ಹಳಿಯಾಳ: ಸರ್ಕಾರ ನಿಗದಿಪಡಿಸಿದ ದಿನಾಂಕದಂದೇ ಸಕ್ಕರೆ ಕಾರ್ಖಾನೆ ಪ್ರಸ್ತುತ ವರ್ಷದ ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ ನೀಡಲಿದೆ ಎಂದು ಸ್ಪಷ್ಟಪಡಿಸಿರುವ ಶಾಸಕ ಆರ್.ವಿ. ದೇಶಪಾಂಡೆ ಅವರು ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ರೈತರಿಗೆ ಕಾಮಧೇನುವಾಗಿದೆ ಎಂದು ಕಾರ್ಖಾನೆ ಪರ ಬ್ಯಾಟಿಂಗ್ ಮಾಡಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ಮುಖಂಡರು ತಹಸೀಲ್ದಾರ್ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ನೀಡಿದ ಹೇಳಿಕೆಗಳಿಗೆ ತಿರುಗೇಟು ನೀಡಿದರು.
ಇಐಡಿ ಪ್ಯಾರಿ ಕಾರ್ಖಾನೆಯಿಂದ ರೈತರು ಹಾಗೂ ಕೂಲಿಕಾರರು ಆರ್ಥಿಕವಾಗಿ ಅಭಿವೃದ್ಧಿಯಾಗಿದ್ದಾರೆ. ಇದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ಕಾರ್ಖಾನೆ ಪರವಾಗಿ ತಮ್ಮ ನಿಲುವನ್ನು ಪರೋಕ್ಷವಾಗಿ ಸ್ಪಷ್ಟಪಡಿಸಿದರು.
ಪ್ಯಾರಿ ಕಾರ್ಖಾನೆ ನಿಗದಿತ ಸಮಯಕ್ಕೆ ಆರಂಭವಾಗಲಿರುವ ಕಾರಣ ರೈತರು ಈ ಸಕ್ಕರೆ ಕಾರ್ಖಾನೆಗೆ ಸಹಕರಿಸಬೇಕು. ತಾವು ಬೆಳೆದ ಕಬ್ಬನ್ನು ಇದೇ ಕಾರ್ಖಾನೆಗೆ ಮಾರಾಟ ಮಾಡಬೇಕು ಎಂದು ರೈತ ಸಮುದಾಯಕ್ಕೆ ಕರೆ ನೀಡಿದರು.
ರೈತರು ಸ್ವಇಚ್ಛೆಯಿಂದ ಕಬ್ಬು ಕಟಾವು ಮಾಡಿ ತಮ್ಮ ವಾಹನಗಳ ಮೂಲಕ ಬೇರೆ ಕಾರ್ಖಾನೆಗಳಿಗೆ ಕಬ್ಬು ರವಾನಿಸಬಹುದು. ಆದರೆ, ಬೇರೆ ತಾಲೂಕುಗಳಲ್ಲಿರುವ ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳು ಹಳಿಯಾಳ ತಾಲೂಕಿಗೆ ಆಗಮಿಸಿ ತಮ್ಮ ಕಟಾವು ಮಾಡುವ ಕೆಲಸಗಾರರು ಮತ್ತು ವಾಹನ ಸೌಕರ್ಯ ಒದಗಿಸಿ ಸ್ಥಳೀಯ ರೈತರಿಂದ ಕಬ್ಬು ಪಡೆಯುವುದು ಕಾನೂನು ಬಾಹಿರವಾಗಿದೆ. ಇಂತಹ ದೂರುಗಳು ಕೇಳಿ ಬಂದರೇ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ತಾಲೂಕಿನಲ್ಲಿ ಕೆಲವರು ರೈತ ಮುಖಂಡರು ಎಂದು ಹೇಳಿಕೊಂಡು ಸಭೆಗಳನ್ನು ನಡೆಸುತ್ತಿದ್ದಾರೆ ಎಂದು ರೈತ ಮುಖಂಡರ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದರು. ಈ ಬಗ್ಗೆ ರೈತರು ತಲೆಕೆಡಿಸಿಕೊಳ್ಳದೆ ಇಐಡಿ ಪ್ಯಾರಿಗೆ ಕಬ್ಬು ಪೂರೈಸಬೇಕು ಎಂದು ಮನವಿ ಮಾಡಿದರು.
ರೈತರ ಬೇಡಿಕೆ ಹಾಗೂ ಯಾವುದಾದರೂ ಸಮಸ್ಯೆಗಳಿದ್ದರೆ ಜಿಲ್ಲಾಧಿಕಾರಿ ಪರಿಹರಿಸಬೇಕು ಎಂದು ಅವರು ಸೂಚಿಸಿದರು.
ರಾಜ್ಯದ ಶಿಗ್ಗಾಂವಿ, ಚನ್ನಪಟ್ಟಣ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ಜರುಗುತ್ತಿದ್ದು, ಕಾಂಗ್ರೆಸ್ ಪಕ್ಷದ ಮೂವರು ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಭವಿಷ್ಯ ನುಡಿದರು.