ಗಂಗೊಳ್ಳಿ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ

ಬಿ. ರಾಘವೇಂದ್ರ ಪೈ, ಗಂಗೊಳ್ಳಿ

ಮೇಲ್ದರ್ಜೆಗೇರುವ ಎಲ್ಲ ಅರ್ಹತೆಗಳನ್ನು ಹೊಂದಿರುವ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದ್ದು, ಜನರಿಗೆ ಸಮರ್ಪಕ ಸೇವೆ ನೀಡಲು ತೊಂದರೆಯಾಗುತ್ತಿದೆ. ಆರೋಗ್ಯ ಇಲಾಖೆ ಮಾತ್ರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

10 ವರ್ಷಗಳ ಹಿಂದೆ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಯೋಜನೆ ಸ್ಥಳಾಭಾವದಿಂದ ಕೈತಪ್ಪಿ ಹೋಗಿತ್ತು. ಬಳಿಕ ಆರೋಗ್ಯ ಕೇಂದ್ರ ಅಭಿವೃದ್ಧಿಪಡಿಸುವ ಉದ್ದೇಶದಿಂದ ಹಳೇ ಕಟ್ಟಡವನ್ನು ಕೆಡವಿ ನೂತನ ಕಟ್ಟಡ ನಿರ್ಮಾಣ ಮಾಡಲಾಗಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಸುಮಾರು 30 ಸಾವಿರ ಜನಸಂಖ್ಯೆ ಇದ್ದು, ನಾಲ್ಕು ಗ್ರಾಪಂ ವ್ಯಾಪ್ತಿಯನ್ನು ಹೊಂದಿದೆ. ಗಂಗೊಳ್ಳಿ, ಹೆಮ್ಮಾಡಿ, ಕಟ್‌ಬೇಲ್ತೂರು ಹಾಗೂ ತಲ್ಲೂರು ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು ಏಳು ಉಪ ಕೇಂದ್ರಗಳಿವೆ. ಪ್ರತಿನಿತ್ಯ 100-120 ಹೊರರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಇಷ್ಟು ರೋಗಿಗಳನ್ನು ನೋಡಿಕೊಳ್ಳುವುದು ಕಷ್ಟಸಾಧ್ಯವಾಗಿದೆ. ಪ್ರಸ್ತುತ ಓರ್ವ ವೈದ್ಯಾಧಿಕಾರಿ, ಸ್ಟಾಫ್ ನರ್ಸ್, ಇಬ್ಬರು ಗ್ರೂಪ್ ಡಿ ನೌಕರರು, ಓರ್ವ ಲ್ಯಾಬ್ ಟೆಕ್ನಿಶಿಯನ್ (ಹೊರ ಗುತ್ತಿಗೆ ಆಧಾರದಲ್ಲಿ) ಮತ್ತು ನಾಲ್ವರು ಎಎನ್‌ಎಂ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ.

ಖಾಲಿ ಹುದ್ದೆಗಳು: ಒಂದು ಫಾರ್ಮಾಸಿಸ್ಟ್, ಒಂದು ಬ್ಲಾಕ್ ಹೆಲ್ತ್ ಎಜುಕೇಟರ್, ಒಂದು ಎಫ್‌ಡಿಸಿ, ಐದು ಪುರುಷ ಹೆಲ್ತ್ ವರ್ಕರ್, ಸೀನಿಯರ್ ಹೆಲ್ತ್ ಇನ್ಸ್‌ಪೆಕ್ಟರ್ ಒಂದು ಹಾಗೂ ಒಂದು ಪ್ಯಾರಾ ಮೆಡಿಕಲ್ ವರ್ಕರ್ ಹುದ್ದೆ ಹಾಗೂ ಮೂರು ಎಎನ್‌ಎಂ ನೌಕರರ ಹುದ್ದೆ ಖಾಲಿ ಇದೆ.

ವೈದ್ಯರಿಗೆ ಕಾರ‌್ಯದೊತ್ತಡ: ಇರುವ ಏಕೈಕ ವೈದ್ಯರಿಗೆ ಆರೋಗ್ಯ ಕೇಂದ್ರ ವ್ಯಾಪ್ತಿಗೆ ಬರುವ 26 ಅಂಗನವಾಡಿ ಹಾಗೂ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ತಪಾಸಣೆ ನಡೆಸುವುದು, ಉಪಕೇಂದ್ರಗಳಲ್ಲಿ ಕ್ಲಿನಿಕ್ ನಡೆಸುವುದು, ಸೆಕ್ಟರ್ ಮೀಟಿಂಗ್, ಆಶಾ ಕಾರ್ಯಕರ್ತರ ಸಭೆ, ಎಸ್‌ಟಿ ಕ್ಯಾಂಪ್, ತಿಂಗಳ ಸಭೆ ಇನ್ನಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾಗಿದ್ದು, ಕಾರ್ಯ ಒತ್ತಡದಿಂದ ವೈದ್ಯರು ಆಸ್ಪತ್ರೆಯಲ್ಲಿ ದೊರೆಯುವುದೇ ವಿರಳ.

ಗಂಗೊಳ್ಳಿಯಲ್ಲಿ 20 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿಂದ ಸರಿಯಾದ ಸೇವೆ ದೊರೆಯುತ್ತಿಲ್ಲ. ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯೂ ಸಿಗುತ್ತಿಲ್ಲ. ಆಸ್ಪತ್ರೆ ಮೇಲ್ದರ್ಜೆಗೇರಿಸಬೇಕೆಂಬ ಬೇಡಿಕೆಗೆ ಸರ್ಕಾರ ಸ್ಪಂದಿಸಿಲ್ಲ. ಕನಿಷ್ಠ ಆಸ್ಪತ್ರೆಯಲ್ಲಿ ಖಾಲಿ ಇರುವ ಹುದ್ದೆಗಳನ್ನಾದರೂ ಭರ್ತಿ ಮಾಡಲು ಸರ್ಕಾರ ಮುಂದಾಗಬೇಕು.
|ರವೀಂದ್ರ ಪಟೇಲ್, ಸಾಮಾಜಿಕ ಕಾರ್ಯಕರ್ತ, ಗಂಗೊಳ್ಳಿ.

ಆಸ್ಪತ್ರೆಯಲ್ಲಿ ವೈದ್ಯರಿಗೆ ಹೆಚ್ಚಿನ ಕಾರ್ಯಭಾರದಿಂದ ಸರಿಯಾದ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ಸಿಬ್ಬಂದಿ ಕೊರತೆಯಿಂದ ಒತ್ತಡ ಇನ್ನೂ ಹೆಚ್ಚಾಗಿದೆ. ಹೀಗಾಗಿ ಸಿಬ್ಬಂದಿ ಕೊರತೆಯನ್ನು ನೀಗಿಸುವ ಜತೆಗೆ ಹೆಚ್ಚುವರಿ ವೈದ್ಯರನ್ನು ನಿಯೋಜಿಸಲು ಇಲಾಖಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು.
|ಬಿ.ಸದಾನಂದ ಶೆಣೈ, ಮಾಜಿ ಮಂಡಲ ಪ್ರಧಾನರು, ಗಂಗೊಳ್ಳಿ