ಆಪರೇಷನ್ ಮಾಡೋದಾದ್ರೆ ಸಿದ್ದರಾಮಯ್ಯಗೆ ಹೇಳಿ ಮಾಡ್ತೀವಿ: ಶ್ರೀರಾಮುಲು

ಬಳ್ಳಾರಿ: ನಾವು ಯಾವುದೇ ಆಪರೇಷನ್ ಮಾಡಿಲ್ಲ, ಆಪರೇಷನ್ ಅವರದ್ದೇ ಸೃಷ್ಟಿ. ಆಪರೇಷನ್ ಮಾಡುವುದಾದರೆ ಸಿದ್ದರಾಮಯ್ಯ ಅವರಿಗೆ ಹೇಳಿಯೇ ಮಾಡುತ್ತೇವೆ ಎಂದು ಶಾಸಕ ಶ್ರೀರಾಮುಲು ಸಮ್ಮಿಶ್ರ ಸರ್ಕಾರಕ್ಕೆ ಟಾಂಗ್​ ನೀಡಿದ್ದಾರೆ.

ಬಳ್ಳಾರಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕುಳಿತು ಆಪರೇಷನ್ ಕಮಲದ ಸೃಷ್ಟಿ ಮಾಡುತ್ತಿದ್ದಾರೆ. ಅವರದ್ದೇ ಸರ್ಕಾರವಿದೆ, ಅವರು ಏನ್ ಬೇಕಾದರೂ ತನಿಖೆ ಮಾಡಲಿ. ನಾನು ಇಷ್ಟು ದಿನ ತೆಲಂಗಾಣದಲ್ಲಿದ್ದೆ. ನಮ್ಮ ಸಂಪರ್ಕದಲ್ಲಿ ಯಾರು ಇಲ್ಲ. ಬಿಜೆಪಿ ಯಾವುದೇ ಆಪರೇಷನ್ ನಡೆಸುವುದಿಲ್ಲ ಎಂದರು.

ನನ್ನನ್ನು ಸೇರಿ ಬಿಜೆಪಿ ಮುಖಂಡರ ಮೇಲೆ ಸರ್ಕಾರ ಬೇಹುಗಾರಿಕೆ ಮಾಡಿದೆ. ಬೇಹುಗಾರಿಕೆ ಮಾಡಿದರೆ ಏನು ಮಾಡುವುದಕ್ಕೆ ಆಗುವುದಿಲ್ಲ ಎಂದ ಅವರು, ಸರ್ಕಾರದ ಖಜಾನೆ ಖಾಲಿಯಾಗಿದೆ. ಅವರ ಬಳಿ ಯಾವ ಯೋಜನೆಗೂ ಹಣವಿಲ್ಲ. ಸಿಎಂ ತಮ್ಮ ಅವಧಿಯಲ್ಲಿ ಯಾವ ಯಾವ ಯೋಜನೆಗೆ ಎಷ್ಟು ಹಣ ಕೊಟ್ಟಿದ್ದಾರೆ ಶ್ವೇತ ಪತ್ರ ಹೊರಡಿಸಿ ಎಂದು ಆಗ್ರಹಿಸಿದರು. (ದಿಗ್ವಿಜಯ ನ್ಯೂಸ್)