More

    ದೇವರ ನಾಮಸ್ಮರಣೆಯಿಂದ ಪಾಪ ಪರಿಹಾರ

    ಶೃಂಗೇರಿ: ಜಗತ್ತಿನಲ್ಲಿ ಲೌಕಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗಳಿದ್ದು ಲೌಕಿಕ ಪ್ರಗತಿ ಶರೀರ ಇರುವವರೆಗೆ ಲಭ್ಯ. ಆದರೆ ಆಧ್ಯಾತ್ಮಿಕ ಎನ್ನುವುದು ನಿರಂತರವಾಗಿ ಇರುವಂತಹ ಮೌಲ್ಯ. ಅದನ್ನು ಆಚಾರದಲ್ಲಿ ತರಬೇಕಾದರೆ ಮಾನವನು ಜೀವನದಲ್ಲಿ ಸಣ್ಣ ವಯಸ್ಸಿನಿಂದಲೇ ಉತ್ಕ್ರಷ್ಟ ಜ್ಞಾನ ಸಂಪಾದಿಸಬೇಕು ಎಂದು ಶ್ರೀಮಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ತಿಳಿಸಿದರು.

    ಮಠದ ಆವರಣದಲ್ಲಿ ಶನಿವಾರ ಶ್ರೀ ಶಾಂಕರ ತತ್ವ ಪ್ರಸಾರ ಅಭಿಯಾನದಡಿ ಶ್ರೀ ಶಾರದಾ ಶಂಕರ ಭಕ್ತ ಮಂಡಳಿ ಆಯೋಜಿಸಿದ್ದ ಭಜನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಕಲಿಯುಗದಲ್ಲಿ ಅಧರ್ಮ ತಲೆಯೆತ್ತಿ ನಿಂತಿದೆ. ಆದರೆ ನಾವು ಧರ್ಮದ ಅನುಷ್ಠಾನವನ್ನು ದಿನನಿತ್ಯ ಮಾಡಲೇಬೇಕು. ಲೌಕಿಕ ಬಂಧನದಲ್ಲಿ ಸ್ವಾರ್ಥಪರ ಚಿಂತನೆಗಳು ಹೆಚ್ಚಾಗಿವೆ. ಭಗವಂತನ ನಾಮಸ್ಮರಣೆ ಮಾಡುವುದರಿಂದ ಪಾಪಗಳು ನಾಶವಾಗುತ್ತವೆ. ಮಾನವ ಜೀವನದಲ್ಲಿ ತಪ್ಪು ಮಾಡುವುದು ಸಹಜ. ಆದರೆ ಅದನ್ನು ಪರಿಹರಿಸಲು ದೇವರನಾಮ ಪಠಿಸಬೇಕು. ಮನಸ್ಸನ್ನು ಶುದ್ಧವಾಗಿಟ್ಟುಕೊಂಡು ಭಗವಂತನ ನಾಮಸ್ಮರಣೆ ಮಾಡಿದರೆ ಮುಕ್ತಿಮಾರ್ಗ ಸುಲಲಿತ. ದೇವರು ಒಬ್ಬನೇ, ನಾಮ ಹಲವು. ದೇವರಿಗೆ ಯಾವುದೇ ಭೇದಭಾವ ಇಲ್ಲ ಎಂದರು.

    ಭಜನೆ ಎಂಬುದು ಭಗವಂತನನ್ನು ಭಕ್ತಿಯಿಂದ ಸ್ಮರಿಸಲು ಇರುವ ಉತ್ತಮ ಮಾರ್ಗ. ದೇವರಲ್ಲಿ ಮನಸ್ಸನ್ನು ಲೀನವಾಗಿಸಿಕೊಂಡು ಅನಂತವಾದ ಆನಂದಾನುಭವ ಪಡೆಯುವ ಪುಣ್ಯದ ಕಾರ್ಯಕ್ರಮ. ಈ ಕಾರ್ಯಕ್ರಮವು ಸರ್ವರನ್ನೂ ತಲುಪಬೇಕು. ಶಾಸ್ತ್ರವು ನಮಗೆ ಸುಲಭ ಮಾರ್ಗವನ್ನು ತೋರಿಸಿಕೊಟ್ಟಿದೆ. ಅದು ಭಗವಂತನ ಸ್ಮರಣೆ. ದೊಡ್ಡ ಯಾಗ ಮಾಡುವುದರಿಂದ ಸಿಗುವ ಪುಣ್ಯವು ಕಲಿಯುಗದಲ್ಲಿ ಭಗವಂತನ ಸಂಕೀರ್ತನೆಯಿಂದಲೇ ಲಭ್ಯವಾಗುತ್ತದೆ ಎಂದು ಶಾಸ್ತ್ರ ಹೇಳಿದೆ. ವಿಹಿತವಾದ ಸ್ವಧರ್ವಚರಣೆ ಜತೆಗೆ ಜಾತಿ, ಮತ, ವಯಸ್ಸಿನ ಭೇದವಿಲ್ಲದೆ ಭಜನಾ ಕಾರ್ಯಕ್ರಮದಲ್ಲಿ ಸದ್ಭಕ್ತರು ಭಾಗವಹಿಸಬೇಕು ಎಂದು ಕರೆ ನೀಡಿದರು.

    ಶ್ರೀಮಠದ ಆಡಳಿತಾಧಿಕಾರಿ ಡಾ. ವಿ.ಆರ್.ಗೌರೀಶಂಕರ್ ಮಾತನಾಡಿ, ಆಧುನಿಕ ಕಾಲದಲ್ಲಿ ಮಕ್ಕಳಿಗೆ ಪಾಲಕರ ಮಾರ್ಗದರ್ಶನ ಅವಶ್ಯಕ. ಮನೆಯಲ್ಲಿ ಧಾರ್ವಿುಕ ಅರಿವು ಮೂಡಿದಾಗ ಮಾತ್ರ ಸಮಾಜದಲ್ಲಿ ಸುಸಂಸ್ಕೃತ ವಾತಾವರಣ ನೆಲೆಸುತ್ತದೆ. ನಿತ್ಯ ಜೀವನದಲ್ಲಿ ನಮಗೆ ಸತ್ಸಂಗದ ಅವಶ್ಯಕತೆ ಇದೆ. ನಿತ್ಯವೂ ಮನೆಯಲ್ಲಿ ರಂಗವಲ್ಲಿ ಹಾಕುವುದು, ಭಗವಂತನ ಸ್ಮರಣೆ ಇತ್ಯಾದಿ ಮಾಡಬೇಕು ಎಂದು ಸಲಹೆ ನೀಡಿದರು.

    ಶ್ರೀಮಠದ ಅವಿಚ್ಛಿನ್ನ ಗುರು ಪರಂಪರೆಯು ಸನಾತನ ಧರ್ಮದ ಶ್ರೇಯೋಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿದೆ. ರಾಜ್ಯದಲ್ಲಿ 2000ಕ್ಕೂ ಹೆಚ್ಚು ಭಜನಾ ಮಂಡಳಿಗಳಿವೆ. ಶ್ರೀ ಶಾರದೆಯ ಎದುರು ಕುಳಿತು ಭಜನೆ ಮಾಡುವ ಅವಕಾಶ ಸರ್ವರಿಗೂ ಇದೆ. ಭಜನಾ ಮಹೋತ್ಸವ ವರ್ಷವೂ ನಡೆಯಬೇಕು. ಇದು ಒಂದು ಆಧ್ಯಾತ್ಮಿಕ ಆಂದೋಲನವಾಗಬೇಕು ಎಂದು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts