More

    ಎಸ್‌ಎಸ್‌ಎಲ್‌ಸಿ ಫಲಿತಾಂಶ ವೃದ್ಧಿ ಗುರಿ

    ಭರತ್ ಶೆಟ್ಟಿಗಾರ್ ಮಂಗಳೂರು
    ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಳೆದ ವರ್ಷ ಮೊದಲ ಸ್ಥಾನ ಗಳಿಸಿದ್ದ ಉಡುಪಿ ಜಿಲ್ಲೆಗೆ ತನ್ನ ಸ್ಥಾನವನ್ನು ಉಳಿಸುವ ಪ್ರಯತ್ನವಾದರೆ, ಏಳನೇ ಸ್ಥಾನಕ್ಕೆ ಕುಸಿದಿರುವ ದ.ಕ ಜಿಲ್ಲೆಯಲ್ಲಿ ಫಲಿತಾಂಶ ಉತ್ತಮಪಡಿಸಿ ಮತ್ತೆ ಮೊದಲ ಸ್ಥಾನ ಪಡೆಯುವ ಗುರಿ..
    ಈ ಬಾರಿ ಎರಡೂ ಜಿಲ್ಲೆಗಳಲ್ಲಿ ಪ್ರಸ್ತುತ ಶಿಕ್ಷಣ ಇಲಾಖೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದೆ. ಎರಡೂ ಜಿಲ್ಲೆಗಳ ಶಿಕ್ಷಣ ಇಲಾಖೆ ಗುಣಮಟ್ಟದ ಫಲಿತಾಂಶ ಪಡೆಯಬೇಕು ಎನ್ನುವ ಉದ್ದೇಶ ಹೊಂದಿದೆ. ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಕನಿಷ್ಠ ಉತ್ತೀರ್ಣದ ಮಟ್ಟಕ್ಕೆ ತರುವುದು ಮೊದಲ ಉದ್ದೇಶವಾಗಿದೆ. ಪ್ರೇರಣಾ ಶಿಬಿರದಂತಹ ಕಾರ್ಯಕ್ರಮಗಳು, ಸಂಪನ್ಮೂಲ ವ್ಯಕ್ತಿಗಳಿಂದ ಬೋಧನೆ, ಹೆಚ್ಚುವರಿ ತರಗತಿ, ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ಬರೆಸುವುದು ಮೊದಲಾದ ಯೋಜನೆಗಳನ್ನು ಶೈಕ್ಷಣಿಕ ವರ್ಷಾರಂಭದಿಂದಲೇ ಜಾರಿಗೆ ತಂದಿದೆ.

    ದ.ಕ. ಜಿಲ್ಲೆ ಕಾರ್ಯಕ್ರಮ: ಜಿಲ್ಲೆಯಲ್ಲಿ ಶಿಕ್ಷಕರಿಂದ ವಿದ್ಯಾರ್ಥಿಗಳ ಮನೆ ಭೇಟಿ, ಶಾಲೆಗಳಲ್ಲಿ ಹೆತ್ತವರ ಸಭೆ ಈಗಾಲೇ ಆಯೋಜಿಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ, ಕಡಿಮೆ ಫಲಿತಾಂಶ ಪಡೆಯುವ ಶಾಲೆಗಳಿಗೆ ಉತ್ತಮ ಫಲಿತಾಂಶ ಪಡೆಯಲು ಪ್ರೇರಣೆ ನೀಡುವ ಪತ್ರಗಳನ್ನು ವಿಭಾಗೀಯ ಮಟ್ಟದಲ್ಲಿ ವಿಭಾಗೀಯ ಸಹಕಾರ್ಯದರ್ಶಿಗಳು ಬರೆದು ಉತ್ತೇಜಿಸಿದ್ದಾರೆ. ಶಾಲಾರಂಭದ ಬಳಿಕ ಜುಲೈ ತಿಂಗಳಲ್ಲಿ ಡಿಡಿಪಿಐ, ಸಿಇಒ, ಜಿಲ್ಲಾಧಿಕಾರಿಯವರು ಶಾಲಾ ಮುಖ್ಯ ಶಿಕ್ಷಕರ ಸಭೆ ನಡೆಸಿ, ಜಿಲ್ಲೆ, ತಾಲೂಕು, ವಲಯ, ಶಾಲಾ ಮಟ್ಟದಲ್ಲಿ ಯಾವೆಲ್ಲ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಕ್ರಿಯಾ ಯೋಜನೆ ತಯಾರಿಸಲಾಗಿತ್ತು. ಶಾಲಾ ಹಂತದಲ್ಲಿ ಶಿಕ್ಷಕರು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ದತ್ತು ಪಡೆದುಕೊಂಡು ಉತ್ತಿರ್ಣರಾಗಲು ಪ್ರೇರೇಪಣೆ ನೀಡುತ್ತಿದ್ದಾರೆ. ರ‌್ಯಾಂಕ್‌ಗಿಂತಲೂ ಗುಣಮಟ್ಟದ ಫಲಿತಾಂಶಕ್ಕೆ ಒತ್ತು ನೀಡಿ, ಅತೀ ಹೆಚ್ಚು ಮಂದಿ ಉತ್ತೀರ್ಣರಾಗುವ ಮೂಲಕ ಜಿಲ್ಲೆ ಒಟ್ಟು ಫಲಿತಾಂಶದಲ್ಲಿ ಮುಂಚೂಣಿಗೆ ತಲುಪಿಸುವುದು ಶಿಕ್ಷಣ ಇಲಾಖೆಯ ಚಿಂತನೆ.

    ಉಡುಪಿ ಜಿಲ್ಲೆಯ ಯೋಜನೆಗಳು: ಉಡುಪಿ ಜಿಲ್ಲೆಯಲ್ಲಿ ಎಲ್ಲ ಐದು ಶಿಕ್ಷಣ ವಲಯಗಳಲ್ಲಿ ಪ್ರತ್ಯೇಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಕಾರ್ಕಳದಲ್ಲಿ ‘ಮಿಷನ್-100’, ಕುಂದಾಪುರದಲ್ಲಿ ‘ಶೂನ್ಯ ಅನುತ್ತೀರ್ಣದತ್ತ’ ಬ್ರಹ್ಮಾವರದಲ್ಲಿ ‘ನಿರೀಕ್ಷೆ-2020’ ಉಡುಪಿಯಲ್ಲಿ ‘ನಮ್ಮ ನಡೆ-ಮಕ್ಕಳ ಮನೆ ಕಡೆ’ ಬೈಂದೂರಿನಲ್ಲಿ ‘ಬೆಳಗುತ್ತಿದೆ ಬೈಂದೂರು’ ಎನ್ನುವ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
    ವಿದ್ಯಾರ್ಥಿಗಳಿಗೆ 5 ಜತೆ ಪ್ರಶ್ನೆಪತ್ರಿಕೆಗಳನ್ನು ನೀಡಿ ಅವುಗಳಿಗೆ ಪುಸ್ತಕ ನೀಡಿ ಉತ್ತರ ಬರೆಯುವಂತೆ ಮಕ್ಕಳಿಗೆ ಸೂಚಿಸಲಾಗಿದೆ. ಜತೆಗೆ ಜಿಲ್ಲೆಯಲ್ಲಿ ಮೂರು ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ. ಜ.27ರಿಂದ ಮೊದಲ ಪರೀಕ್ಷೆ ನಡೆಯಲಿದ್ದು, ಜಿಲ್ಲಾ ಶಿಕ್ಷಣ ಇಲಾಖೆ ಪರೀಕ್ಷೆ ಆಯೋಜಿಸಿದೆ. ಫೆ.17ರಿಂದ ರಾಜ್ಯ ಮಟ್ಟದ ಪೂರ್ವಸಿದ್ಧತಾ ಪರೀಕ್ಷೆ ನಡೆಯಲಿದೆ. ಮಾರ್ಚ್ ಮೊದಲ ವಾರದಲ್ಲಿ ಶಾಲಾ ಮಟ್ಟದಲ್ಲಿ ಪರೀಕ್ಷೆ ನಡೆಯಲಿದೆ. ಮೂರು ಪರೀಕ್ಷೆಗಳು ನಡೆದ ಬಳಿಕ ಪುಸ್ತಕ ನೋಡಿ ಅವುಗಳಿಗೆ ಉತ್ತರ ಬರೆಯಲು ಸೂಚನೆ ನೀಡಲಾಗಿದೆ ಎನ್ನುತಾರೆ ಉಡುಪಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶೇಷಶಯನ ಕಾರಿಂಜ.

    44,620 ವಿದ್ಯಾರ್ಥಿಗಳು: ಈ ಬಾರಿ ಉಭಯ ಜಿಲ್ಲೆಗಳಲ್ಲಿ 44,620 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿದ್ದಾರೆ. ದ.ಕ ಜಿಲ್ಲೆಯಲ್ಲಿ 30,605 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಇದರಲ್ಲಿ 16,140 ಹುಡುಗರು ಮತ್ತು 14,465 ಹುಡುಗಿಯರು. ಶಾಲಾ ವಿದ್ಯಾರ್ಥಿಗಳು 27,661, ಖಾಸಗಿ ವಿದ್ಯಾರ್ಥಿಗಳು 1208. ಉಡುಪಿಯಲ್ಲಿ ಒಟ್ಟು 14,015 ವಿದ್ಯಾರ್ಥಿಗಳಲ್ಲಿ 6,568 ಹುಡುಗರು ಮತ್ತು 6,460 ಹುಡುಗಿಯರು. 13,028 ಶಾಲಾ ವಿದ್ಯಾರ್ಥಿಗಳು ಮತ್ತು 374 ಖಾಸಗಿ ವಿದ್ಯಾರ್ಥಿಗಳು ತಮ್ಮ ಸಾಧನೆ ತೋರಿಸಲಿದ್ದಾರೆ.

    ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಶೈಕ್ಷಣಿಕ ವರ್ಷಾರಂಭದಿಂದಲೇ ಸಿದ್ಧತೆ ಆರಂಭಿಸಿದ್ದೇವೆ. ಕಳೆದ ಬಾರಿಗಿಂತಲೂ ಉತ್ತಮ ಫಲಿತಾಂಶ ಪಡೆಯುವ ನಿರೀಕ್ಷಯಿದೆ.
    – ಶೇಷಶಯನ ಕಾರಿಂಜ, ಉಡುಪಿ, ಡಿಡಿಪಿಐ

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts