ಕರುಣಾನಿಧಿ ಅವರ ಕಡೆ ಆಸೆ ಈಡೇರದೇ ಇದ್ದಿದ್ದರೆ ನಾನೂ ಕೂಡ ಅವರೊಂದಿಗೆ ಮಣ್ಣಾಗುತ್ತಿದೆ

ಚೆನ್ನೈ: ಕರುಣಾನಿಧಿ ಅವರ ಕಡೆ ಆಸೆ ಈಡೇರಿಸುವಂತೆ (ಚೆನ್ನೈನ ಮರಿನಾ ಬೀಚ್​ನಲ್ಲಿ ಕರುಣಾನಿಧಿ ಅವರನ್ನು ಸಮಾಧಿ ಮಾಡಲು ಅವಕಾಶ ನೀಡುವಂತೆ) ನಾನು ಮುಖ್ಯಮಂತ್ರಿ ಪಳನಿಸ್ವಾಮಿ ಅವರ ಕೈ ಹಿಡಿದು ಬೇಡಿಕೊಂಡಿದ್ದೆ. ಆದರೆ ಅವರು ಒಪ್ಪಲಿಲ್ಲ. ಕಡೆಗೆ ನ್ಯಾಯವಾದಿಗಳ ಹೋರಾಟದಿಂದ ಮರಿನಾ ಬೀಚ್​ನಲ್ಲಿ ಅವಕಾಶ ಸಿಕ್ಕಿತ್ತು. ಒಂದು ವೇಳೆ ಅವರ ಕಡೆ ಆಸೆ ಈಡೇರದೇ ಹೋಗಿದ್ದರೆ ನಾನೂ ಕೂಡ ನಮ್ಮ ನಾಯಕನ ಜತೆ ಮಣ್ಣಾಗುತ್ತಿದೆ ಎಂದು ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ ಸ್ಟಾಲಿನ್​ ಹೇಳಿದ್ದಾರೆ.

ಕರುಣಾನಿಧಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಮಂಗಳವಾರ ಚೆನ್ನೈನ ಪಕ್ಷದ ಕಚೇರಿಯಲ್ಲಿ ಕರೆಯಲಾಗಿದ್ದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿರುವ ಅವರು, ಕರುಣಾನಿಧಿ ಅವರ ಅಗಲಿಕೆಯ ಬಗ್ಗೆ ಅತೀವ ದುಃಖ ವ್ಯಕ್ತಪಡಿಸಿದರು. ಅಲ್ಲದೆ, ಸಮಾಧಿ ಸ್ಥಳದ ವಿಚಾರವಾಗಿ ಎದುರಾದ ಹೋರಾಟದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

” ಡಿಎಂಕೆ ಪಕ್ಷದ ನಾಯಕನನ್ನು ಕಳೆದುಕೊಂಡಿದೆ. ಆದರೆ, ನಾನು ನನ್ನ ನಾಯಕನ ಜತೆಗೆ ನನ್ನ ಒಡನಾಡಿ ಮತ್ತು ತಂದೆಯನ್ನು ಕಳೆದುಕೊಂಡಿದ್ದೇನೆ,” ಎಂದು ನೋವು ವ್ಯಕ್ತಪಡಿಸಿದರು.

” ಚೆನ್ನೈನ ಮರಿನಾ ಬೀಚ್​ನಲ್ಲಿ ಚಿರಶಾಂತಿ ಪಡೆಯಲು ಕಲೈಗ್ನರ್​ ಬಯಸಿದ್ದರು. ಹೀಗಾಗಿ ಕರುಣಾನಿಧಿ ಅವರನ್ನು ಸಮಾಧಿ ಮಾಡಲು ಅವರ ಕೊನೆ ಆಸೆಯಂತೆ ಮರಿನಾ ಬೀಚ್​ನಲ್ಲಿಯೇ ಅವಕಾಶ ನೀಡುವಂತೆ ನಾನು ಮುಖ್ಯಮಂತ್ರಿ ಪಳನಿಸ್ವಾಮಿ ಅವರನ್ನು ಕೈ ಹಿಡಿದು ಮನವಿ ಮಾಡಿದ್ದೆ. ಆದರೆ, ಅವರ ಸರ್ಕಾರ ನಿರಾರಕಣೆ ಮಾಡಿತು. ಜಾಗದ ವಿಚಾರವಾಗಿ ನ್ಯಾಯಾಂಗ ಹೋರಾಟ ಆರಂಭವಾಯಿತು. ಆ ಹೋರಾಟದಲ್ಲಿ ನಮ್ಮ ನ್ಯಾಯವಾದಿಗಳಿಂದಲೇ ನಮಗೆ ಜಯ ಸಿಕ್ಕಿತ್ತು. ಈ ಜಯವನ್ನು ನಾನು ನಮ್ಮ ನ್ಯಾಯವಾದಿಗಳಿಗೇ ಅರ್ಪಿಸುತ್ತೇನೆ. ಒಂದು ವೇಳೆ ನಮಗೆ ಜಯ ಸಿಗದೇ ಹೋಗಿದ್ದರೆ, ನಮ್ಮ ನಾಯಕನ ಜೊತೆ ಮಣ್ಣಾಗುತ್ತಿದ್ದವರಲ್ಲಿ ನಾನೂ ಕೂಡ ಒಬ್ಬನಾಗಿರುತ್ತಿದ್ದೆ. ಇನ್ನು ಮುಂದೆ ಪಕ್ಷದ ಕಾರ್ಯಕರ್ತರು ಕರುಣಾನಿಧಿ ಅವರ ಆಶಯಗಳಿಗಾಗಿ ಹೋರಾಡಬೇಕಿದೆ” ಎಂದು ಹೇಳಿಕೊಂಡಿದ್ದಾರೆ.

ಈ ನಡುವೆ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ತಮ್ಮನ್ನು ಮುನ್ನಡೆಸುವಂತೆ ಎಂ.ಕೆ ಸ್ಟಾಲಿನ್​ ಅವರನ್ನು ವಿನಂತಿಸಿಕೊಂಡಿದ್ದಾರೆ.
” ಸ್ಟಾಲಿನ್​ ಅವರಲ್ಲಿ ನಾವು ಕರುಣಾನಿಧಿ ಅವರನ್ನು ಕಾಣ ಬಯಸುತ್ತೇವೆ. ಪಕ್ಷ ಮತ್ತು ತಮಿಳುನಾಡು ಸ್ಟಾಲಿನ್​ ಅವರ ಹಿಂದೆ ಇದೆ. ಪಕ್ಷ ಸೇನಾನಿಯನ್ನು ಕಳೆದುಕೊಂಡಿದೆ. ಆದರೆ ಅವರ ನಂತರ ಯಾರು ಎಂದು ಹೇಳಲು ಯಾರಿಗೂ ಸಾಧ್ಯವಿಲ್ಲವಾದರೂ, ಸ್ಟಾಲಿನ್​ ಅವರಲ್ಲಿ ನಮ್ಮನ್ನು ಮುನ್ನಡೆಸುವ ಗುಣ ಹೊಂದಿದ್ದಾರೆ,” ಎಂದು ಹಲವು ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.