More

    ದುಸ್ಥಿತಿಗೆ ತಲುಪಿತೇ ಗೋವಿಂದೇಗೌಡರ ಕಾಲದ ಗ್ರಂಥಾಲಯ?

    ಶೃಂಗೇರಿ: ಪಟ್ಟಣ ಹೊರವಲಯದ ಕಾಳಿಕಾಂಬಾ ದೇಗುಲದ ಸಮೀಪ ಸಾರ್ವಜನಿಕ ಗ್ರಂಥಾಲಯಕ್ಕೆ ಸ್ವಂತ ಕಟ್ಟಡವಿದೆ. ಆದರೆ ಪುಸ್ತಕಪ್ರಿಯರಿಗೆ, ದಿನಪತ್ರಿಕೆ ಓದಲು ಬರುವವರಿಗೆ ಕೂರಲು ಜಾಗದ ಕೊರತೆಯಿದೆ. ಅಲ್ಲದೆ ಪಟ್ಟಣದಿಂದ ದೂರವೂ ಇರುವುದರಿಂದ ಇತ್ತೀಚೆಗೆ ಇಲ್ಲಿಗೆ ಬರುವವರ ಸಂಖ್ಯೆಯೂ ಕ್ರಮೇಣ ಕಡಿಮೆಯಾಗುತ್ತಿದೆ.

    1980ರಿಂದಲೂ ಪಟ್ಟಣದಲ್ಲಿದ್ದ ಪುರಸಭೆ ವಾಚನಾಲಯ ಬಳಿಕ ಜಿಲ್ಲಾಡಳಿತದಿಂದ ಸಾರ್ವಜನಿಕ ಗ್ರಂಥಾಲಯವಾಗಿ ಸ್ಥಾಪನೆಗೊಂಡಿತ್ತು. ಬಸ್ ನಿಲ್ದಾಣದ ಸಮೀಪದ ಕೊಠಡಿಯಲ್ಲಿದ್ದ ಗ್ರಂಥಾಲಯಕ್ಕೆ ಪ್ರತಿದಿನ ಓದುಗರ ಸಂಖ್ಯೆ ಹೆಚ್ಚಿತ್ತು. ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಬಂದು ದಿನಪತ್ರಿಕೆ, ಪುಸ್ತಕ, ಮ್ಯಾಗಜೀನ್​ಗಳನ್ನು ಓದುತ್ತಿದ್ದರು.

    ಬಳಿಕ 1985ರಲ್ಲಿ ಅಂದಿನ ಶಿಕ್ಷಣ ಸಚಿವ ಎಚ್.ಜಿ.ಗೋವಿಂದೇಗೌಡರು ಪಟ್ಟಣದ ಹೊರವಲಯದಲ್ಲಿರುವ ಕಾಳಿಕಾಂಬಾ ದೇವಸ್ಥಾನದ ಸಮೀಪ ಕಾಲು ಎಕರೆ ಜಾಗದಲ್ಲಿ ಸಾರ್ವಜನಿಕ ಗ್ರಂಥಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. 1986ರಲ್ಲಿ ಗೋವಿಂದೇಗೌಡರೇ ಉದ್ಘಾಟಿಸಿದ್ದರು.

    ಏಳು ವರ್ಷಗಳ ಹಿಂದೆ ಕಟ್ಟಡದ ಪಕ್ಕದಲ್ಲಿ ಮತ್ತೊಂದು ಕಟ್ಟಡ ನಿರ್ವಿುಸಿ ಗ್ರಂಥಾಲಯದ ಸುತ್ತಲೂ ಕಾಂಪೌಂಡ್ ನಿರ್ವಿುಸಲಾಗಿದೆ. ಆದರೆ ಇಲ್ಲಿ ಓದುಗರ ಸಂಖ್ಯೆ ಕಡಿಮೆಯಾಗಿದೆ. ಪಟ್ಟಣದಲ್ಲಿದ್ದಾಗ ಪುಸ್ತಕ ಪಡೆಯಲು, ವೃತ್ತಪತ್ರಿಕೆ ಓದಲು ಸಾರ್ವಜನಿಕರು ನಿಯಮಿತವಾಗಿ ಭೇಟಿ ನೀಡುತ್ತಿದ್ದರು. ಈಗ ಅದು ಹೊರವಲಯದಲ್ಲಿ ಇರುವುದರಿಂದ ಹೋಗಲು ಕಷ್ಟವಾಗುತ್ತಿದೆ.

    ಗ್ರಂಥಾಲಯದಲ್ಲಿ ಕಥೆ, ಕಾದಂಬರಿ, ಪ್ರವಾಸ ಕಥನ, ಜೀವನಚರಿತ್ರೆ, ದಿಗ್ಗಜ ಸಾಹಿತಿಗಳ 25 ಸಾವಿರಕ್ಕೂ ಹೆಚ್ಚು ಸಾಹಿತ್ಯ ಪುಸ್ತಕಗಳು ಇವೆ. ಆದರೆ ಗ್ರಂಥಾಲಯದಲ್ಲಿ 2139 ಮಂದಿ ಸದಸ್ಯತ್ವ ಪಡೆದಿದ್ದಾರೆ. ದಿನಪತ್ರಿಕೆ ಓದಲು ಪ್ರತಿದಿನ 40ರಿಂದ 50ಜನ ಬರುತ್ತಾರೆ. ಆದರೆ ಇರುವ ಕಟ್ಟಡದ ಜಾಗ ಕಿರಿದು. ಕುರ್ಚಿ, ಬೆಂಚುಗಳು ಇದ್ದರೂ ಸ್ಥಳದ ಕೊರತೆಯಿಂದ ಕೂರಲು ಪರದಾಡುವ ಸ್ಥಿತಿ ಇದೆ. ಹೀಗಾಗಿ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ.

    ನಿರ್ವಹಣೆಯ ಕೊರತೆ: ಗ್ರಂಥಾಲಯ ಸುಸಜ್ಜಿತ ಕಟ್ಟಡ ಹೊಂದಿದ್ದರೂ ಹೊರಾವರಣದಲ್ಲಿ ಕುರುಚಲು ಗಿಡ, ಗಿಡಗಂಟಿ, ಮುಳ್ಳಿನ ಗಿಡಗಳು ಬೆಳೆದು ಗ್ರಂಥಾಲಯದ ಪರಿಸರ ಸೌಂದರ್ಯ ಹಾಳಾಗುತ್ತಿದೆ. ಓದುಗರಿಗೆ ಇದರಿಂದ ಕಿರಿಕಿರಿಯಾಗುತ್ತಿದೆ. ಒಬ್ಬರೇ ಗ್ರಂಥಪಾಲಕರು ಇದ್ದು, ಅವರು ಕೊಪ್ಪದಲ್ಲಿ ಕೂಡಾ ಕರ್ತವ್ಯ ನಿರ್ವಹಿಸಬೇಕು. ಏಳು ತಿಂಗಳಿನಿಂದ ಹಂಗಾಮಿ ಗ್ರಂಥಪಾಲಕಿಯನ್ನು ನೇಮಿಸಲಾಗಿದೆ.

    ಓದುಗರಿಗೆ ಅವರದೇ ಆದ ಭಾಷೆಗಳಲ್ಲಿ ಗ್ರಂಥಗಳು ಸಿಗುವ ವ್ಯವಸ್ಥೆಯನ್ನು ಗ್ರಂಥಾಲಯ ಇಲಾಖೆಯ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡುತ್ತಿವೆ. ಸುತ್ತಮುತ್ತ ಶಾಲಾ ಕಾಲೇಜುಗಳಲ್ಲಿ ಉತ್ತಮ ಗ್ರಂಥಾಲಯ ಇರುವುದರಿಂದ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಇಲ್ಲಿಗೆ ಬರುವ ಓದುಗರಿಗಾಗಿ ಕಟ್ಟಡದ ಕಾಯಕಲ್ಪಕ್ಕೆ ಸರ್ಕಾರ ಮುಂದಾಗಬೇಕಿದೆ.

    ಗ್ರಂಥಾಲಯಕ್ಕೆ ದಿನಪತ್ರಿಕೆ, ವಾರಪತ್ರಿಕೆಗಳು ಬರುತ್ತವೆ. 200 ಕ್ಕೂ ಹೆಚ್ಚು ಮಂದಿ ಕಾದಂಬರಿ ಮತ್ತಿತರೆ ಸಾಹಿತ್ಯ ಕೃತಿಗಳನ್ನು ತೆಗೆದುಕೊಂಡು ಹೋಗಲು ಬರುತ್ತಾರೆ. ಆದರೆ ಪಟ್ಟಣದಿಂದ ದೂರ ಇರುವುದರಿಂದ ಮುಂಚಿನಷ್ಟು ಜನ ಈಗ ಬರುತ್ತಿಲ್ಲ ಎನ್ನುತ್ತಾರೆ ಹಂಗಾಮಿ ಗ್ರಂಥಪಾಲಕಿ ಜ್ಯೋತಿ.

    ಗ್ರಂಥಾಲಯದಲ್ಲಿ ಉತ್ತಮ ಪುಸ್ತಕಗಳಿವೆ. ಕಾದಂಬರಿ ಪಡೆಯಲು ನಾವು ಪೇಟೆಯಿಂದ ಇಲ್ಲಿಗೆ ಬರಲು ದುಸ್ತರವಾಗುತ್ತಿದೆ.ಪಟ್ಟಣದಲ್ಲಿ ಗ್ರಂಥಾಲಯ ಇದ್ದಾಗ ನಾವು ಅಲ್ಲಿ ಹೋಗಿ ಪುಸ್ತಕ ತರುತ್ತಿದ್ದೆವು ಎಂಬುದು ಪಟ್ಟಣದ ನಿವಾಸಿಗಳಾದ ಶಾರದಾ, ಜ್ಯೋತಿ ಅಭಿಪ್ರಾಯ.

    ಜಿಲ್ಲೆಯಲ್ಲಿ ಒಟ್ಟು ಏಳು ಗ್ರಂಥಾಲಯಗಳಿವೆ. ಬರುವ ಅನುದಾನವನ್ನು 7 ಶಾಖೆಗಳಿಗೂ ಹಂಚಲಾಗುತ್ತದೆ. ಪ್ರತಿ ಶಾಖೆಗೆ ಸುಮಾರು 2 ಸಾವಿರ ಪುಸ್ತಕ ಕೊಡಲಾಗುತ್ತದೆ. ಓದುಗರ ಸಂಖ್ಯೆ ಹೆಚ್ಚಾದರೆ ಮಾತ್ರ ಗ್ರಂಥಾಲಯ ಮೇಲ್ದರ್ಜೆಗೆ ಏರಿಸಲಾಗುತ್ತದೆ. ಎಲ್ಲ ಶಾಖೆಗಳನ್ನೂ ಒಂದು ವರ್ಷದೊಳಗೆ ಡಿಜಿಟಲೀಕರಣ ಮಾಡಲಾಗುತ್ತದೆ. ಇಲ್ಲಿನ ಗ್ರಂಥಾಲಯದ ಸಮೀಪವಿರುವ ಶಾಲಾ, ಕಾಲೇಜು ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗಬೇಕು. ಸಾರ್ವಜನಿಕರು ಪುಸ್ತಕಗಳನ್ನು ಓದಬೇಕು ಎಂಬುದೇ ನಮ್ಮ ಆಶಯ ಎನ್ನುತ್ತಾರೆ ಜಿಲ್ಲಾ ಗ್ರಂಥಾಲಯದ ಅಧಿಕಾರಿ ಜಗದೀಶ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts