ಮರಳು ದಂಧೆಯಿಂದ ವೆಲ್ಲೆಸ್ಲಿ ಸೇತುವೆಗೆ ಅಪಾಯ

ಶ್ರೀರಂಗಪಟ್ಟಣ: ಐತಿಹಾಸಿಕ ಹಿನ್ನೆಲೆಯುಳ್ಳ ವೆಲ್ಲೆಸ್ಲಿ ಸೇತುವೆ ಕೆಳಭಾಗದ ಕಾವೇರಿ ನದಿಯಲ್ಲಿ ದಂಧೆಕೋರರು ಎಗ್ಗಿಲ್ಲದೆ ಮರಳು ತೆಗೆಯುತ್ತಿರುವುದರಿಂದ ಆತಂಕ ಎದುರಾಗಿದೆ.

ವೆಲ್ಲೆಸ್ಲಿ ಸೇತುವೆ 200 ವರ್ಷಕ್ಕಿಂತಲೂ ಹಳೆಯದಾಗಿದ್ದು, ಸೇತುವೆ ಕೆಳಭಾಗದಲ್ಲಿ ಹಗಲು ರಾತ್ರಿಯನ್ನದೆ ಲೂಟಿಕೋರರು ಮರಳು ತೋಡಿ ಹೊಂಡ ಸೃಷ್ಟಿಸಿದ್ದಾರೆ.

ಇದೀಗ ಈ ಸೇತುವೆಗೆ ಅಪಾಯ ಬಂದೊದಗಿದೆ. ಈ ಬಗ್ಗೆ ಪುರಾತತ್ವ, ಕಂದಾಯ ಅಥವಾ ಪೊಲೀಸ್ ಸೇರಿದಂತೆ ಯಾವ ಅಧಿಕಾರಿಗಳ ಭಯವೂ ಇಲ್ಲದೆ ಮರಳು ದಂಧೆಕೋರರು ದಂಧೆ ಮುಂದುವರಿಸಿದ್ದಾರೆ.
ಕೇವಲ ಕಲ್ಲಿನ ಕಂಬಗಳ ಆಧಾರದ ಮೇಲೆ ಸುಣ್ಣದ ಗಾರೆ, ಇಟ್ಟಿಗೆಯಿಂದ ನಿರ್ಮಿಸಿರುವ ಸೇತುವೆ ಅಭದ್ರತೆಗೆ ಮರಳು ದಂಧೆ ಕಾರಣವಾಗಲಿದ್ದು, ಈ ದಂಧೆ ಹೀಗೇ ಮುಂದುವರಿದರೆ ಸೇತುವೆ ಅಪಾಯಕ್ಕೆ ಸಿಲುಕುವುದು ನಿಶ್ಚಿತ ಎಂಬುದು ಜನರ ವಾದವಾಗಿದೆ.

ಸೇತುವೆ ಕೆಳಭಾಗದಲ್ಲೆ ಮರಳು ತೋಡಿ ಗುಡ್ಡೆ ಮಾಡಿರುವ ಮರಳು ಲೂಟಿಕೋರರು ಎತ್ತಿನಗಾಡಿಗಳ ಸಹಾಯದಿಂದ ರಾಜರೋಷವಾಗಿ ರಾತ್ರಿ ಹಾಗೂ ಮುಂಜಾನೆ ವೇಳೆ ಮರಳು ಸಾಗಣೆ ಮಾಡುತ್ತಿದ್ದಾರೆ.

ಸೇತುವೆ ರಕ್ಷಣೆಗಾಗಿ ಕೂಡಲೇ ಮರಳು ದಂಧೆಗೆ ಕಡಿವಾಣ ಹಾಕಬೇಕು ಎಂದು ಸ್ಥಳೀಯರು ತಾಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.