ರಾಹುಲ್​​ ಮುಂದಿನ ಪಿಎಂ ಅಭ್ಯರ್ಥಿ ಎಂಬುದು ಸ್ಟಾಲಿನ್​ ಅಭಿಪ್ರಾಯವಷ್ಟೇ : ಅಖಿಲೇಶ್​ ಯಾದವ್​

ಲಖನೌ: ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಅವರೇ ಮುಂದಿನ ಪ್ರಧಾನಿ ಅಭ್ಯರ್ಥಿ ಎಂಬ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್​ ಪ್ರಸ್ತಾಪವನ್ನು ವಿಪಕ್ಷಗಳು ಒಪ್ಪುವುದಿಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್​ ಯಾದವ್​ ಅವರು ತಿಳಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸ್ಟಾಲಿನ್​ ಅವರು ವ್ಯಕ್ತಪಡಿಸಿದ ಅಭಿಪ್ರಾಯ ಮೈತ್ರಿ ಪಕ್ಷಗಳ ಅಭಿಪ್ರಾಯವಲ್ಲ ಎಂದು ಹೇಳಿದರು.

ದೇಶದ ಜನರು ಬಿಜೆಪಿ ಆಡಳಿತದಿಂದ ಅಂಸತೃಪ್ತಿಗೊಂಡಿದ್ದಾರೆ. ಹೀಗಾಗಿ ಕಾಂಗ್ರೆಸ್​ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಷ್ಟ್ರೀಯ ಕಾಂಗ್ರೆಸ್​ ಪಕ್ಷದ ನಾಯಕ ಶರದ್​ ಪವಾರ್​ ಹಾಗೂ ಇತರರು ಎಲ್ಲ ನಾಯಕರನ್ನು ಒಟ್ಟುಗೂಡಿಸಿ ಲೋಕಸಭಾ ಚುನಾವಣೆಯನ್ನು ಎದುರಿಸಬೇಕು ಅಂದುಕೊಂಡಿದ್ದೇವೆ. ಯಾರೋ ಒಬ್ಬ ಪ್ರಧಾನಿ ಅಭ್ಯರ್ಥಿ ಕುರಿತು ತಮ್ಮ ಅಭಿಪ್ರಾಯ ನೀಡಿದರೆ, ಎಲ್ಲಾ ಮೈತ್ರಿ ಪಕ್ಷಗಳು ಒಂದೇ ಅಭಿಪ್ರಾಯವನ್ನು ಹೊಂದಬೇಕೆಂಬ ಅನಿವಾರ್ಯತೆ ಇಲ್ಲ ಎಂದು ಯಾದವ್​ ತಿಳಿಸಿದ್ದಾರೆ.

ನಿನ್ನೆಯಷ್ಟೇ ಸ್ಟಾಲಿನ್​ ಅವರ ಅಭಿಪ್ರಾಯವನ್ನು ಮಮತಾ ಬ್ಯಾನರ್ಜಿಯವರು ನಿರಾಕರಿಸಿದ್ದರು. ಇದರ ಬೆನ್ನಲ್ಲೆ ಅಖಿಲೇಶ್​ ಯಾದವ್​ ಕೂಡ ನಿರಾಕರಿಸಿರುವುದು ರಾಹುಲ್​ ಆಸೆಗೆ ಕೊಂಚ ಹಿನ್ನಡೆಯಾಗಿದೆ ಎಂದು ರಾಜಕೀಯ ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ.

ಡಿಸೆಂಬರ್​ 16ರಂದು ಚೆನ್ನೈನಲ್ಲಿ ನಡೆದ ಧೀಮಂತ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ಎಂ. ಕರುಣಾನಿಧಿ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಟಾಲಿನ್​ ಮುಂದಿನ ಪ್ರಧಾನಿ ಅಭ್ಯರ್ಥಿ ರಾಹುಲ್​ ಗಾಂಧಿ ಎಂದು ಪ್ರಸ್ತಾಪಿಸಿದ್ದರು. (ಏಜೆನ್ಸೀಸ್​)