ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಅಂತಿಮ ಸಿದ್ಧತೆ

ಭರತ್ ಶೆಟ್ಟಿಗಾರ್ ಮಂಗಳೂರು

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕೆಲವೇ ದಿನಗಳು ಬಾಕಿಯಿದೆ. ಶಾಲೆಗಳಲ್ಲಿ ಪಾಠ-ಪ್ರವಚನ ಮುಗಿದು, ಪೂರ್ವ ಸಿದ್ಧತಾ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳನ್ನು ಪರೀಕ್ಷೆ ಎದುರಿಸಲು ಅಣಿಗೊಳಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಕಾರ್ಯಕ್ರಮ ಆಯೋಜಿಸುವ ಮೂಲಕ ಆತ್ಮವಿಶ್ವಾಸ ತುಂಬುವ ಕೆಲಸವೂ ಇದೇ ವೇಳೆ ನಡೆಯುತ್ತಿದೆ.

ಮಾ.21ರಿಂದ ಆರಂಭಗೊಂಡು ಏ.4ರ ವರೆಗೆ ಪರೀಕ್ಷೆಗಳು ನಡೆಯಲಿವೆ. ಕಳೆದ ಬಾರಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದ ಉಡುಪಿ ಜಿಲ್ಲೆಗೆ ಈ ಬಾರಿಯೂ ಮೊದಲ ಸ್ಥಾನ ಉಳಿಸಿಕೊಳ್ಳಲು ಮುಂದಾಗಿದೆ. ಕಳೆದ ಸಾಲಿನಲ್ಲಿ 4ನೇ ಸ್ಥಾನ ಪಡೆದಿದ್ದ ದ.ಕ.ಜಿಲ್ಲೆ ಫಲಿತಾಂಶ ಉತ್ತಮ ಪಡಿಸಿಕೊಳ್ಳುವ ಪ್ರಯತ್ನದಲ್ಲಿದೆ.

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪರೀಕ್ಷಾ ಸಿದ್ಧತೆ ಕುರಿತ ಒಂದು ಹಂತದ ಸಭೆ ನಡೆದು, ಹಲವು ಸಲಹೆ ಸೂಚನೆ ನೀಡಿದ್ದಾರೆ. ಮಾರ್ಚ್ ಎರಡನೇ ವಾರ ಪರೀಕ್ಷಾ ಕೇಂದ್ರಗಳ ಅಧೀಕ್ಷಕರ ಜಿಲ್ಲಾಮಟ್ಟದ ಸಭೆ ನಡೆಯಲಿದೆ.
ಉಡುಪಿಯಲ್ಲಿ ಕ್ಲಸ್ಟರ್ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ ಆಯೋಜಿಸಲಾಗುತ್ತದೆ. ಪರೀಕ್ಷೆ ನಡುವಿನ ರಜಾದಿನದಲ್ಲಿಯೂ ವಿಶೇಷ ತರಗತಿ ನಡೆಸಲು ಉದ್ದೇಶಿಸಲಾಗಿದೆ. ಇನ್ನು ಶಾಲೆಯಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ಪರಿಹಾರ ಬೋಧನೆ ಕಾರ್ಯಕ್ರಮ ನಡೆಯುತ್ತಿದ್ದು, ಶಿಕ್ಷಣ ಇಲಾಖೆ ಹಾಗೂ ಡಯಟ್‌ನ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸುತ್ತಿದ್ದಾರೆ.

45,406 ವಿದ್ಯಾರ್ಥಿಗಳು: ದ.ಕ. ಉಡುಪಿ ಉಭಯ ಜಿಲ್ಲೆಗಳಲ್ಲಿ ಬಾರಿ 45,406 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ದ.ಕ. ಜಿಲ್ಲೆಯಲ್ಲಿ ಒಟ್ಟು 31,192 ವಿದ್ಯಾರ್ಥಿಗಳ ಪೈಕಿ 16,645 ಗಂಡುಮಕ್ಕಳು ಹಾಗೂ 14,547 ಹೆಣ್ಮಕ್ಕಳು. ಖಾಸಗಿಯಾಗಿ 1,170 ಮಂದಿ ಪರೀಕ್ಷೆ ಬರೆಯಲಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 14,214 ಮಂದಿ ಪರೀಕ್ಷೆ ಬರೆಯಲಿದ್ದು, ಇದರಲ್ಲಿ 7,200 ಗಂಡು ಹಾಗೂ 7014 ಹೆಣ್ಣು ಮಕ್ಕಳು. 404 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಪರೀಕ್ಷಾ ಕೇಂದ್ರಗಳು: ದ.ಕ. ಜಿಲ್ಲೆಯ 7 ವಲಯ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿ ಒಟ್ಟು 95 ಪರೀಕ್ಷಾ ಕೇಂದ್ರಗಳಿವೆ. ಬಂಟ್ವಾಳ 17, ಬೆಳ್ತಂಗಡಿ 13, ಮಂಗಳೂರು ಉತ್ತರ 21 (4 ಖಾಸಗಿ ಕೇಂದ್ರ), ಮಂಗಳೂರು ದಕ್ಷಿಣ 20 (1 ಖಾಸಗಿ ಕೇಂದ್ರ), ಮೂಡುಬಿದಿರೆ 5, ಪುತ್ತೂರು 12, ಸುಳ್ಯದಲ್ಲಿ 7 ಕೇಂದ್ರಗಳಿವೆ. ಉಡುಪಿಯ 5 ವಲಯ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿ ಒಟ್ಟು 51 ಪರೀಕ್ಷಾ ಕೇಂದ್ರಗಳಿವೆ. ಬೈಂದೂರು 8, ಕುಂದಾಪುರ 8, ಬ್ರಹ್ಮಾವರ 11, ಕಾರ್ಕಳ 9 ಹಾಗೂ ಉಡುಪಿಯಲ್ಲಿ 15 (2 ಖಾಸಗಿ) ಕೇಂದ್ರಗಳಿವೆ. ಉಭಯ ಜಿಲ್ಲೆಗಳಲ್ಲಿ ಸೂಕ್ಷ್ಮ, ಅತಿಸೂಕ್ಷ್ಮ ಪರೀಕ್ಷಾ ಕೇಂದ್ರಗಳಿಲ್ಲ. ಪರೀಕ್ಷೆಗೆ ಸಂಬಂಧಿಸಿದಂತೆ ಎಲ್ಲ ವಲಯಗಳಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ.

ಸಿಸಿ ಟಿವಿ ಅಳವಡಿಕೆ: ಪರೀಕ್ಷೆ ವೇಳೆ ಅವ್ಯವಹಾರ ತಡೆಯುವ ನಿಟ್ಟಿನಲ್ಲಿ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಅಳವಡಿಸಲಾಗುತ್ತದೆ. ಕಾರಿಡಾರ್‌ಗಳಿಗೆ ಹಾಗೂ ಪ್ರಶ್ನೆಪತ್ರಿಕೆ ಶೇಖರಿಸಿಡುವ ಕೋಣೆಗಳಿಗೂ ಸಿಸಿಟಿವಿ ಅಳವಡಿಸಲಾಗುತ್ತದೆ. ಕೆಲವು ಶಾಲೆಗಳಲ್ಲಿ ಆಡಳಿತ ಮಂಡಳಿಯಿಂದ ಪ್ರತಿ ತರಗತಿಗಳಿಗೆ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದ್ದು, ಇದು ಪರೀಕ್ಷಾ ಅವ್ಯವಹಾರ ತಡಗೂ ಸಹಕಾರಿಯಾಗಲಿದೆ.

ಪಾಸಿಂಗ್ ಪ್ಯಾಕೇಜ್!: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿ ‘ಪಾಸಿಂಗ್ ಪ್ಯಾಕೇಜ್’ ಎಂಬ ವಿಧಾನ ಅಳವಡಿಸಿಕೊಳ್ಳಲಾಗಿದೆ. ಯಾವ ರೀತಿಯ ಪ್ರಶ್ನೆಗಳು ಪರೀಕ್ಷೆಯಲ್ಲಿ ಬರಬಹುದು ಎಂದು ಶಿಕ್ಷಕರಿಗೆ ಮಾಹಿತಿ ಇರುವುದರಿಂದ ಅಂತಹ ಪ್ರಶ್ನೆಗಳಿಗೆ ತಯಾರಿ ನಡೆಸಲು ಹೇಳಿಕೊಡಲಾಗುತ್ತದೆ. ಮಿಷನ್-100 ದಿನ ಕಾರ್ಯಕ್ರಮವೂ ಪ್ರಸ್ತುತ ಜಾರಿಯಲ್ಲಿದೆ.

ಶಾಲಾ ಮುಖ್ಯಸ್ಥರು, ಎಸ್‌ಡಿಎಂಸಿ ಪ್ರಮುಖರ ಜಿಲ್ಲಾ ಹಂತದ ಸಭೆ ನಡೆಸಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ಸೂಚನೆ ನೀಡಲಾಗಿದೆ. ಸಾಯಂಕಾಲ 6-7 ಗಂಟೆಯ ವರೆಗೆ ತರಗತಿ ನಡೆಸಲಾಗುತ್ತಿದೆ. ಕಳೆದ ವರ್ಷ ಜಿಲ್ಲೆ 4ನೇ ಸ್ಥಾನ ಪಡೆದರೂ ಒಟ್ಟಾರೆ ಫಲಿತಾಂಶದಲ್ಲಿ ಏರಿಕೆಯಾಗಿದೆ.
– ಶಮಂತ್, ದ.ಕ.ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ನೋಡೆಲ್ ಅಧಿಕಾರಿ

ಜಿಲ್ಲೆ ಕಳೆದ ವರ್ಷ ಮೊದಲ ಸ್ಥಾನ ಗಳಿಸಿದ್ದು, ಅದಕ್ಕಿಂತ ಹಿಂದಿನ ವರ್ಷ ದ್ವಿತೀಯ ಸ್ಥಾನ ಪಡೆದಿತ್ತು. ಮೊದಲ ಸ್ಥಾನವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಜಿಲ್ಲೆಯ ಮೇಲಿದೆ. ಈ ನಿಟ್ಟಿನಲ್ಲಿ ಶಾಲೆಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದ್ದು, ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ.
– ವೆಂಕಟೇಶ್ ನಾಯಕ್, ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ನೋಡೆಲ್ ಅಧಿಕಾರಿ