ಅಜಯ್ ಮತ್ತು ಅವರ ತಂದೆ ಕೆ.ಕೆ. ಶೆಟ್ಟಿ ಎಂಬವರ ವಿರುದ್ಧ ಎಫ್​ಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬ್ಯಾಂಕ್ ಉದ್ಯೋಗಿಯಾಗಿದ್ದ ಇಂದಿರಾ, ಕೆಲಸ ತೊರೆದು ವಿಮಾ ಏಜೆಂಟ್ ಆಗಿದ್ದರು.

ವಿಮಾ ಪಾಲಿಸಿ ಮಾಡಿಸುವಾಗ ಗೋಡಂಬಿ ಉದ್ಯಮಿ ರಮೇಶ್ ಪರಿಚಯವಾಗಿದ್ದರು. ಈ ವೇಳೆ ತಮ್ಮ ಬಿಸಿನೆಸ್​ಗಾಗಿ 100 ಕೋಟಿ ರೂ. ಸಾಲ ಬೇಕಾಗಿದೆ ಎಂದು ಕೇಳಿದ್ದರು. ಇಂದಿರಾ ತಮಗೆ ಪರಿಚಯವಿದ್ದ ಇಳಮದಿರ ಎಂಬುವವರನ್ನು ಸಂರ್ಪಸಿ ಸಾಲದ ವಿಚಾರ ತಿಳಿಸಿದ್ದರು. ಆತ ತನ್ನ ಸ್ನೇಹಿತರ ಮೂಲಕ ಸಾಲ ಕೊಡಿಸುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದ. ಆ ನಂತರ ಇಳಮದಿರ ತನ್ನ ಪರಿಚಯಸ್ಥರು ಎಂದು ಸುಂದರಂ, ಸೆಲ್ವಂ, ಅಜಯ್ ಮತ್ತು ಅವರ ತಂದೆ ಕೆ.ಕೆ ಶೆಟ್ಟಿ ಎಂಬುವರನ್ನು ಉದ್ಯಮಿ ರಮೇಶ್​ಗೆ ಪರಿಚಯ ಮಾಡಿಕೊಟ್ಟಿದ್ದ.

ಕಡಿಮೆ ಬಡ್ಡಿಗೆ ಸಾಲ ಕೊಡಿಸುತ್ತೇವೆ ಎಂದು ಆರೋಪಿಗಳು ಹೇಳಿದ್ದರು. ಅದಕ್ಕಾಗಿ ಸ್ಟಾಂಪ್ ಶುಲ್ಕವಾಗಿ ಸಾಲದ ಮೊತ್ತದಲ್ಲಿ ಶೇ.1.12 ನೀಡಬೇಕಾಗುತ್ತದೆ ಎಂದು ಹೇಳಿ ರಮೇಶ್ ಅವರನ್ನು ಮಾತುಕತೆಗಾಗಿ 2018 ಡಿ.20ರಂದು ವಿಧಾನಸೌಧದ ಒಂದನೇ ಮಹಡಿಗೆ ಕರೆಸಿಕೊಂಡಿದ್ದರು. ಬಳಿಕ ಎಂ.ಜಿ ರಸ್ತೆಯ ಪಂಚತಾರಾ ಹೊಟೇಲ್​ಗೆ ಕರೆದೊಯ್ದು 100 ರೂ., 50 ರೂ. ಮತ್ತು 20 ರೂ. ಮೌಲ್ಯದ ತಲಾ 5 ಸ್ಟಾ್ಯಂಪ್ ಪೇಪರ್​ಗಳ ಮೇಲೆ ರಮೇಶ್​ರಿಂದ ಸಹಿ ಮಾಡಿಸಿಕೊಂಡಿದ್ದರು. ರಮೇಶ್ ಕಡೆಯಿಂದ ಮರ್ಕೆಂಟೈಲ್ ಬ್ಯಾಂಕ್​ನ 5 ಚೆಕ್​ಗಳು ಮತ್ತು 6 ಭಾವಚಿತ್ರಗಳನ್ನು ಪಡೆದಿದ್ದರು.

ಸಾಲ ಕೊಡುವುದಕ್ಕೆ ಮೊದಲು ಸ್ಟಾಂಪ್ ಡ್ಯೂಟಿ ಶುಲ್ಕವಾಗಿ ನನ್ನ ಮಗನಿಗೆ 1.12 ಕೋಟಿ ರೂ. ಕೊಡಿ ಎಂದು ಕೆ.ಕೆ ಶೆಟ್ಟಿ ಕೇಳಿದರು. ಅದರಂತೆ ಹೊಟೆಲ್​ನ ಪಕ್ಕದಲ್ಲಿರುವ ರ್ಪಾಂಗ್ ಸ್ಥಳದಲ್ಲಿ ಕೆ.ಕೆ ಶೆಟ್ಟಿ ಪುತ್ರ ಅಜಯ್ಗೆ 1.12 ಕೋಟಿ ರೂ. ಕೊಡಲಾಗಿತ್ತು. ಬಳಿಕ ಎಲ್ಲರೂ ಸೇರಿ ಸಾಲದ ಹಣ ತರುವುದಾಗಿ ಹೇಳಿ ಅಲ್ಲಿಂದ ಹೋದವರು ಮರಳಿ ಬರಲಿಲ್ಲ. ಇತ್ತ ತಾವು ಕೊಟ್ಟ 1.12 ಕೋಟಿ ರೂ.ಗಳನ್ನೂ ವಾಪಸ್ ಕೊಡದೆ ವಂಚಿಸಿದ್ದಾರೆ ಎಂದು ಇಂದಿರಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದೇ ಮೊದಲಲ್ಲ

ಸಚಿವ ಪುಟ್ಟರಂಗ ಶೆಟ್ಟಿ ಕಚೇರಿ ಸಿಬ್ಬಂದಿ ಮೋಹನ್, 25.76 ಲಕ್ಷ ರೂ. ಸಾಗಿಸುತ್ತಿದ್ದಾಗ ವಿಧಾನಸೌಧದ ಆವರಣದಲ್ಲೇ ಸೆರೆಸಿಕ್ಕಿದ್ದರು. ಎಫ್​ಡಿಎ ಕೆಲಸದ ಆಮಿಷವೊಡ್ಡಿ ವಂಚಿಸಿದ್ದ ಆರೋಗ್ಯ ಇಲಾಖೆ ಉಪ ಕಾರ್ಯದರ್ಶಿ ರಾಮಚಂದ್ರಯ್ಯ, ಅಬಕಾರಿ ಇಲಾಖೆಯಲ್ಲಿ ಪಿಎಸ್​ಐ ಹುದ್ದೆ ಕೊಡಿಸುವುದಾಗಿ ಮೋಸ ಮಾಡಿದ್ದ ಸಿಎಆರ್ ಪೇದೆ ಗೋವಿಂದರಾಜು ಎಂಬಾತ ನನ್ನು ಪೊಲೀಸರು ಬಂಧಿಸಿದ್ದರು. ಈ ಎಲ್ಲ ಡೀಲ್​ಗಳು ವಿಧಾನಸೌಧದಲ್ಲೇ ನಡೆದಿರುವುದು ದುರದೃಷ್ಟಕರ ಸಂಗತಿ.

ಯಾರ ಹೆಸರಲ್ಲಿ ಡೀಲ್?

ಸಂಸತ್ ಮಾದರಿಯಲ್ಲಿ ವಿಧಾನಸೌಧಕ್ಕೂ ಸೆಕ್ಯುರಿಟಿ ನೀಡಲಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಸಚಿವರು, ಶಾಸಕರ ಹೆಸರುಗಳನ್ನು ಹೇಳಿ ಕೊಂಡು ವಂಚಕರು ವಿಧಾನಸೌಧದ ಒಳಗೆ ಉದ್ಯಮಿಯನ್ನು ಕರೆದೊಯ್ದು ರಾಜಾರೋಷವಾಗಿ ಡೀಲ್ ಕುದುರಿ ಸುತ್ತಿದ್ದಾರೆ. ನಾಲ್ವರು ವಂಚಕರು ಯಾರ ಹೆಸರು ಹೇಳಿಕೊಂಡು ಪಾಸ್ ಪಡೆದು ಒಳಗೆ ಪ್ರವೇಶಿಸಿದ್ದಾರೆ? ಅಲ್ಲಿ ಯಾವ ಸಚಿವರು, ಶಾಸಕರನ್ನು ತೋರಿ ವಂಚನೆ ಗಾಳ ಬೀಸಿದ್ದಾರೆ ಎಂಬುದಕ್ಕೆ ಉತ್ತರ ಸಿಗಬೇಕಿದೆ.

ಶಕ್ತಿಕೇಂದ್ರ ಡೀಲ್ ಸ್ಪಾಟ್

ಸರ್ಕಾರಿ ಕೆಲಸದ ಆಮಿಷ, ಗುತ್ತಿಗೆ, ಫಂಡ್ ಬಿಡುಗಡೆಗೆ ಲಂಚದ ಡೀಲ್​ಗಳು ಈವರೆಗೆ ಹೋಟೆಲ್, ಬಸ್ ನಿಲ್ದಾಣ ಹಾಗೂ ಪಾರ್ಕ್​ಗಳಿಗೆ ಸೀಮಿತವಾಗಿ ನಡೆಯುತ್ತಿದ್ದವು. ಆದರೆ ಇದೀಗ ವಿಧಾನಸೌಧಕ್ಕೇ ಈ ದಂಧೆ ವಿಸ್ತರಿಸಿರುವುದನ್ನು ಈ ಪ್ರಕರಣ ಬೆಳಕಿಗೆ ತಂದಿದೆ.