ಜನರನ್ನು ದಾರಿತಪ್ಪಿಸಲು ಮುಂದಾದ ಸಿಎಂ: ಶಾಸಕ ಶ್ರೀರಾಮುಲು ಆರೋಪ

ಬಳ್ಳಾರಿ: ಆಡಿಯೋ, ವಿಡಿಯೋ ಡಬ್ಬಿಂಗ್‌ನಲ್ಲಿ ರಾಜ್ಯದಲ್ಲಿ ಸಿಎಂ ಕುಮಾರ ಸ್ವಾಮಿ ನಿಸ್ಸೀಮರು. ಬಿಎಸ್‌ವೈ ಕುರಿತ ಆಡಿಯೋ ಬಿಡುಗಡೆ ಮಾಡುವ ಮೂಲಕ ರಾಜ್ಯದ ಜನರನ್ನು ದಾರಿ ತಪ್ಪಿಸುವ ಕೆಲಸಕ್ಕೆ ಕುಮಾರ ಸ್ವಾಮಿ ಮುಂದಾಗಿದ್ದಾರೆ ಎಂದು ಮೊಳಕಲ್ಮೂರು ಶಾಸಕ ಬಿ.ಶ್ರೀರಾಮುಲು ಹೇಳಿದ್ದಾರೆ.

ನಕಲಿ ಆಡಿಯೋ ಬಿಡುಗಡೆ ಮಾಡುವ ಮೂಲಕ ಬಿಎಸ್‌ವೈ ವಿರುದ್ಧ ತಂತ್ರ, ಕುತಂತ್ರ ಎಣಿಯಲಾಗುತ್ತದೆ. ಒಂದಡೆ ಕುಮಾರಸ್ವಾಮಿಯವರು ಆಡಿಯೋ ನಾನೇ ಮಾಡಿಸಿದ್ದು, ಇನ್ನೊಂದಡೆ ಅದು ಬಿಎಸ್‌ವೈ ಅವರದ್ದು ಅಲ್ಲ ಎಂದು ಹೇಳುವ ಮೂಲಕ ದ್ವಂದ್ವ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯದ ಬಜೆಟ್ ಮಂಡಿಸುವ ಅಗತ್ಯಕ್ಕಿಂತ ಸಿಎಂಗೆ ಆಡಿಯೋ ಬಿಡುಗಡೆ ಮುಖ್ಯ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಸ್ಪೀಕರ್ ಹೆಸರನ್ನು ಹಾಳು ಮಾಡುವ ಉದ್ದೇಶದಿಂದ ಅವರ ಹೆಸರನ್ನು ಇದರಲ್ಲಿ ಎಳೆಯಲಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ನಾನು ಕ್ಲರ್ಕ್ ಇದ್ದಹಾಗೆ ಎಂದು ಈ ಹಿಂದೆ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಇವರು ಗೆದ್ದಿರುವ 35 ಸ್ಥಾನಕ್ಕೆ ಡಿಸಿ ಹುದ್ದೆ ಕೊಡಬೇಕಿತ್ತಾ ಎಂದು ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹಿಯಾಳಿಸಿದರು.

ಗುತ್ತಿಗೆದಾರರಿಂದ ಸಿಎಂ ಹೋಟೆಲ್ ಬಿಲ್ ಪಾವತಿ
ಸಿಎಂ ಕುಮಾರಸ್ವಾಮಿ ಉಳಿದುಕೊಳ್ಳುವ ಪಂಚತಾರಾ ಹೋಟೆಲ್‌ನ ಕೋಟ್ಯಂತರ ಬಿಲ್ ಅನ್ನು ಪಿಡಿಬ್ಲುೃಡಿ ಗುತ್ತಿಗೆದಾರರು ಕಟ್ಟುತ್ತಿದ್ದಾರೆ. ದೇವೇಗೌಡ ಕುಟುಂಬ ಸಾಕಷ್ಟು ಜನರಲ್ಲಿ ಅಶಾಂತಿ ಮೂಡಿಸಿದೆ. ಮಾಜಿ ಸಚಿವ ಎ.ಮಂಜು, ರಾಜಣ್ಣ ಸಹ ಇವರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಬಜೆಟ್ ನಡೆಸಲು ಯಾವುದೇ ವಿರೋಧವಿಲ್ಲ. ಆದರೆ, ಬಜೆಟ್ ಪುಸ್ತಕ ನೀಡದಿರುವುದು ಮತ್ತು ಸರ್ಕಾರದ ಧೋರಣೆಯಿಂದ ಬಿಜೆಪಿ ಶಾಸಕರು ಹೊರನಡೆದರು ಎಂದು ಶ್ರೀರಾಮುಲು ಹೇಳಿದರು.

ರಾಜ್ಯದಲ್ಲಿ ಯಾವುದೇ ಆಪರೇಷನ್ ಕಮಲ ನಡೆಸುತ್ತಿಲ್ಲ. ಇದೆಲ್ಲಾ ಕಾಂಗ್ರೆಸ್, ಜೆಡಿಎಸ್ ಡ್ರಾಮ. ಅವರೇ ಸೃಷ್ಟಿಸುತ್ತಿದ್ದಾರೆ. ಶಾಸಕ ಗಣೇಶ್ ಬಂಧನಕ್ಕೆ ಪಕ್ಷದಿಂದ ಒತ್ತಾಯಿಸಲಾಗಿದೆ. ಶಾಸಕರಾದ ಗಣೇಶ, ನಾಗೇಂದ್ರ ನಮ್ಮ ಸಂಪರ್ಕದಲ್ಲಿಲ್ಲ. ನಾವು ಯಾವುದೇ ಅತೃಪ್ತ ಶಾಸಕರನ್ನು ಸಂಪರ್ಕ ಮಾಡಿಲ್ಲ. ಅವರು ಬಾಂಬೆಗೆ ತೆರಳಿದರೆ ಅದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ. ಅತೃಪ್ತರು ಪಕ್ಷಕ್ಕೆ ಬರುವ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು.
| ಶ್ರೀರಾಮುಲು
ಮೊಳಕಾಲ್ಮುರು ಶಾಸಕ