ವಿದ್ಯಾರ್ಥಿನಿ ಮುಂದೆ ಕಾಲೇಜು ಸಿಬ್ಬಂದಿ ಅಸಭ್ಯ ವರ್ತನೆ: ಉಡುಪೇ ಕಾರಣವೆಂದ ಆಡಳಿತ ಮಂಡಳಿ ವಿರುದ್ಧ ಆಕ್ರೋಶ

ಚೆನ್ನೈ: ಕಾಲೇಜು ಆವರಣದೊಳಗೆ ಕೆಲಸ ಮಾಡುವ ತೋಟಗಾರನೊಬ್ಬ ವಿದ್ಯಾರ್ಥಿನಿಲಯದ ಲಿಫ್ಟ್​ ಒಳಗೆ ವಿದ್ಯಾರ್ಥಿನಿ ಮುಂದೆ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ ಎಂಬ ಆರೋಪ ವ್ಯಕ್ತವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಬೇಜವಾಬ್ದಾರಿ ಹೇಳಿಕೆ ನೀಡಿದ ಕಾಲೇಜು ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.

ಚೆನ್ನೈ ಬಳಿಯಿರುವ ಕಾಂಚಿಪುರಂನ ಎಸ್​.ಆರ್​.ಎಂ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜುನ(28) ಎಂಬಾತನನ್ನು ಬಂಧಿಸಲಾಗಿದೆ.

ಎರಡನೇ ವರ್ಷದ ಪದವಿಪೂರ್ವ ವಿದ್ಯಾರ್ಥಿನಿ ಹಾಗೂ ಕಾಲೇಜಿನ ತೋಟಗಾರ ಲಿಫ್ಟ್​ನಲ್ಲಿ ಚಲಿಸುತ್ತಿದ್ದರು. ವಿದ್ಯಾರ್ಥಿನಿ ನಾಲ್ಕನೇ ಮಹಡಿಯ ಬಟನ್​ ಅನ್ನು ಒತ್ತಿದ್ದಳು. ಅದೇ ವೇಳೆ ಆರೋಪಿ 6ನೇ ಮಹಡಿಯ ಬಟನ್​ ಒತ್ತಿದ್ದ. 4ನೇ ಮಹಡಿ ಹತ್ತಿರ ಬಂದಾಗ ಲಿಫ್ಟ್​ ನಿಲ್ಲಿಸದೇ ಆಕೆಯನ್ನು 8ನೇ ಮಹಡಿಗೆ ಕರೆದುಕೊಂಡು ಹೋಗಿ ಅಸಭ್ಯ ವರ್ತನೆ ತೋರಿದ್ದಾನೆ. ನಂತರ ವಿದ್ಯಾರ್ಥಿನಿ ಕಿರುಚಿಕೊಂಡಾಗ ಆಕೆ ಹೊರ ಹೋಗಲು ಬಿಟ್ಟಿದ್ದಾನೆ ಎಂದು ಆರೋಪಿಸಲಾಗಿದೆ.

ಈ ವಿಷಯ ತಿಳಿಯುತ್ತಿದ್ದಂತೆ ಸೂಕ್ತ ಕ್ರಮಕೈಗೊಳ್ಳದೇ ಇದಕ್ಕೆಲ್ಲ ಕಾರಣ ಆಕೆ ಧರಿಸಿದ್ದ ಉಡುಪೇ ಕಾರಣ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿರುವ ಕಾಲೇಜು ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿ ಗುರುವಾರ ತಡರಾತ್ರಿಯವರೆಗೂ ಉಗ್ರ ಪ್ರತಿಭಟನೆ ಮಾಡಿದ್ದಾರೆ. ಅಲ್ಲದೆ, ಕಾಲೇಜಿನಲ್ಲಿ ಕೆಲಸ ಮಾಡುವ ಪುರುಷರು ಹಾಸ್ಟೆಲ್​ ಬಳಿ ಹಾದುಹೋಗುವಾಗ ವಿದ್ಯಾರ್ಥಿನಿಯರ ಕೊಠಡಿಯೊಳಗೆ ಇಣುಕಿ ನೋಡುವ ಮೂಲಕ ಗೌಪ್ಯತೆಗೆ ಧಕ್ಕೆ ತರುತ್ತಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

ಲಿಫ್ಟ್​ನಲ್ಲಿ ಸಿಸಿಟಿವಿ ಅಳವಡಿಸುವಂತೆ ವಾರ್ಡನ್​ ಬಳಿ ಆಗ್ರಹಿಸಿದ್ದರೂ ಅದರ ಬಗ್ಗೆ ಗಮನವಹಿಸಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದು, ಘಟನೆಯನ್ನು ನಿರಾಕರಿಸುವ ಕಾಲೇಜು ಆಡಳಿತ ಮಂಡಳಿ ತನಿಖೆ ನಡೆಸುವುದಾಗಿ ತಿಳಿಸಿದೆ. (ಏಜೆನ್ಸೀಸ್​)