ಉಡುಪಿ ನಗರಸಭೆಯಲ್ಲಿ ಸಿಬ್ಬಂದಿ ಕೊರತೆ

ಗೋಪಾಲಕೃಷ್ಣ ಪಾದೂರು ಉಡುಪಿ

ನಗರಸಭೆ ಚುನಾವಣೆ ನಡೆದು 5 ತಿಂಗಳು ಕಳೆದಿದ್ದರೂ ಮೀಸಲಾತಿ ಗೊಂದಲದಿಂದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಕಗ್ಗಂಟಾಗಿದೆ. ಇದೀಗ ನಗರಸಭೆಯಲ್ಲಿ ಅಧಿಕಾರಿಗಳೇ ಆಡಳಿತ ನಡೆಸುತ್ತಿದ್ದು, ಸಿಬ್ಬಂದಿ ಕೊರತೆಯಿಂದ ಹೈರಾಣಾಗಿದ್ದಾರೆ.

ರಾಜ್ಯ ಸರ್ಕಾರ 1995ರಲ್ಲಿ ಪುರಸಭೆಯನ್ನು ನಗರಸಭೆಯನ್ನಾಗಿ ಘೋಷಿಸಿದ್ದರೂ ಪೂರ್ಣಪ್ರಮಾಣದಲ್ಲಿ ಸಿಬ್ಬಂದಿ ನೇಮಕವಾಗದೆ ದೈನಂದಿನ ಕೆಲಸಗಳಿಗೆ ಪರದಾಡುವಂತಾಗಿದೆ.

289 ಸ್ಥಾನ ಖಾಲಿ: ನಗರಸಭೆಯ 418 ಹುದ್ದೆಗಳ ಪೈಕಿ ಕೇವಲ 129 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಅದರಲ್ಲಿ 4 ಅಧಿಕಾರಿಗಳು ಹೆಚ್ಚುವರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಳಿದ 289 ಸ್ಥಾನಗಳು ಖಾಲಿ ಉಳಿದಿವೆ. ಇದರಲ್ಲಿ ಕೆಲ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ 55 ಸಿಬ್ಬಂದಿಯನ್ನು ಭರ್ತಿ ಮಾಡಿ ಕಾರ್ಯನಿರ್ವಹಿಸಲಾಗುತ್ತಿದೆ. ಉಡುಪಿ ನಗರ ದಿನೇದಿನೇ ಬೆಳೆಯುತ್ತಿದ್ದು, 35 ವಾರ್ಡ್‌ಗಳ ಕೆಲಸವನ್ನು ಅರ್ಧಕ್ಕಿಂತ ಕಡಿಮೆ ಇರುವ ಸಿಬ್ಬಂದಿ ನಿರ್ವಹಿಸುತ್ತಿರುವುದರಿಂದ ಕೆಲಸದ ಒತ್ತಡ ಹೆಚ್ಚುತ್ತಿದೆ. ನಗರ ವ್ಯಾಪ್ತಿಯ ನಿವೇಶನ, ಮನೆ ಮಾರಾಟ, ಖರೀದಿ ಪ್ರಕ್ರಿಯೆ ನಡೆಸುವುದೇ ಕಷ್ಟಕರವಾಗಿದೆ. ಸಾರ್ವಜನಿಕರು ತಮ್ಮ ಸಣ್ಣಪುಟ್ಟ ಕೆಲಸಗಳಿಗೂ ವಾರಗಟ್ಟಲೆ ಕಾಯಬೇಕಾಗಿದೆ.

ಖಾಲಿ ಹುದ್ದೆ: ಹಿರಿಯ ಪ್ರೋಗ್ರಾಮರ್ -1, ಕಿರಿಯ ಸಹಾಯಕ ಇಂಜಿನಿಯರ್ -1, ಸ್ಟೆನೋಗ್ರಾಫರ್ -2, ಕಂದಾಯ ನಿರೀಕ್ಷಕರು -2, ಅಸಿಸ್ಟೆಂಟ್ -3, ನೀರು ಸರಬರಾಜು ನಿರ್ವಹಕ-8, ಡಾಟಾ ಆಪರೇಟರ್ -4, ಸಹಾಯಕ ಆರೋಗ್ಯಾಧಿಕಾರಿ -2, ಇಲೆಕ್ಟ್ರಿಷಿಯನ್ ಗ್ರೇಡ್ -1, ಸಮುದಾಯ ಸಂಘಟಕ- 1, ಎರಡನೇ ದರ್ಜೆ ಸಹಾಯಕರು- 7, ಬಿಲ್ ಸಂಗ್ರಹಕರು- 4, ವಾಹನ ಚಾಲಕರು -10, ಇಲೆಕ್ಟ್ರಿಷಿಯನ್ ಗ್ರೇಡ್ ॥ 1 ನೀರು ಗಂಟಿಗಳು -6, ಪ್ರಯೋಗಾಲಯ ತಂತ್ರಜ್ಞ – 1, ನೈರ್ಮಲ್ಯ ಮೇಲ್ವಿಚಾರಕರು -7, ಪ್ಲಂಬರ್- 1, ತೋಟದ ಮೇಲೆ ಉಸ್ತುವಾರಿ 1, ವಾಲ್ ಮ್ಯಾನ್ -2, ಲೋಡರ್ -15, ಕ್ಲಿನರ್ -6, ತೋಟ ಸಹಾಯಕ-3, ಹೆಲ್ಪರ್ -44, ಪೌರ ಕಾರ್ಮಿಕರು -156 ಸೇರಿದಂತೆ ಒಟ್ಟು 289 ಹುದ್ದೆಗಳು ಖಾಲಿ ಇವೆ. ದಿನಕೂಲಿ ಆಧಾರದ ಮೇಲೆ ನೇಮಕಗೊಂಡ ಪೌರಕಾರ್ಮಿಕರು-118, ಹೊರ ಗುತ್ತಿಗೆ ಆಧಾರದ ಮೇಲೆ ಕುಡಿಯುವ ನೀರಿನ ವಿಭಾಗಕ್ಕೆ ನೇಮಕಗೊಂಡ ಸಿಬ್ಬಂದಿ-22.

ನಗರಸಭೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಜನರಿಗೆ ಸೇವೆಗಳು ಸಕಾಲದಲ್ಲಿ ದೊರಕುತ್ತಿಲ್ಲ. ಕೆಲ ವಾರ್ಡ್‌ಗಳಲ್ಲಿ ಹಿಂದೆ ವಾರಕ್ಕೊಮ್ಮೆ ಬರುತ್ತಿದ್ದ ಸ್ವಚ್ಛತಾ ಸಿಬ್ಬಂದಿ 15 ದಿನಕ್ಕೊಮ್ಮೆ, ತಿಂಗಳಿಗೊಮ್ಮೆ ಬರುತ್ತಿದ್ದಾರೆ.
|ಮಂಜುನಾಥ ಮಣಿಪಾಲ, ಚುನಾಯಿತ ನಗರಸಭೆ ಸದಸ್ಯ