
ನವದೆಹಲಿ: ಐಪಿಎಲ್ 13ನೇ ಆವೃತ್ತಿಯನ್ನು ಸೆಪ್ಟೆಂಬರ್ 26ರಿಂದ ನವೆಂಬರ್ 8ರವರೆಗೆ ಆಯೋಜಿಸಲು ಬಿಸಿಸಿಐ ಈಗಾಗಲೆ ಸಂಭಾವ್ಯ ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಂಡಿದೆ. ಆದರೆ ಟೂರ್ನಿಯ ನೇರಪ್ರಸಾರ ಹಕ್ಕು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್ ಚಾನಲ್‌ನಿಂದ ಇದಕ್ಕೆ ಈಗ ಅಸಮಾಧಾನ ವ್ಯಕ್ತವಾಗಿದೆ. ಟೂರ್ನಿಯನ್ನು ಇನ್ನೂ ಒಂದು ವಾರದ ಮಟ್ಟಿಗೆ ವಿಸ್ತರಣೆ ಮಾಡಿದರೆ, ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚಿನ ಜಾಹೀರಾತುಗಳನ್ನು ಬಾಚಿಕೊಳ್ಳಬಹುದು ಎಂಬುದು ಸ್ಟಾರ್ ಇಂಡಿಯಾ ಕಂಪನಿಯ ಲೆಕ್ಕಾಚಾರವಾಗಿದೆ.
ಟೂರ್ನಿಯನ್ನು ನವೆಂಬರ್ 14ರವರೆಗೆ ವಿಸ್ತರಿಸಿದರೆ ದೀಪಾವಳಿ ಹಬ್ಬದ ಸಂಭ್ರಮವೂ ಸಿಗಲಿದೆ. ಅಲ್ಲದೆ, ಬಿಸಿಸಿಐ 44 ದಿನಗಳ ಅವಧಿಯಲ್ಲಿ 60 ಪಂದ್ಯಗಳನ್ನು ಆಯೋಜಿಸಲು ಸಿದ್ಧವಾಗಿದೆ. ಇದರಲ್ಲಿ ಸಂಜೆ 4 ಗಂಟೆಗೆ ನಡೆಯುವ ಪಂದ್ಯಗಳು ಹೆಚ್ಚಿವೆ. ಇದು ಹೆಚ್ಚಿನ ವೀಕ್ಷಕರು ಮತ್ತು ಜಾಹೀರಾತುದಾರರನ್ನು ಸೆಳೆಯಲು ಅಡ್ಡಿಯಾಗುತ್ತದೆ ಎಂಬುದು ಸ್ಟಾರ್ ಸ್ಪೋರ್ಟ್ಸ್ ಮಾತ್ರವಲ್ಲದೆ ಫ್ರಾಂಚೈಸಿಗಳ ಅಸಮಾಧಾನಕ್ಕೂ ಕಾರಣವಾಗಿದೆ.
ಇದನ್ನೂ ಓದಿ: ವಿಂಡೀಸ್, ಪಾಕಿಸ್ತಾನದ ಬಳಿಕ ಇಂಗ್ಲೆಂಡ್ ಪ್ರವಾಸಕ್ಕೆ ಸಜ್ಜಾದ ಆಸ್ಟ್ರೇಲಿಯಾ
ಭಾರತ ತಂಡ ಡಿಸೆಂಬರ್ 3ರಿಂದ ಆಸ್ಟ್ರೇಲಿಯಾದಲ್ಲಿ 4 ಟೆಸ್ಟ್ ಪಂದ್ಯಗಳ ಸರಣಿ ಆಡುವ ವೇಳಾಪಟ್ಟಿ ಈಗಾಗಲೆ ಅಂತಿಮಗೊಂಡಿದೆ. ಹೀಗಾಗಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಸಿದ್ಧತೆ ನಡೆಸಲು, ಐಪಿಎಲ್ ಟೂರ್ನಿಯನ್ನು ಬೇಗನೆ ಮುಗಿಸಬೇಕಾಗುತ್ತದೆ. ಸ್ಟಾರ್ ಸ್ಪೋರ್ಟ್ಸ್, ಫ್ರಾಂಚೈಸಿಗಳ ಅಸಮಾಧಾನದಿಂದಾಗಿ ಈಗ ಬಿಸಿಸಿಐ ಇಕ್ಕಟ್ಟಿಗೆ ಸಿಲುಕಿಸಿದೆ.
ನವೆಂಬರ್ 8ರಂದು ಐಪಿಎಲ್ ಮುಗಿದರೆ, ಭಾರತ ತಂಡ ನವೆಂಬರ್ 10ರಂದೇ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಬಹುದಾಗಿದೆ. ಇದರಿಂದ ಅಲ್ಲಿ ಟೆಸ್ಟ್ ಸರಣಿಗೆ ಮುನ್ನ ಕ್ವಾರಂಟೈನ್ ಮತ್ತು ಅಭ್ಯಾಸ ಪಂದ್ಯವನ್ನು ಆಡಲು ಸಮಯಾವಕಾಶ ಸಿಗಲಿದೆ. ಐಪಿಎಲ್ ಆಡಳಿತ ಮಂಡಳಿ ಇನ್ನೂ ಸಭೆ ಸೇರಿಲ್ಲ. ಹೀಗಾಗಿ ಈ ಸಭೆ ನಡೆಯುವವರೆಗೂ ವೇಳಾಪಟ್ಟಿ ಅಂತಿಮವಾಗುವುದಿಲ್ಲ. ಸ್ಟಾರ್ ಸ್ಪೋರ್ಟ್ಸ್ ವಾಹಿನಿ 2018ರಲ್ಲಿ 5 ವರ್ಷಗಳಿಗೆ 16,347 ಕೋಟಿ ರೂ. ಮೊತ್ತಕ್ಕೆ ಐಪಿಎಲ್ ಪ್ರಸಾರ ಹಕ್ಕು ಪಡೆದುಕೊಂಡಿತ್ತು. ಇದರನ್ವಯ ಪ್ರತಿ ವರ್ಷ 3,500ರಿಂದ 4000 ಕೋಟಿ ರೂ. ಪಾವತಿಸುತ್ತದೆ.
ದೀಪಾವಳಿಗೆ ಬಾರ್ಕ್ ರೇಟಿಂಗ್ ಇಲ್ಲ
ಮತ್ತೊಂದು ವರದಿಯ ಪ್ರಕಾರ ಬಿಸಿಸಿಐ ಬೇಕೆಂದೇ ದೀಪಾವಳಿ ಸಮಯದಲ್ಲಿ ಐಪಿಎಲ್ ಪಂದ್ಯ ಆಯೋಜಿಸುವುದನ್ನು ತಪ್ಪಿಸಿದೆ. ಕಳೆದ ಕೆಲ ವರ್ಷಗಳಲ್ಲಿ ದೀಪಾವಳಿ ಸಮಯದಲ್ಲಿ ಹೆಚ್ಚಿನ ಬಾರ್ಕ್ (ಬ್ರಾಡ್‌ಕಾಸ್ಟ್ ಆಡಿಯೆನ್ಸ್ ರಿಸರ್ಚ್ ಕೌನ್ಸಿಲ್) ರೇಟಿಂಗ್ ಸಿಕ್ಕಿಲ್ಲ. ಹೀಗಾಗಿ ಕಳೆದ ಕಳೆದ ವರ್ಷ ಭಾರತ ತಂಡಕ್ಕೆ ದೀಪಾವಳಿ ಸಮಯದಲ್ಲಿ ಕುಟುಂಬದೊಂದಿಗೆ ಸಮಯ ಕಳೆಯಲು ವಿಶ್ರಾಂತಿ ನೀಡಲಾಗಿತ್ತು. ಈ ಬಗ್ಗೆ ಸ್ಟಾರ್ ಸ್ಪೋರ್ಟ್ಸ್‌ಗೂ ಮನವರಿಕೆ ಮಾಡುವೆವು ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.