ನಾಡಾ ಆರೋಗ್ಯ ಕೇಂದ್ರದಲ್ಲಿ ಕಾಡುತ್ತಿದೆ ಸಿಬ್ಬಂದಿ ಕೊರತೆ

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

ಬೈಂದೂರು ತಾಲೂಕು ನಾಡಾ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆ, ಲ್ಯಾಬ್, ಬೆಡ್, ಔಷಧ ಎಲ್ಲವೂ ಇದೆ. ಆದರೆ ಸಿಬ್ಬಂದಿ ಕೊರತೆಯಿಂದ ಆಸ್ಪತ್ರೆಗೆ ಅನಾರೋಗ್ಯ ಕಾಡುತ್ತಿದೆ.

1978ರಲ್ಲಿ ನಾಡಾ ಗ್ರಾಪಂನಲ್ಲಿ ಆರಂವಾದ ಆರು ಹಾಸಿಗೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಅವಸಾನದ ಅಂಚಿಗೆ ತಲುಪಿದೆ. 17 ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕಾದ ಆರೋಗ್ಯ ಕೇಂದ್ರದಲ್ಲಿ 9 ಜನ ಇದ್ದು, ಅದರಲ್ಲೂ ಮೂವರು ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಲ್ಯಾಬೊರೇಟರಿ ಟೆಕ್ನೀಶಿಯನ್ ಆಗಿ ಒಬ್ಬರು ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಸಿರ್ವಹಿಸುತ್ತಿದ್ದರೆ, ಔಷಧ ವಿತರಕ ಹುದ್ದೆ ಖಾಲಿ!
ಗ್ರೂಪ್ ‘ಡಿ’ಯಲ್ಲಿ ಎರಡು ಹುದ್ದೆ ಇದ್ದು, ಒಬ್ಬರು ಕಾರ್ಯನಿರ್ವಹಿಸುತ್ತಿದ್ದರೆ ಇನ್ನೊಬ್ಬರು ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗುಮಾಸ್ತ ಹುದ್ದೆ ಖಾಲಿ ಇದ್ದು, ಮರವಂತೆ ಆರೋಗ್ಯ ಸಹಾಯಕರು ವಾರಕ್ಕೊಮ್ಮೆ ಬಂದು ಕರ್ತವ್ಯ ನಿರ್ವಹಿಸುತ್ತಾರೆ. ಓರ್ವ ಮಹಿಳಾ ವೈದ್ಯೆ ಸೇರಿದಂತೆ ಅನೇಕ ಹುದ್ದೆಗಳು ಖಾಲಿಯಾಗಿದ್ದರೂ, ಇದುವರೆಗೂ ಇಲಾಖೆ ಖಾಲಿ ಹುದ್ದೆ ಭರ್ತಿ ಮಾಡುವ ಗೋಜಿಗೆ ಹೋಗಿಲ್ಲ.
ನಾಡಾ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ನಾಡಾ, ಹಡವು, ಪಡುಕೋಣೆ, ಕಡ್ಕೆ, ಸೇನಾಪುರ, ಕೋಣ್ಕಿ, ಬಡಾಕೆರೆ ಮೊದಲಾದ ಗ್ರಾಮೀಣ ಭಾಗದ ಜನರಿಗೆ ಬೆಳಗ್ಗೆಯಿಂದ ಸಂಜೆವರೆಗೆ ಉತ್ತಮ ಸೇವೆ ಒದಗಿಸುತ್ತಿದ್ದು, ದಿನನಿತ್ಯ ನೂರಾರು ಸಂಖ್ಯೆಯಲ್ಲಿ ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ.

ವೈದ್ಯರೆಂದರೆ ಅಚ್ಚುಮೆಚ್ಚು: 11 ವರ್ಷಗಳಿಂದ ನಾಡಾ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಸಲ್ಲಿಸುತ್ತಿರುವ ಡಾ.ಚಿಕ್ಮರಿ ರೋಗಿಗಳ ನೆಚ್ಚಿನ ವೈದ್ಯ. 2012ರಿಂದ ಇಬ್ಬರು ವೈದ್ಯರ ಕೆಲಸವನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ಏಳು ವರ್ಷದಿಂದ ಅವರು ಮಾಡಿದ ರಜೆ ಕೇವಲ ಐದು! ಖಾಸಗಿ ಕೆಲಸಕ್ಕಾಗಿ 3-4 ದಿನ ರಜೆಗೆ ತೆರಳಿದರೆ ರೋಗಿಗಳಿಗೆ ಸಮಸ್ಯೆಯಾಗದಂತೆ ಹತ್ತಿರದಲ್ಲಿರುವ ಆರೋಗ್ಯ ಕೇಂದ್ರದ ವೈದ್ಯರನ್ನು ನಿಯೋಜಿಸಿ ತೆರಳುವ ಡಾ.ಚಿಕ್ಮರಿ ಅವರನ್ನು ಜನ ಶ್ಲಾಘಿಸುತ್ತಿದ್ದಾರೆ.

ಬೇಡಿಕೆಗೆ ಸಿಕ್ಕಿಲ್ಲ ಸ್ಪಂದನೆ: ಹೊಸ ಕಟ್ಟಡ ಬೇಡಿಕೆ ಹಾಗೂ ಸಿಬ್ಬಂದಿ ನೇಮಕ ಮಾಡುವಂತೆ ನಾಡಾ ಗ್ರಾಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಂಡಿಸಿ, ಆರೋಗ್ಯ ಇಲಾಖೆ ಹಾಗೂ ಸಂಬಂಧಪಟ್ಟವರಿಗೆ ಕಳುಹಿಸಿಕೊಟ್ಟಿದ್ದರೂ ಪ್ರಯೋಜನವಾಗಿಲ್ಲ. ಇನ್ನು ವೈದ್ಯರ ಕಟ್ಟಡದ ಮುಂದೆ ಕಟ್ಟಿದ ಮಾಡಿನ ತಗಡು ಸರಿದು ಅಸಹ್ಯ ಹುಟ್ಟಿಸುತ್ತದೆ. ಪ್ರಸಕ್ತ ಕಟ್ಟಡದಲ್ಲಿ ಮಹಿಳಾ ಸಿಬ್ಬಂದಿ ವಾಸ ಮಾಡುತ್ತಿದ್ದಾರೆ.

ಗ್ರಾಮೀಣ ಭಾಗದ ಜನರಿಗೆ ಉತ್ತಮ ಸೇವೆ ಒದಗಿಸುತ್ತಿರುವ ನಾಡಾ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಜಿಲ್ಲಾಡಳಿತ ಸಂಪೂರ್ಣ ನಿರ್ಲಕ್ಷಿಸಿದೆ. ನಾಡಾ ಗ್ರಾಪಂ ಹಾಗೂ ಸಾರ್ವಜನಿಕರು ಸಿಬ್ಬಂದಿ ನೇಮಿಸಲು ಒತ್ತಾಯ ಮಾಡಿದರೂ, ಆರೋಗ್ಯ ಇಲಾಖೆ ನಿರ್ಲಕ್ಷಿಸಿದೆ. ಇಲ್ಲಿನ ವೈದ್ಯರು ಸಾರ್ವಜನಿಕರ ಜತೆ ಉತ್ತಮ ಸಂಬಂಧವಿಟ್ಟುಕೊಂಡಿದ್ದು, ಗುಣಮಟ್ಟದ ಚಿಕಿತ್ಸೆ ನೀಡುತ್ತಿರುವುದು ಇಲ್ಲಗಳ ನಡುವೆಯೂ ಸಮಾಧಾನದ ಸಂಗತಿ.
|ಟಿ.ಪಿ.ಮಂಜುನಾಥ್, ಸಾಮಾಜಿಕ ಕಾರ‌್ಯಕರ್ತ, ಪಡುಕೋಣೆ.

ಆರೋಗ್ಯ ಕೇಂದ್ರ ಸಿಬ್ಬಂದಿ ಕೊರತೆ ಮಧ್ಯೆಯೂ ಪ್ರತಿದಿನ ನೂರಾರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದು ವೈದ್ಯರ ಬದ್ಧತೆಗೆ ಹಿಡಿದ ಕನ್ನಡಿ. ಜನರಿಗೆ ಇನ್ನೂ ಹೆಚ್ಚಿನ ಸೌಲಭ್ಯ ಸಿಗಬೇಕು ಎಂದು ಕೊರತೆಯಿರುವ ಸಿಬ್ಬಂದಿ, ಕಟ್ಟಡ ಕುರಿತು ಗ್ರಾಪಂ ನಿರ್ಣಯ ಮಾಡಿ ಬೇಡಿಕೆ ಸಲ್ಲಿಸಿದೆ. ಆರೋಗ್ಯ ಇಲಾಖೆ ತಕ್ಷಣ ಕೊರತೆ ಸಿಬ್ಬಂದಿ, ಮತ್ತೊಬ್ಬರು ಮಹಿಳಾ ವೈದ್ಯರ ನೇಮಕ ಮಾಡಬೇಕು.
|ಸಂದೀಪ್ ಪೂಜಾರಿ, ಗ್ರಾಪಂ ಸದಸ್ಯ, ಸೇನಾಪುರ ನಾಡಾ

ನಾಡಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಐದು ಉಪಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಐದು ಉಪಕೇಂದ್ರಗಳಲ್ಲಿ ಮೂರು ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದು, ಎರಡು ಹುದ್ದೆ ಖಾಲಿ ಇದೆ. ಇನ್ನು ಐದು ಉಪಕೇಂದ್ರಗಳಿಗೂ ಕಟ್ಟಡ ಇಲ್ಲದಿರುವುದರಿಂದ ಹೆಚ್ಚಿನ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ. ನಾಡಾ ಆರೋಗ್ಯ ಕೇಂದ್ರದಲ್ಲಿ ಪ್ರತಿನಿತ್ಯ 80ರಿಂದ 100 ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ಕಟ್ಟಡ ಸೌಲಭ್ಯ ಹಾಗೂ ಸಿಬ್ಬಂದಿ ನಿಯೋಜಿಸಿದರೆ ಇನ್ನೂ ಹೆಚ್ಚಿನ ಸೇವೆ ನೀಡಬಹುದು.
|ಡಾ.ಚಿಕ್ಕಮರಿ, ವೈದ್ಯಾಧಿಕಾರಿ, ನಾಡಾ ಪ್ರಾಥಮಿಕ ಆರೋಗ್ಯ ಕೇಂದ್ರ