ಶ್ರೀರಂಗಪಟ್ಟಣ ದಸರಾಗೆ 2 ಕೋಟಿ ರೂ. ಬಿಡುಗಡೆ

ಕೆ.ಆರ್.ಸಾಗರ: ಪಾರಂಪರಿಕ ಹಬ್ಬವಾದ ದಸರೆಯನ್ನು ಶ್ರೀರಂಗಪಟ್ಟಣದಲ್ಲಿ ವಿಜೃಂಭಣೆಯಿಂದ ಆಚರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವಸತಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.

ದಸರೆಗೆ ಸಿದ್ಧತೆ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ 7 ಗಂಟೆಗೆ ಕೆಆರ್‌ಎಸ್‌ಗೆ ಆಗಮಿಸಿದ ಸಚಿವರು, ಮೈಸೂರು- ಕೆ.ಆರ್.ಎಸ್. ರಸ್ತೆ, ಪೇಪರ್‌ಮಿಲ್ ವೃತ್ತ, ಮೊಗರಹಳ್ಳಿ ಮಂಠಿ, ಬೆಳಗೊಳ ರಸ್ತೆಗಳನ್ನು ವೀಕ್ಷಿಸಿದರು. ಬಳಿಕ ಕೆ.ಆರ್.ಸಾಗರದಲ್ಲಿ ನಿರ್ಮಾಣವಾಗುತ್ತಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ವಿಶ್ವೇಶ್ವರಯ್ಯನವರ ಪತ್ರಿಮೆ ಕಾಮಗಾರಿ ಪರಿಶೀಲಿಸಿದರು.

ನಂತರ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಭರ್ತಿಯಾಗಿರುವ ಅಣೆಕಟ್ಟೆಯನ್ನು ನೋಡಿ ಹರ್ಷವ್ಯಕ್ತಪಡಿಸಿ ಬೃಂದಾವನವನ್ನು ವೀಕ್ಷಿಸಿದರು. ಬಳಿಕ ನಡೆದ ಸಭೆಯಲ್ಲಿ ಅಧಿಕಾರಿಗಳಿಂದ ಕಾಮಗಾರಿಗಳ ಮಾಹಿತಿ ಸಂಗ್ರಹಿಸಿ ಮಾತನಾಡಿದರು.

ದಸರೆ ಆರಂಭವಾಗುವಷ್ಟರಲ್ಲಿ ಎಲ್ಲ ರಸ್ತೆಗಳನ್ನು ದುರಸ್ತಿಪಡಿಸಬೇಕು. ರಸ್ತೆ ಬದಿಯಲ್ಲಿರುವ ಜಂಗಲ್ ತೆಗೆಯಬೇಕು. ವಿದ್ಯುತ್‌ದೀಪಗಳನ್ನು ಅಳವಡಿಸಬೇಕು. ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ಸಂಬಂಧಪಟ್ಟ ಇಲಾಖೆಗಳು ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರು, ಶೌಚಗೃಹದ ಸೌಲಭ್ಯ ಕಲ್ಪಿಸಬೇಕು. ಪೊಲೀಸ್ ಇಲಾಖೆ ಭದ್ರತೆಗೆ ಆದ್ಯತೆ ನೀಡಬೇಕೆಂದು ಹೇಳಿದರು.

ಶ್ರೀರಂಗಪಟ್ಟಣ ದಸರಾಗೆ 2 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ನಾಲ್ಕು ದಿನ ಆಚರಿಸಲು ಕ್ರಮ ಕೈಗೊಳ್ಳಲಾಗಿದೆ. 15 ಲಕ್ಷ ರೂ. ವೆಚ್ಚದ ದೀಪಾಲಂಕಾರ ಮಾಡಲು ಸೆಸ್ಕ್‌ಗೆ ಸೂಚಿಸಿದ್ದೇನೆ ಎಂದರು.
ಲ್ಯಾಂಡ್ ಪಾಂಡ್ ಗೊತ್ತಿಲ್ಲ

ಕೆ.ಆರ್.ಎಸ್. ಬೃಂದಾವನ್ನು ದೊಡ್ಡ ಪ್ರವಾಸಿ ತಾಣ ಮಾಡಲಾಗುವುದು. ಕಬಿನಿ ಜಲಾಶಯವನ್ನೂ ಅಧಿವೃದ್ಧಿಪಡಿಸುವುದು ಸಿಎಂ ಯಡಿಯೂರಪ್ಪ ಅವರ ಗುರಿ. ಈಗಾಗಲೇ ಈ ಕಾರ್ಯಕ್ಕೆ 65 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದಾರೆ ಎಂದು ಸಚಿವ ಸೋಮಣ್ಣ ತಿಳಿಸಿದರು.

ನನಗೆ ಲ್ಯಾಂಡ್ ಪಾಂಡ್ ಗೊತ್ತಿಲ್ಲ:  ನಾವು ಬೆಂಗಳೂರಿನವರು, ಕರ್ನಾಟಕದವರು. ನಮಗೂ ಬುದ್ಧಿ ಇದೆ. ನಮಗೆ ಇಷ್ಟವಾದಂತೆ ಮಾಡುತ್ತೇವೆ. ಹಿಂದಿನ ಸರ್ಕಾರಕ್ಕೆ ಕೋಟಿ ನಮನ ಎಂದು ಡಿಸ್ನಿಲ್ಯಾಂಡ್ ಬಗೆಗಿನ ಪ್ರಶ್ನೆಗೆ ಉತ್ತರಿಸಿದರು.

ಮೈಸೂರಿನಲ್ಲಿ ಗ್ರಾಮೀಣ ದಸರಾ ಮಾಡಲು ಜಿ.ಪಂ.ಗೆ 50 ಲಕ್ಷ, ಪುರಸಭೆಗಳಿಗೆ ತಲಾ 1 ಲಕ್ಷ, ಮಹಾನಗರ ಪಾಲಿಕೆಯ ಪ್ರತಿ ವಾರ್ಡ್‌ಗೆ ತಲಾ 1.5 ಲಕ್ಷ ರೂ. ಬಿಡುಗಡೆ ಮಾಡಲಾಗುವುದು. ಚಾಮರಾಜನಗರಕ್ಕೆ 1 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಯುವ ದಸರಾಕ್ಕೆ ಈ ಬಾರಿ 278 ಕಾಲೇಜು ವಿದ್ಯಾರ್ಥಿಗಳು ಬಂದಿದ್ದಾರೆ. ಸರ್ಕಾರಿ ಕಾಲೇಜುಗಳಿಗೆ ಹೆಚ್ಚು ಆದ್ಯತೆ ನೀಡಿದ್ದು, ಈ ಬಾರಿ 3 ದಿನ ಹೆಚ್ಚಾಗಿ ಯುವ ದಸರಾ ನಡೆಯಲಿದೆ ಎಂದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ, ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ತಹಸೀಲ್ದಾರ್ ನಾಗೇಶ್, ಪ್ಡಿಬ್ಲೂೃಡಿ ಎಸ್.ಇ.ವೀರಭದ್ರಯ್ಯ, ಇಇ ಹರ್ಷ, ಎಇಇ ರಾಜು, ಕಾವೇರಿ ನೀರಾವರಿ ನಿಗಮದ ಸಿಇ ಶಂಕರೇಗೌಡ, ಎಸ್.ಇ ವಿಜಯಕುಮಾರ್, ಇಇ ಎಂ.ಜಿ.ರಾಜು ಮೊದಲಾದವರಿದ್ದರು. 

Leave a Reply

Your email address will not be published. Required fields are marked *