ಅಗತ್ಯವಿರುವೆಡೆ ಹೊಸ ಶಾಖೆ ಆರಂಭಿಸಿ

ಹಾವೇರಿ: ಜಿಲ್ಲೆಯಲ್ಲಿ ಅಗತ್ಯವಿರುವೆಡೆ ಹೊಸ ಬ್ಯಾಂಕ್ ಶಾಖೆಗಳನ್ನು ಶೀಘ್ರವೇ ಆರಂಭಿಸಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಸಂಸದ ಶಿವಕುಮಾರ ಉದಾಸಿ ಸೂಚಿಸಿದರು.

ಜಿ.ಪಂ. ಸಭಾಭವನದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ವತಿಯಿಂದ ಜರುಗಿದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಮಿತಿ ಸಭೆ ಹಾಗೂ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಮುದ್ರಾ ಯೋಜನೆಯಡಿ ಅಧಿಕ ಸಂಖ್ಯೆಯಲ್ಲಿ ಸಾಲಗಳನ್ನು ವಿತರಿಸಬೇಕು ಎಂದೂ ಅಧಿಕಾರಿಗಳಿಗೆ ಸೂಚಿಸಿದರು.

ಶಿವಮೊಗ್ಗ ವಿಜಯಾ ಬ್ಯಾಂಕ್ ಪ್ರಾಂತೀಯ ವ್ಯವಸ್ಥಾಪಕ ಚಿದಾನಂದ ಹೆಗ್ಡೆ ಮಾತನಾಡಿ, ಜಿಲ್ಲೆಯ ಒಟ್ಟು ವಾರ್ಷಿಕ ಗುರಿಯಲ್ಲಿ ಪ್ರತಿಶತ ಶೇ. 40ರಷ್ಟು ಸಾಧನೆಯಾಗಿದೆ. ವಾಣಿಜ್ಯ ಬ್ಯಾಂಕ್​ಗಳು ವಾರ್ಷಿಕ ಗುರಿಯ ಪ್ರತಿಶತ 36ರಷ್ಟು ಸಾಲ ವಿತರಣೆ ಮಾಡಿದ್ದರೆ, ಕೆವಿಜಿ ಬ್ಯಾಂಕ್ ಪ್ರತಿಶತ ಶೇ. 54ರಷ್ಟು, ಕೆಸಿಸಿ ಬ್ಯಾಂಕ್ ಶೇ. 12ರಷ್ಟು ಮತ್ತು ಕೆಎಸ್​ಎಫ್​ಸಿ ಪ್ರತಿಶತ 12ರಷ್ಟು ಸಾಧನೆ ಮಾಡಿದೆ ಎಂದರು.

ತಾಲೂಕುವಾರು ಸಾಧನೆಯಲ್ಲಿ ಹಾನಗಲ್ಲ ಪ್ರಥಮ ಸ್ಥಾನದಲ್ಲಿದ್ದರೆ, ಬ್ಯಾಡಗಿ ದ್ವಿತೀಯ ಸ್ಥಾನದಲ್ಲಿದೆ. ಶಿಗ್ಗಾಂವಿ, ಹಿರೇಕೆರೂರು, ಹಾವೇರಿ, ಸವಣೂರ ಹಾಗೂ ರಾಣೆಬೆನ್ನೂರ ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ ಎಂದರು.

ಸೆಪ್ಟ್ಟಬರ್-2018 ಅಂತ್ಯದ ವೇಳೆಗೆ ಕೆಲ ಇಲಾಖೆಗಳ ಅರ್ಜಿಗಳು ಬಾಕಿ ಉಳಿದಿದ್ದು, ಡಿಸೆಂಬರ್ ಅಂತ್ಯದೊಳಗೆ ಅರ್ಹ ಫಲಾನುಭವಿಗಳಿಗೆ ಸಾಲ ಮಂಜೂರು ಮಾಡಲು ವಿನಂತಿಸಿದರು.

ಸಭೆಯಲ್ಲಿ ನಬಾರ್ಡ್​ನ ಹಾವೇರಿ ಜಿಲ್ಲೆಯ ಸಾಮರ್ಥ್ಯ ಆಧಾರಿತ ಸಾಲ ಯೋಜನೆ 2019-2020 ಮಾಹಿತಿ ಕೈಪಿಡಿಯನ್ನು ಸಂಸದ ಶಿವಕುಮಾರ ಉದಾಸಿ ಬಿಡುಗಡೆಗೊಳಿಸಿದರು.

ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಜಿ.ಪಂ. ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ, ಉಪಾಧ್ಯಕ್ಷೆ ದೀಪಾ ಅತ್ತಿಗೇರಿ, ನಬಾರ್ಡ್ ಅಭಿವೃದ್ಧಿ ವ್ಯವಸ್ಥಾಪಕ ಮಹದೇವ ಕೀರ್ತಿ, ಜಿ.ಪಂ. ಸಿಇಒ ಕೆ. ಲೀಲಾವತಿ, ಉಪಕಾರ್ಯದರ್ಶಿ ಜಿ. ಗೋವಿಂದಸ್ವಾಮಿ, ವಿಜಯ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಎನ್. ಕದರಪ್ಪ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.