ಮಹಾಭಾರತ ಯುದ್ಧದಲ್ಲಿ ಪಾಂಡವರು ಗೆದ್ದಂತೆ ಬಿಜೆಪಿ ಗೆಲ್ಲಲಿದೆ: ಶ್ರೀರಾಮುಲು

ಬಳ್ಳಾರಿ: ಮಹಾಭಾರತ ಯುದ್ಧದಲ್ಲಿ ಪಾಂಡವರು ಗೆದ್ದಂತೆ, ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಶಾಸಕ ಶ್ರೀರಾಮುಲು ತಿಳಿಸಿದ್ದಾರೆ.

ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯ ಆಕಾಂಕ್ಷಿ ಅಭ್ಯರ್ಥಿ ಜೆ. ಶಾಂತಾ ಅವರ ಮಗಳ ಮದುವೆಯಲ್ಲಿ ಮಾತನಾಡಿ, ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಮೂಲಕ ಇತಿಹಾಸ ಮರುಕಳಿಸಲಿದೆ. ಅದೆಷ್ಟೇ ಪ್ರಭಾವಿಗಳು ಬಂದರೂ ನಾವು ಗೆಲ್ಲುತ್ತೇವೆ. ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದೇನೆ. ಬೆನ್ನು ತೋರಿಸಿ ಹೋಗುವ ಜಾಯಮಾನ ನನ್ನದಲ್ಲ ಎಂದರು.

ಈ ಕುರಿತು ಪಕ್ಷದ ವರಿಷ್ಠರು ಖಡಕ್ ಸೂಚನೆ ನೀಡಿದ್ದಾರೆ. ಸರ್ಕಾರವೇ ಬಳ್ಳಾರಿಗೆ ಬಂದರೂ ನಾವೇ ಗೆದ್ದು ತೋರಿಸುತ್ತೇವೆ. ಅಭ್ಯರ್ಥಿ ಆಯ್ಕೆ ಅಂತಿಮವಾಗಿಲ್ಲ. ಐದು ಜನರ ಪಟ್ಟಿಯನ್ನು ಹೈಕಮಾಂಡ್​ಗೆ ಕಳುಹಿಸಲಾಗಿದ್ದು, ನಾಳೆ ಅಂತಿಮ ಅಭ್ಯರ್ಥಿ ಘೋಷಣೆಯಾಗಲಿದೆ. ಯಾರಿಗೆ ಟಿಕೆಟ್ ಸಿಕ್ಕಿದರೂ ಗೆಲ್ಲಿಸುತ್ತೇವೆ ಎಂದರು.

ನಾವು ಸೈನಿಕರಂತೆ ಕೆಲಸ ಮಾಡುತ್ತೇವೆ
ಮಗಳ ಮದುವೆ ಸಂಭ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಶಾಂತಾ, ಪಕ್ಷದ ವರಿಷ್ಠರ ಹೇಳಿಕೆಗೆ ನಾವು ಬದ್ಧ. ನಾವು ಸೈನಿಕರಿದ್ದಂತೆ ಪಕ್ಷ ಸೂಚಿಸಿದಂತೆ ನಡೆಯುತ್ತೇವೆ. ಚುನಾವಣೆ ಹೋರಾಟಕ್ಕೆ ಸಜ್ಜಾಗುತ್ತೇವೆ. ಯಾರೇ ಅಭ್ಯರ್ಥಿಯಾದರೂ ಸೈನಿಕರಂತೆ ಹೋರಾಟ ಮಾಡುತ್ತೇವೆ. ಟಿಕೆಟ್ ಸಿಕ್ಕರೆ ಬಳ್ಳಾರಿ ಮಗಳಾಗಿ ಕೆಲಸ ಮಾಡ್ತೇನೆ ಎಂದರು. (ದಿಗ್ವಿಜಯ ನ್ಯೂಸ್​)