ಗ್ರಂಥಾಲಯಕ್ಕೆ ಅಧಿಕಾರಿಗಳ ಭೇಟಿ

ಬೈಲಕುಪ್ಪೆ: ಬೈಲಕುಪ್ಪೆ ಗ್ರಾಮ ಪಂಚಾಯಿತಿ ಗ್ರಂಥಾಲಯದ ಮೇಲ್ವಿಚಾರಕರು ಸರಿಯಾಗಿ ಕಚೇರಿಗೆ ಹಾಜರಾಗುತ್ತಿಲ್ಲ ಎಂಬ ದೂರು ಕೇಳಿ ಬಂದ ಹಿನ್ನೆಲೆ ಗ್ರಂಥಪಾಲಕರಾದ ಪದ್ಮಶ್ರೀ ಅವರು ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತಿದ್ದ ರವಿಕುಮಾರ್ ಹಲವು ತಿಂಗಳು ಗೈರಾಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಗ್ರಾ.ಪಂ. ಪಿಡಿಒ ಶಿವಯೋಗ ಹಾಜರಾತಿ ಪುಸ್ತಕವನ್ನು ಗ್ರಾ.ಪಂ. ಕಾರ್ಯದರ್ಶಿ ವಶಕ್ಕೆ ಕೊಟ್ಟುಹೋಗಿದ್ದರು. ಈ ಹಾಜರಾತಿ ಪುಸ್ತಕವನ್ನು ಹುಡುಕಿ ರವಿಕುಮಾರ್ ತಿದ್ದಿದ್ದರು. ಇದನ್ನು ಗಮನಿಸಿದ ಅಭಿವೃದ್ಧಿ ಅಧಿಕಾರಿ ಶಿವಯೋಗ ಗ್ರಂಥಾಲಯ ಇಲಾಖೆಗೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದ್ದರು.

ಇದರ ಬೆನ್ನಲ್ಲೇ ಅಧಿಕಾರಿಗಳು ಗ್ರಾ.ಪಂ. ಗ್ರಂಥಾಲಯಕ್ಕೆ ಭೇಟಿ ನೀಡಿ ದಾಖಲಾತಿಗಳನ್ನು ಪರಿಶೀಲಿಸಿದರು ಹಾಗೂ ಹಲವರಿಂದ ಮಾಹಿತಿ ಕಲೆಹಾಕಿದ ವೇಳೆ ರವಿಕುಮಾರ್ ಗೈರಾಗಿರುವುದು ಕಂಡುಬಂದಿದೆ ಎಂದು ಪದ್ಮಶ್ರೀ ತಿಳಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ವರದಿಯನ್ನು ಜಿಲ್ಲಾ ಕೇಂದ್ರ ಗ್ರಂಥಾಲಯದ ಅಧಿಕಾರಿ ಗಮನಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ.

ಜಿಲ್ಲಾಕೇಂದ್ರ ಗ್ರಂಥಾಲಯದ ಸಿಬ್ಬಂದಿ ಚಿತ್ರ, ತಾಲೂಕು ಗ್ರಂಥಾಲಯದ ಅಧಿಕಾರಿ ರೇಖಾ, ಗ್ರಾ.ಪಂ. ಕಾರ್ಯದರ್ಶಿ ಗಣೇಶ್ ಸದಸ್ಯರಾದ ಎಚ್.ಎ.ಮಂಜುನಾಥ್ ಮತ್ತಿತರರು ಹಾಜರಿದ್ದರು.