More

  ಮಕ್ಕಳ ವಿಜ್ಞಾನ ಹಬ್ಬಕ್ಕೆ ಸಕಲ ಸಿದ್ಧತೆ

  ಶ್ರೀರಂಗಪಟ್ಟಣ: ಐತಿಹಾಸಿಕ ಶ್ರೀರಂಗಪಟ್ಟಣದಲ್ಲಿ ಜ.7ರಿಂದ 4 ದಿನಗಳ ಕಾಲ ನಡೆಯಲಿರುವ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಹಬ್ಬಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ತಿಳಿಸಿದರು.
   
  ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
   
  ರಾಜ್ಯ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಮಕ್ಕಳ ವಿಜ್ಞಾನ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಮಿತಿ ಸದಸ್ಯರು ಕಾರ್ಯಕ್ರಮ ಯಶಸ್ವಿಗೆ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
   
  ಕಾರ್ಯಕ್ರಮದ ಯಶಸ್ಸಿಗೆ ಪಕ್ಷಾತೀತವಾಗಿ ಎಲ್ಲ ಮುಖಂಡರೂ ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
   
  ರಾಜ್ಯದ ಪ್ರತಿಭಾವಂತ ನೂರಾರು ವಿದ್ಯಾರ್ಥಿಗಳ ಆಗಮನ: ರಾಜ್ಯದ ಸರ್ಕಾರಿ ಶಾಲೆಗಳ 6ರಿಂದ 8ನೇ ತರಗತಿವರೆಗಿನ ಆಯ್ದ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಹೊರ ರಾಜ್ಯಗಳಿಂದ ಸುಮಾರು 450ಕ್ಕೂ ಅಧಿಕ ವಿದ್ಯಾರ್ಥಿಗಳು ವಿಜ್ಞಾನ ಹಬ್ಬಕ್ಕೆ ಆಗಮಿಸುತ್ತಿದ್ದಾರೆ.
   
  ವಿದ್ಯಾರ್ಥಿಗಳ ವಸತಿ ಸೌಲಭ್ಯಕ್ಕಾಗಿ ಸ್ಥಳೀಯ ವಿದ್ಯಾರ್ಥಿಗಳ ಮನೆಗಳನ್ನು ಆಯ್ಕೆ ಮಾಡಿದ್ದು, ಅವರ ಸಂಪೂರ್ಣ ನಿರ್ವಹಣೆಗಾಗಿ ಸಂಪನ್ಮೂಲ ವ್ಯಕ್ತಿಗಳ ತಂಡ ರಚಿಸಲಾಗಿದೆ. ಇದರೊಂದಿಗೆ 200ಕ್ಕೂ ಹೆಚ್ಚು ಮಾರ್ಗದರ್ಶಿ ಶಿಕ್ಷಕರು, ಸಂಪನ್ಮೂಲ ವ್ಯಕ್ತಿಗಳು, ಸಹ ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ಮೂಲ ಸೌಕರ್ಯ, ವೈದ್ಯಕೀಯ ಸೇವೆ ಆಂಬ್ಯುಲೆನ್ಸ್, ವಸತಿ, ಊಟ ಸೇರಿದಂತೆ ಇತರ ಮೂಲ ಸೌಕರ್ಯಗಳನ್ನು ಬಹಳ ವ್ಯವಸ್ಥಿತವಾಗಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
   
  ವಿಜ್ಞಾನ ಹಬ್ಬದ ಬೃಹತ್ ಮೆರವಣಿಗೆ: ಜ.7ರ ಬೆಳಗ್ಗೆ 10 ಗಂಟೆಗೆ ಪಟ್ಟಣದ ಐತಿಹಾಸಿಕ ರಂಗನಾಥಸ್ವಾಮಿ ದೇವಸ್ಥಾನದ ಮೈದಾನದಿಂದ ಕಾರ್ಯಕ್ರಮದ ವೇದಿಕೆವರೆಗೆ ಮೆರವಣಿಗೆ ನಡೆಯಲಿದೆ. ಸಂಜೆ 4 ಗಂಟೆಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಸಮ್ಮುಖದಲ್ಲಿ ಅಧಿಕೃತವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
   
  ಮದುವಣಗಿತ್ತಿಯಂತೆ ಶೃಂಗಾರಗೊಂಡ ಪದವಿಪೂರ್ವ ಕಾಲೇಜು:
  ರಾಜ್ಯಮಟ್ಟದ ವಿಜ್ಞಾನ ಹಬ್ಬಕ್ಕೆ ಪಟ್ಟಣದ ಸರ್ಕಾರಿ ಕಾಲೇಜು ಕಟ್ಟಡ ಸಿದ್ಧಗೊಳ್ಳುತ್ತಿದೆ. ಬಣ್ಣ ಬಣ್ಣದ ವಿವಿಧ ವಿಜ್ಞಾನ ಮಾದರಿಗಳು ಹಾಗೂ ಶಾಲಾ ಮಕ್ಕಳ ಕಲಾಕೃತಿಗಳು, ಅಕ್ಟೋಪಸ್, ಕಲಿ-ನಲಿಯ ಚಿತ್ತಾರದೊಂದಿಗೆ ಟಿಪ್ಪು ಕಾಲದ ಕೋಟೆಯ ಬಾಗಿಲಿನಂತೆ ಸ್ವಾಗತ ಕಮಾನುಗಳು ಹಾಗೂ ಪಿರಂಗಿಗಳ ಮಾದರಿಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ ಎಂದು ತಿಳಿಸಿದರು.
   
  ಟಿಪ್ಪು ವಿಚಾರದಲ್ಲಿ ರಾಜಕೀಯ ಬೇಡ: ಐತಿಹಾಸಿಕ ಶ್ರೀರಂಗಪಟ್ಟಣವನ್ನಾಳಿದ ದೊರೆ ಟಿಪ್ಪುಸುಲ್ತಾನ್ ಆ ಕಾಲದಲ್ಲಿ ವೈಜ್ಞಾನಿಕ ಮಾದರಿಯನ್ನು ಅನುಸರಿಸಿ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ರಾಕೆಟ್ ಉಡಾವಣೆ ಮಾಡಿ ಬ್ರಿಟೀಷರ ವಿರುದ್ಧ ಹೋರಾಟ ನಡೆಸಿದ್ದ ವಿಚಾರದ ಪ್ರತೀತಿ ಇದ್ದು, ವಿಜ್ಞಾನಕ್ಕೂ ಪಟ್ಟಣದ ನಂಟಿಗೂ ಇಲ್ಲಿ ಪ್ರಚಾರವಿದೆ. ಈ ವಿಚಾರದಲ್ಲಿ ಮಕ್ಕಳ ಸುಂದರ ಹಬ್ಬಕ್ಕೆ ಯಾವುದೇ ರಾಜಕೀಯ ಲೇಪನ ಬೇಡ ಎಂದು ತಿಳಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts