More

  ನಕ್ಷತ್ರ ಆಮೆ ಹಿಡಿಯುತ್ತಿದ್ದ ನಾಲ್ವರು ಶ್ರೀರಾಂಪುರ ಠಾಣೆ ಪೊಲೀಸರ ವಶಕ್ಕೆ

  ಹೊಸದುರ್ಗ: ಅಳಿವಿನ ಅಂಚಿಗೆ ತಲುಪಿರುವ ನಕ್ಷತ್ರ ಆಮೆಗಳನ್ನು ಹಿಡಿಯುತ್ತಿದ್ದ ನಾಲ್ವರು ವನ್ಯಜೀವಿ ಬೇಟೆಗಾರರನ್ನು ಪೊಲೀಸರು ತಾಲೂಕಿನ ಮತ್ತೋಡು ಹೋಬಳಿಯ ಕುದುರೆ ಕಣಿವೆ ಅರಣ್ಯ ಪ್ರದೇಶದಲ್ಲಿ ಶನಿವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ.

  ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಶ್ರೀರಾಂಪುರ ಠಾಣೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ 35 ನಕ್ಷತ್ರ ಆಮೆಗಳನ್ನು ರಕ್ಷಿಸಿದ್ದಾರೆ. ಅಕ್ರಮ ಬೇಟೆಯಲ್ಲಿ ತೊಡಗಿದ್ದ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಮೂಲದ ನಾಲ್ವರು ವ್ಯಕ್ತಿಗಳು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ಆರಂಭಿಸಿದ್ದಾರೆ.

  ಘಟನೆ ವಿವರ: ಮತ್ತೋಡು ಹೋಬಳಿ ಚಿಕ್ಕಬ್ಯಾಲದಕೆರೆ ತಪಾಸಣಾ ಕೇಂದ್ರದ ಬಳಿಯ ಕಂಚಿನಗರ ಗ್ರಾಮದ ದೇವರಾಜ್ ಅವರ ತೋಟದ ಬಳಿ ಶನಿವಾರ ಮಧ್ಯಾಹ್ನ 12 ಗಂಟೆಗೆ ಕಾರು ಬಂದು ನಿಂತಿದೆ. ಅದರಲ್ಲಿದ್ದ ಕೆಲವರು ಅರಣ್ಯದೊಳಕ್ಕೆ ತೆರಳಿದ್ದಾರೆ.

  ಅನುಮಾನಾಸ್ಪದವಾಗಿ ಓಡಾಡುತ್ತಿದ್ದವರನ್ನು, ಇಲ್ಲಿ ಯಾವ ಕೆಲಸಕ್ಕೆ ಬಂದಿದ್ದೀರಾ ಎಂದು ಸ್ಥಳೀಯರು ವಿಚಾರಿಸಿದರು. ಪ್ರವಾಸಕ್ಕಾಗಿ ಬಂದಿದ್ದು, ಊಟ ಮಾಡಿ ತೆರಳುತ್ತೇವೆ ಎಂದು ಉತ್ತರಿಸಿದ್ದು, ಸಂಜೆಯಾದರೂ ಹೋಗಿಲ್ಲ. ಕಾಡಿಗೆ ಹೋದವರು ಮರಳಿದ ನಂತರ ಇಲ್ಲಿಂದ ಹೋಗುತ್ತೇವೆ ಎಂದಿದ್ದಾರೆ. ಹೆಚ್ಚಿನ ವಿಚಾರಣೆಗೆ ಮುಂದಾದ ಸ್ಥಳೀಯರನ್ನು ಬೆದರಿಸುವ ಪ್ರಯತ್ನವನ್ನೂ ಮಾಡಿದ್ದಾರೆ.

  ಇದರಿಂದ ಅನುಮಾನಗೊಂಡ ಸ್ಥಳೀಯರು ಶ್ರೀರಾಂಪುರ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ಪೊಲೀಸರು ಬಂದು ವಿಚಾರಣೆ ನಡೆಸಿದಾಗ ನಕ್ಷತ್ರ ಆಮೆಗಳು ಪತ್ತೆಯಾಗಿವೆ. ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದ ನಂತರ ಅಪರಿಚಿತರನ್ನು ವಶಕ್ಕೆ ಪಡೆಯಲಾಗಿದೆ.

  ಸೂಕ್ಷ್ಮ ಪರಿಸರ ವಲಯ
  ತಾಲೂಕಿನ ಮತ್ತೋಡು ಹಾಗೂ ಮಾಡದಕೆರೆ ಹೋಬಳಿಯ ಕುದುರೆಕಣಿವೆ ಅರಣ್ಯ ಪ್ರದೇಶದಲ್ಲಿ ಪರಿಸರ ಹಾಗೂ ವನ್ಯಜೀವಿಗಳ ಸಂಪತ್ತು ಅಡಗಿದ್ದು, ಕೊಂಡುಕುರಿ, ನಕ್ಷತ್ರ ಆಮೆ ಸೇರಿ ಹಲವಾರು ಪ್ರಾಣಿ ಸಂಕುಲಗಳ ವಾಸಸ್ಥಾನವಾಗಿದೆ. ಕಳ್ಳ ಬೇಟೆಗಾರರು ಹಾಗೂ ಈ ಪ್ರದೇಶದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಅವುಗಳಿಗೆ ಮಾರಕವಾಗಿದೆ.

  See also  ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ

  ನಕ್ಷತ್ರ ಆಮೆಯ ವೈಶಿಷ್ಟೃ:
  10 ಇಂಚಿನವರೆಗೂ ಉದ್ದ ಬೆಳೆಯುವ ಈ ಆಮೆಯ ದೇಹದ ಮೇಲೆ ನಕ್ಷತ್ರದ ಆಕಾರದ ಗಾಢವಾದ ಬಣ್ಣದ ವಿನ್ಯಾಸವಿದೆ. ಈ ಆಮೆಯನ್ನು ಮನೆಯಲ್ಲಿ ಸಾಕಿದರೆ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ಇದನ್ನು ಸಾಕುವುದು ಕಾನೂನುಬಾಹಿರವಾಗಿದ್ದು, ಮನೆಯಲ್ಲಿ ಸಾಕಿದರೆ ಹೆಚ್ಚು ದಿನ ಬದುಕುವುದಿಲ್ಲ.

  ಕೆಲವರು ಚಿಪ್ಪು ಮತ್ತು ಮಾಂಸಕ್ಕಾಗಿ ಇದನ್ನು ಬೇಟೆಯಾಡುತ್ತಾರೆ. ಅರಣ್ಯ ಇಲಾಖೆ ಪ್ರಕಾರ ಆಮೆ ಒಂದರ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 55 ರಿಂದ 65 ಲಕ್ಷ ರೂ.ಗಳಿದೆ. ಇನ್ನು ಕಾಳಸಂತೆಯಲ್ಲಿ ಇದೇ ಆಮೆಗೆ 25 ರಿಂದ 35 ಲಕ್ಷ ರೂ.ವರೆಗೆ ಬೆಲೆ ಇದೆ. ಶ್ರೀಮಂತ ವರ್ಗದವರು ದುಬಾರಿ ಬೆಲೆಗೆ ಈ ಆಮೆಯನ್ನು ಖರೀದಿಸುತ್ತಾರೆ.

  ತಾಲೂಕಿನ ಮಾರಿಕಣಿವೆ, ಲಕ್ಕಿಹಳ್ಳಿ ಹಾಗೂ ಕುದುರೆಕಣಿವೆ ಅರಣ್ಯ ಪ್ರದೇಶದಲ್ಲಿ ನಕ್ಷತ್ರ ಆಮೆಗಳು ಹೇರಳವಾಗಿವೆ. ವಿಷ್ಣುವಿಗೆ ಪ್ರಿಯವಾದ ಪ್ರಾಣಿ. ಇವುಗಳನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಿಂದ ಆಮೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಇವುಗಳನ್ನು ಹಿಡಿಯುವುದು, ಮನೆಗಳಲ್ಲಿ ಇಟ್ಟುಕೊಳ್ಳುವುದು ಶಿಕ್ಷಾರ್ಹ ಅಪರಾಧ.
  ಸುನಿಲ್‌ಕುಮಾರ್, ವಲಯ ಅರಣ್ಯಾಧಿಕಾರಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts