ಸಂಪತ್ತನ್ನು ಉತ್ತಮ ಕಾರ್ಯಕ್ಕೆ ವಿನಿಯೋಗಿಸಿ

ಶ್ರೀಶೈಲಂ: ಶ್ರಮವಹಿಸಿ ದುಡಿದು ಸಂಪಾದಿಸಿದ ಸಂಪತ್ತನ್ನು ಪುಣ್ಯದ ರೂಪದಲ್ಲಿ ಪರಿವರ್ತನೆ ಮಾಡಿಕೊಂಡು ಮುಂದಿನ ಜನ್ಮಕ್ಕೆ ತೆಗೆದುಕೊಂಡು ಹೋಗಬಹುದು ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಹೇಳಿದರು.

ಶ್ರಾವಣ ಸೋಮವಾರ ನಿಮಿತ್ತ ಆಂಧ್ರಪ್ರದೇಶದ ಶ್ರೀಶೈಲ ಕ್ಷೇತ್ರದಲ್ಲಿ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ತಪೋನುಷ್ಠಾನ ನೆರವೇರಿಸಿ ಆಶೀರ್ವಚನ ನೀಡಿದ ಅವರು, ನಾವು ಎಷ್ಟೇ ಆಸ್ತಿ ಗಳಿಸಿದರೂ ಮರಣಾನಂತರ ಯಾವುದೂ ಜತೆಯಲ್ಲಿ ಬರುವುದಿಲ್ಲ. ನಮ್ಮಲ್ಲಿನ ಕೆಲ ಸಂಪತ್ತನ್ನು ಒಳ್ಳೆಯ ಕೆಲಸಕ್ಕೆ ದಾನ ಮಾಡಿದರೆ ಆ ಸಂಪತ್ತು ಪುಣ್ಯದ ರೂಪ ಪಡೆದುಕೊಳ್ಳುತ್ತದೆ. ಆ ಪುಣ್ಯವನ್ನು ಮರಣಾನಂತರವೂ ಒಯ್ಯಬಹುದು ಎಂದು ಹೇಳಿದರು.

ಇನ್ನೊಂದು ಜನ್ಮಕ್ಕೆ ಹೋಗುವಾಗ ಈ ಜನ್ಮದ ಸಂಪತ್ತು ಪುಣ್ಯದ ರೂಪದಲ್ಲಿ ಪರಿವರ್ತನೆಗೊಂಡಾಗ ಮಾತ್ರ ಮುಂದಿನ ಜನ್ಮಕ್ಕೆ ಒಯ್ಯಲು ಬರುತ್ತದೆ. ಮನೆ ಮನೆಗೆ ಭಿಕ್ಷೆ ಕೇಳುವ ಭಿಕ್ಷುಕ ಕೇವಲ ಭಿಕ್ಷುಕನಲ್ಲ. ಅವನೊಬ್ಬ ಶಿಕ್ಷಕನೂ ಆಗಿರುತ್ತಾನೆ. ಹಿಂದಿನ ಜನ್ಮದಲ್ಲಿ ನಾನೂ ನಿನ್ನಂತೆಯೇ ಶ್ರೀಮಂತನೇ ಆಗಿದ್ದೆ. ಆದರೆ ಆಗ ಯಾರಿಗೂ ದಾನ ಮಾಡದ ಕಾರಣ ಈ ಜನ್ಮದಲ್ಲಿ ನನ್ನ ಕೈಗೆ ಭಿಕ್ಷಾಪಾತ್ರೆ ಬಂದಿದೆ. ಆದರೆ ಈ ಜನ್ಮದಲ್ಲಿ ಸುದೈವದಿಂದ ನಿನಗೆ ಶ್ರೀಮಂತಿಕೆ ಬಂದಿದೆ. ಈಗ ದಾನ ಮಾಡಿ ಮುಂದಿನ ಜನ್ಮದಲ್ಲಿಯೂ ಶ್ರೀಮಂತನಾಗು ಎಂಬ ಪಾಠವನ್ನು ಹೇಳುತ್ತಾನೆ. ಪ್ರತಿಯೊಬ್ಬರೂ ನೆರೆ ಹಾವಳಿ, ಪ್ರಕೃತಿ ವಿಕೋಪಕ್ಕೆ ಸಿಲುಕಿದ ಸಂತ್ರಸ್ತರಿಗೆ ಶಕ್ತಿ ಮೀರಿ ನೆರವು ನೀಡಿ ಕಷ್ಟದಲ್ಲಿದ್ದವರ ಕಣ್ಣೀರು ಒರೆಸಬೇಕು ಎಂದು ಹೇಳಿದರು.

ಜೈನಾಪುರದ ರೇಣುಕ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಕರಭಂಟನಾಳ ಶಿವಕುಮಾರ ಸ್ವಾಮೀಜಿ, ಸಿದ್ದರಾಮಯ್ಯ ಶಾಸ್ತ್ರಿಗಳು ಇದ್ದರು.

ಶರಣೆ ನೀಲಮ್ಮ ಐನೋಳ್ಳಿ ಭಕ್ತಿ ಸಂಗೀತ ನೀಡಿದರು. ಮಂಜುನಾಥ ದೇವರು ನಿರೂಪಿಸಿದರು. ಕಾರಟಗಿಯ ಚನ್ನಬಸಯ್ಯ ಮುತ್ತಿನಪೆಂಡಿಮಠ, ಎಮ್ಮಿಗನೂರಿನ ಘನಮಠದಯ್ಯ ಜ್ಯೋತಿ ಸ್ವಾಮಿ, ಪುಣೆಯ ನವನಾಥ ರಶ್ಮಿ ವಾರದ, ಬ್ಯಾಡಗಿಹಾಳದ ಚಂದ್ರಕಾಂತ ನಿರ್ಮಲ ಬಗಲಿ, ಕಲಕೇರಿಯ ಶರಣಯ್ಯ ನಿರ್ಮಲ ಮಠಪತಿ, ಅತನೂರಿನ ಯಲ್ಲಾಲಿಂಗ ಮಹಾದೇವಿ ಜಮಾದಾರ, ಅಫ್ಜಲಪುರದ ಬಸಯ್ಯ ಹಿರೇಮಠ, ಜೇವರ್ಗಿಯ ಜಗದೀಶ ಗಾಯತ್ರಿ ಉಕನಾಳ, ಬಾಗಲಕೋಟೆಯ ಸಿದ್ದರಾಮಪ್ಪ ಪಾರ್ವತಿ ಜುಮನಾಳ ಹಾಗೂ ಸಾಂಗಲಿಯ ಸಂಗಪ್ಪ ಕೋಹಳ್ಳಿ ಪೂಜೆ ಹಾಗೂ ದಾಸೋಹ ಸೇವೆ ಸಲ್ಲಿಸಿದರು.

Leave a Reply

Your email address will not be published. Required fields are marked *