More

  ರಸ್ತೆ ಉಬ್ಬು ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ

  ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ-ಬಳ್ಳಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ನಿಯಂತ್ರಿಸಲು ಕೂಡಲಕುಪ್ಪೆ ಗೇಟ್ ಬಳಿ ರಸ್ತೆ ಉಬ್ಬು ನಿರ್ಮಿಸುವಂತೆ ಆಗ್ರಹಿಸಿ ಕೇಂಬ್ರಿಡ್ಜ್ ಶಾಲಾ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು.

  ತಾಲೂಕಿನ ಕಿರಂಗೂರು, ಕೂಡಲಕುಪ್ಪೆ, ದಸರಗುಪ್ಪೆ, ಬಲ್ಲೇನಹಳ್ಳಿ ಹಾಗೂ ಚಿಂದಗಿರಿಕೊಪ್ಪಲು ಗ್ರಾಮಸ್ಥರು ಹಾಗೂ ನೂರಾರು ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಹೆದ್ದಾರಿ ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

  ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಉದ್ಯೋಗದಾತ ಸಂಸ್ಥೆಯ ಸಂಸ್ಥಾಪಕ ರುಕ್ಮಾಂಗದ, ಕೂಡಲಕುಪ್ಪೆ ಗೇಟ್ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ವೃತ್ತವಾಗಿದೆ. ಶ್ರೀರಂಗಪಟ್ಟಣದಿಂದ ಶಿವಮೊಗ್ಗ, ಬಳ್ಳಾರಿ, ಮುಂಬೈಗೆ ಸಾಗುವ ರಾಷ್ಟ್ರೀಯ ಹೆದ್ದಾರಿಯಾಗಿದೆ. ಈ ರಸ್ತೆಯಲ್ಲಿ ನಿತ್ಯ ಸಾವಿರಾರು ಬೃಹತ್ ಗಾತ್ರದ ಸರಕು-ಸಾಗಣೆಯ ಬೃಹತ್ ಲಾರಿಗಳು, ಬಸ್‌ಗಳು, ಕಾರು, ತ್ರಿಚಕ್ರ ಮತ್ತು ದ್ವಿಚಕ್ರ ವಾಹನಗಳು ಸಂಚರಿಸುತ್ತವೆ. ಅಧಿಕ ವಾಹನ ದಟ್ಟಣೆಯಿಂದ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಅಪಘಾತಕ್ಕೊಳಗಾಗುವ ಪಾದಚಾರಿಗಳು ಮೃತಪಟ್ಟಿದ್ದಾರೆ. ಈ ವೃತ್ತದ ಸಮೀಪದಲ್ಲಿರುವ ಕೇಂಬ್ರಿಡ್ಜ್ ಶಾಲೆಯ ವಿದ್ಯಾರ್ಥಿಗಳು ಜೀವ ಕೈಯಲ್ಲಿಡಿದು ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಪಾಲಕರು ಆತಂಕದಲ್ಲೇ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಹಾಗಾಗಿ, ಕೂಡಲಕುಪ್ಪೆ ಗೇಟ್ ಬಳಿ ಎರಡು ದಿಕ್ಕುಗಳಲ್ಲೂ ರಸ್ತೆ ಉಬ್ಬು ನಿರ್ಮಿಸಬೇಕು. ಕೆಲವು ಕಿ.ಲೋ ಮೀಟರ್‌ವರೆಗೆ ರಸ್ತೆ ವಿಸ್ತರಣೆಗೊಳಿಸಬೇಕು. ವಾಹನಗಳ ವೇಗ ಮತ್ತು ದಟ್ಟಣೆ ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು.

  ಪ್ರತಿಭಟನೆಯಲ್ಲಿ ದಸರಗುಪ್ಪೆ ಗ್ರಾಮದ ಮುಖಂಡ ಮಂಜುನಾಥ್, ಸುಂದರ್, ಧನಂಜಯ್, ಲೋಕೇಶ್, ಕೂಡಲಕುಪ್ಪೆ ಸೋಮಶೇಖರ್, ರಾಂಪುರ ಪುಟ್ಟು, ಸಿದ್ದರಾಜು, ಧನಂಜಯ್ ಸೇರಿದಂತೆ ವಿವಿಧ ಗ್ರಾಮಸ್ಥರು ಭಾಗವಹಿಸಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts