ಕುಷ್ಟಗಿ: ಕುಷ್ಟಗಿ-ಯಶವಂತಪುರ ರೈಲು ಸೇವೆ ಆರಂಭಿಸುವಂತೆ ಒತ್ತಾಯಿಸಿ ಕುಷ್ಟಗಿಯ ರೈಲ್ವೆ ಹೋರಾಟ ಸಮಿತಿ ಪದಾಧಿಕಾರಿಗಳು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣಗೆ ಗುರುವಾರ ಮನವಿ ಸಲ್ಲಿಸಿದರು.
ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣದಲ್ಲಿ ಸಚಿವ ವಿ.ಸೋಮಣ್ಣಗೆ ಮನವಿ ಸಲ್ಲಿಸಿದ ಪದಾಧಿಕಾರಿಗಳು, ಕುಷ್ಟಗಿ ಯಶವಂತಪುರ ರೈಲು ಸೇವೆ ಆರಂಭಿಸಬೇಕು ಎನ್ನುವುದು ಬಹುಜನರ ಬೇಡಿಕೆಯಾಗಿದೆ. ಸದ್ಯ ಕುಷ್ಟಗಿಯಿಂದ ಹುಬ್ಬಳ್ಳಿಗೆ ಒಂದು ರೈಲು ಮಾತ್ರ ಸಂಚರಿಸುತ್ತಿದ್ದು, ರೈಲು ಬಂದು ಹೋಗುವ ಮಧ್ಯದ ಸಮಯದಲ್ಲಿ ನಿಲ್ದಾಣ ಬಿಕೋ ಎನ್ನುತ್ತಿರುತ್ತದೆ. ಕುಷ್ಟಗಿ ಯಶವಂತಪುರ ಮಾರ್ಗ ಸೇರಿದಂತೆ ಬೆಂಗಳೂರು-ಹೊಸಪೇಟೆ ಹಾಗೂ ಹರಿಹರ-ಹೊಸಪೇಟೆ ರೈಲು ಸಂಚಾರವನ್ನು ಕುಷ್ಟಗಿ ವರೆಗೆ ವಿಸ್ತರಿಸಿದರೆ ಬೆಂಗಳೂರು ಕಡೆ ತೆರಳುವ ಈ ಭಾಗದ ಜನರಿಗೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.
ಮನವಿಗೆ ಪ್ರತಿಕ್ರಿಯಿಸಿದ ಸಚಿವ ವಿ.ಸೋಮಣ್ಣ, ಕುಷ್ಟಗಿ-ಯಶವಂತಪುರ ರೈಲು ಸಂಚಾರ ಆರಂಭಿಸುವ ವಿಚಾರ ಗಮನದಲ್ಲಿದೆ. ಸದ್ಯ ಪರಿಶೀಲನೆ ಹಂತದಲ್ಲಿದ್ದು 15 ದಿನದೊಳಗಾಗಿ ಕ್ರಮ ಕೈಗೊಳ್ಳಲಾಗುವುದು. ಹರಿಹರ-ಹೊಸಪೇಟೆ ಹಾಗೂ ಬೆಂಗಳೂರು- ಹೊಸಪೇಟೆ ರೈಲು ಸಂಚಾರವನ್ನು ಕುಷ್ಟಗಿ ವರೆಗೆ ವಿಸ್ತರಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ರೈಲ್ವೆ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ವೀರೇಶ ಬಂಗಾರಶೆಟ್ಟರ್, ಪ್ರಮುಖರಾದ ಬಾಬು ಘೋರ್ಪಡೆ, ಮಹಾಂತೇಶ ಮಂಗಳೂರು, ಮಂಜುನಾಥ ಮಹಾಲಿಂಗಪುರ ಇತರರಿದ್ದರು.