ಸಿಆರ್‌ಜಡ್ ಮರಳು ಬಗೆಯುವ ಹುನ್ನಾರಕ್ಕೆ ಹಿನ್ನಡೆ

<<2018ರ ಡಿಸಿ ಆದೇಶಕ್ಕೇ ಹೈಕೋರ್ಟ್ ಮನ್ನಣೆ>>

ವಿಜಯವಾಣಿ ಸುದ್ದಿಜಾಲ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆಯ ಸಿಆರ್‌ಜಡ್ ಪ್ರದೇಶದ ನದಿಗಳಿಂದ ಇನ್ನಷ್ಟು ಮರಳು ಬಗೆಯುವ ಕೆಲವು ಸ್ಥಾಪಿತ ಹಿತಾಸಕ್ತಿಗಳ ಹುನ್ನಾರಕ್ಕೆ ಹಿನ್ನಡೆಯಾಗಿದೆ.
08.11.2011ರ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಆದೇಶ ಉಲ್ಲೇಖಿಸಿ 20.10.2018ರಂದು ದ.ಕ ಜಿಲ್ಲಾಧಿಕಾರಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕೆಲವು ಮರಳು ಗಣಿಗಾರಿಕೆದಾರರು ಹೈಕೋರ್ಟ್ ಮೊರೆ ಹೋಗಿದ್ದರು. ಈ ಆದೇಶದಿಂದಾಗಿ 2011ರ ಮೊದಲು ಮರಳು ತೆಗೆಯುತ್ತಿದ್ದವರು ಮಾತ್ರವೇ ಸಾಂಪ್ರದಾಯಿಕ ಮರಳು ತೆಗೆಯುವವರು ಎನ್ನುವ ನಿರ್ಧಾರವನ್ನು ಅಂತಿಮಗೊಳಿಸಲಾಗಿತ್ತು.
ಇದನ್ನೇ ಇನ್ನು ಮುಂದೆ ಶಾಶ್ವತ ನೆಲೆಯಲ್ಲಿ ಪಾಲಿಸುವುದಕ್ಕೆ ಡಿಸಿ ನಿರ್ಧರಿಸಿದ್ದರು. 2011ರ ಬಳಿಕ ಮರಳು ತೆಗೆಯುತ್ತಿದ್ದವರಿಗೆ ಇನ್ನೆಂದೂ ಸಿಆರ್‌ಜಡ್ ಪ್ರದೇಶದಲ್ಲಿ ಅನುಮತಿ ನೀಡುವುದಿಲ್ಲ. 2011ರ ಮೊದಲು ಕನಿಷ್ಠ ಮೂರು ವರ್ಷವಾದರೂ ಮರಳೆತ್ತಿರುವ, ಈಗಾಗಲೇ ಪಟ್ಟಿ ಮಾಡಿರುವ 75 ಮಂದಿಯ ಹೆಸರನ್ನೇ ಪ್ರತಿವರ್ಷ ಮುಂದುವರಿಸಲಾಗುವುದು ಎಂಬ ನಿರ್ಧಾರವನ್ನು ಜಿಲ್ಲಾಡಳಿತ ತೆಗೆದುಕೊಂಡಿತ್ತು.
ಇದನ್ನು ಪ್ರಶ್ನಿಸಿ ಅರ್ಜಿದಾರರಾದ ಅಬ್ದುಲ್ ಮಜೀದ್ ಮತ್ತು ಅಬ್ದುಲ್ ಗಫೂರ್ ಎನ್ನುವವರು ಕೋರ್ಟ್ ಮೊರೆ ಹೋಗಿದ್ದರು. ಈ ರೀತಿಯ ನಿರ್ಧಾರದಲ್ಲಿ ಯಾವುದೇ ಹುರುಳಿಲ್ಲ, ಅಲ್ಲದೆ ಇದರಿಂದಾಗಿ ಮರಳು ತೆಗೆಯುವವರ ಜೀವನೋಪಾಯಕ್ಕೆ ತೊಂದರೆಯಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.
ಈ ಕುರಿತು ಹೆಚ್ಚುವರಿ ಸರ್ಕಾರಿ ವಕೀಲ ವಿ.ಜಿ.ಭಾನುಪ್ರಕಾಶ್ ಕೋರ್ಟ್‌ನಲ್ಲಿ ವಿರೋಧ ವ್ಯಕ್ತಪಡಿಸಿ, ಸಿಆರ್‌ಜಡ್ ವಲಯ ನಿರ್ದೇಶಕರು, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ, ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ, ಸೇರಿದಂತೆ ಎಂಟು ಮಂದಿಯ ಸಮಿತಿ ಅಧ್ಯಕ್ಷರು ಜಿಲ್ಲಾಧಿಕಾರಿಯಾಗಿರುತ್ತಾರೆ. ಸಾಂಪ್ರದಾಯಿಕ ಮರಳು ತೆಗೆಯುವವರ ಹಿತ ಗಮನದಲ್ಲಿರಿಸಿ ನಿರ್ಣಯ ತೆಗೆದುಕೊಳ್ಳಲಾಗಿದೆ, ಕೇವಲ ನೀರಿನ ಹರಿವಿನ ಉದ್ದೇಶದಿಂದ ಮರಳು ತೆಗೆಯಲಾಗುತ್ತದೆ, 2011-12ರಲ್ಲಿ 53 ಮಂದಿಯಷ್ಟೇ ಸಾಂಪ್ರದಾಯಿಕ ಮರಳುಗಾರಿಕೆಯವರಿದ್ದರು. ಈ ಸಂಖ್ಯೆ 2014ರಲ್ಲಿ 240ಕ್ಕೆ ಏರಿತ್ತು. ಇದೇ ಕಾರಣಕ್ಕೆ ನಿರ್ಣಯ ಕೈಗೊಳ್ಳಲಾಗಿತ್ತು ಎಂದು ವಾದಿಸಿದರು.
ಇದನ್ನು ಪರಿಗಣಿಸಿದ ನ್ಯಾಯಾಧೀಶರು ಸಾಂಪ್ರದಾಯಿಕ ಮರಳೆತ್ತುವವರನ್ನು ರಕ್ಷಣೆ ಮಾಡುವ ಉದ್ದೇಶದಿಂದ ಹಾಗೂ ಅರ್ಜಿದಾರರ ವಿರುದ್ಧ ಯಾವುದೇ ಭೇದ ಕಾಣದಿರುವುದನ್ನು ಪರಿಗಣಿಸಿ ಅರ್ಜಿ ವಜಾಗೊಳಿಸಿ ಮಾ.11ರಂದು ಆದೇಶಿಸಿದ್ದಾರೆ.

97 ಮಂದಿಗೆ ಸದ್ಯ ಅನುಮತಿ:  ಸಿಆರ್‌ಜಡ್ ಪ್ರದೇಶದಲ್ಲಿ ಈಗ ಒಟ್ಟು 97 ಮಂದಿ ಸಾಂಪ್ರದಾಯಿಕ ಮರಳು ತೆಗೆಯುವವರಿಗೆ ಅನುಮತಿ ನೀಡಲಾಗಿದೆ. ಮೊದಲ ಹಂತದಲ್ಲಿ ಅರ್ಜಿಗಳನ್ನು ಪರಿಶೀಲಿಸಿ 76 ಮಂದಿಗೆ 12 ಮರಳು ದಿಣ್ಣೆಗಳಲ್ಲಿ ಅನುಮತಿ ಹಾಗೂ ಎರಡನೇ ಹಂತದಲ್ಲಿ 21 ಮಂದಿಗೆ 10 ಮರಳು ದಿಣ್ಣೆಗಳಲ್ಲಿ ಅನುಮತಿಯನ್ನು ಡಿಸಿ ನೇತೃತ್ವದ ಸಮಿತಿ ನೀಡಿದೆ. ಒಟ್ಟಾರೆ ಪ್ರತಿ ವ್ಯಕ್ತಿಗೆ ಗರಿಷ್ಠ 5000 ಮೆಟ್ರಿಕ್ ಟನ್ ಮರಳು ತೆಗೆಯುವುದಕ್ಕೆ ಮಾತ್ರವೇ ಅವಕಾಶ ನೀಡಲಾಗಿದೆ.

ನಾನ್ ಸಿಆರ್‌ಜಡ್ ಟೆಂಡರ್ ಸ್ಥಗಿತ: ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ನಾನ್ ಸಿಆರ್‌ಜಡ್ ಪ್ರದೇಶದ ಮರಳು ಬ್ಲಾಕ್‌ಗಳಿಂದ ಮರಳು ತೆಗೆಯುವ ಟೆಂಡರ್ ಪ್ರಕ್ರಿಯೆ ಸ್ಥಗಿತಗೊಂಡಿದೆ. ಸತತ ಮೂರು ಬಾರಿ ಟೆಂಡರ್ ಕರೆದ ಬಳಿಕ ಕೇವಲ 5 ಬ್ಲಾಕ್‌ಗಳಿಗೆ ಪ್ರಿಕ್ವಾಲಿಫಿಕೇಶನ್ ಬಿಡ್ ಪೂರ್ಣಗೊಂಡು ಸರ್ವೀಸ್ ಟೆಂಡರ್/ಹಣಕಾಸು ಬಿಡ್ ಹಂತ ತಲಪಿತ್ತು. ಇದನ್ನು ಮುಂದುವರಿಸುವುದು ಏನಿದ್ದರೂ ಇನ್ನು ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ಬಳಿಕ.

53ರಿಂದ 538ಕ್ಕೆ ಏರಿದ್ದ ಮರಳೆತ್ತುವವರ ಸಂಖ್ಯೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಆದೇಶ, ಪರಿಸರದ ಮೇಲಿನ ಹಾನಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದಲೂ ಇದು ನೆರವಾಗಲಿದೆ.
– ಶಶಿಕಾಂತ್ ಸೆಂಥಿಲ್, ದ.ಕ ಜಿಲ್ಲಾಧಿಕಾರಿ