ದಾವಣಗೆರೆ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ

ದಾವಣಗೆರೆ: ಜಿಲ್ಲೆಯ 92 ಕೇಂದ್ರಗಳಲ್ಲಿ ಗುರುವಾರ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭವಾದವು. ಮೊದಲ ದಿನ ಕನ್ನಡ ಸೇರಿದಂತೆ ಪ್ರಥಮ ಭಾಷಾ ವಿಷಯಗಳ ಪರೀಕ್ಷೆ ನಡೆದವು.

ಮೊದಲ ದಿನ ಪರೀಕ್ಷಾ ಕೇಂದ್ರಗಳಲ್ಲಿ ಗಡಿಬಿಡಿ, ಧಾವಂತ, ಆತಂಕ ಹೀಗೆ ಹಲವು ಬಗೆಯ ಭಾವನೆಗಳು ಕಂಡುಬಂದವು. ವಿದ್ಯಾರ್ಥಿಗಳ ಜತೆಗೆ ಪಾಲಕರೂ ಬಂದು ಆಲ್ ದಿ ಬೆಸ್ಟ್ ಹೇಳಿದರು. ಶಿಕ್ಷಕರೂ ಬೆನ್ನು ತಟ್ಟಿ ಹುರಿದುಂಬಿಸಿದರು.

ನೋಂದಣಿ ಸಂಖ್ಯೆ ಮತ್ತು ಪರೀಕ್ಷಾ ಕೊಠಡಿ ಸಂಖ್ಯೆ ತಿಳಿಯಲು ವಿದ್ಯಾರ್ಥಿಗಳು ಸೂಚನಾ ಫಲಕಗಳ ಮೇಲೆ ಕಣ್ಣು ಹಾಯಿಸಿದರು. ಬಾಲಕಿಯೊಬ್ಬಳು ತಾಯಿಯ ಕಾಲಿಗೆರಗಿ ನಮಸ್ಕರಿಸಿದಳು. ತಡವಾಗಿ ಆಗಮಿಸಿದ ಮಕ್ಕಳಿಗೆ ಅವರ ಕೊಠಡಿ ಹುಡುಕಲು ಸಿಬ್ಬಂದಿ ಸಹಾಯ ಮಾಡಿದರು.