ಶ್ರೀ ಮಲಹಾನಿಕರೇಶ್ವರ ಗಿರಿಜಾಕಲ್ಯಾಣೋತ್ಸವ ಇಂದು

ಶೃಂಗೇರಿ: ಪುರಾಣ ಪ್ರಸಿದ್ಧ ಬೆಟ್ಟದ ಶ್ರೀ ಮಲಹಾನಿಕರೇಶ್ವರ ದೇವಾಲಯದಲ್ಲಿ ಮೇ 16ರಂದು ಗಿರಿಜಾಕಲ್ಯಾಣ ಮಹೋತ್ಸವ ನಡೆಯಲಿದೆ. ಶ್ರೀ ಶಾರದಾ ಪೀಠದ 25ನೇ ಜಗದ್ಗುರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಭವಾನಿ ಅಮ್ಮನವರ ವಿಗ್ರಹ ಸ್ಥಾಪಿಸಿ ಉತ್ಸವಾದಿಗಳನ್ನು ಆರಂಭಿಸಿದರು. ಅವರೇ ರಚಿಸಿದ ಗಿರಿಜಾಕಲ್ಯಾಣ ಕಲ್ಪಕೃತಿ ಆಧಾರದ ಮೇಲೆ ಇಂದಿಗೂ ಮಹೋತ್ಸವ ನಡೆಯುತ್ತಿದೆ.

ಪ್ರತಿ ವರ್ಷ ವೈಶಾಖ ಶುದ್ಧ ದ್ವಾದಶಿಯಿಂದ ಐದು ದಿನ ಶ್ರೀ ಭವಾನಿ ಅಮ್ಮ ಹಾಗೂ ಮಲಹಾನಿಕರೇಶ್ವರ ಸ್ವಾಮಿಗೆ ಶಾಸ್ತ್ರೀಯವಾಗಿ ವಿಜೃಂಭಣೆಯಿಂದ ಗಿರಿಜಾಕಲ್ಯಾಣೋತ್ಸವ ನೆರವೇರಿಸಲಾಗುತ್ತದೆ. ಕಲ್ಯಾಣೋತ್ಸವದ ಅಂಗವಾಗಿ ವರಪೂಜೆ, ಕಾಶಿಯಾತ್ರೆ ಮುಂತಾದ ಉತ್ಸವಗಳನ್ನು ನೆರವೇರಿಸಲಾಗುತ್ತದೆ.

ಪುರೋಹಿತರು ಆಸ್ತಿಕ ಜನತೆಯ ಸುಖ ಶಾಂತಿ ಹಾಗೂ ಶ್ರೇಯಸ್ಸಿಗೆ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸುತ್ತ ಈಶ್ವರನಿಗೆ ಕನ್ಯಾದಾನ ಮಾಡುವ ಮಹಾಸಂಕಲ್ಪ ಮಾಡುತ್ತಾರೆ. ಕಲ್ಯಾಣೋತ್ಸವದ ವೇಳೆ ಮಂಗಳಾಷ್ಟಕ ಶ್ಲೋಕಗಳನ್ನು, ಮಹಾಸಂಕಲ್ಪವನ್ನು ಶ್ರೀಮಠದ ವಿದ್ವಾಂಸರು ಸುಶ್ರಾವ್ಯವಾಗಿ ಏಕಕಂಠದಿಂದ ಪಠಿಸುತ್ತಾರೆ. ನಂತರ ಮಾಂಗಲ್ಯ ಧಾರಣೆ, ಕಂಕಣ ಬಂಧನ, ಅಕ್ಷತಾರೋಪಣೆ ನೆರವೇರುತ್ತದೆ. ವಿವಾಹದ ಪ್ರದಾನ ಹೋಮ, ಸಪ್ತಪದಿಯನ್ನೂ ನೆರವೇರಿಸಲಾಗುತ್ತದೆ.

ನಂತರ ಅಗ್ನಿ ಪ್ರದಕ್ಷಿಣೆ ಮತ್ತು ವಧುವಿನಿಂದ ಲಾಜ ಹೋಮವಾದ ನಂತರ ಭವಾನಿ, ಮಲಹಾನಿಕರೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಮಹಾನೀರಾಜನ, ಮಂತ್ರಪುಷ್ಪ, ರಾಜೋಪಚಾರ ಪೂಜೆ ಮತ್ತು ಚತುರ್ವೆದ ಸೇವೆ ನಡೆಸಿ ಉಡುಗೊರೆ ಸಮರ್ಪಿಸಲಾಗುತ್ತದೆ. ಶ್ರೀ ಮಠದ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಭಕ್ತರನ್ನು ಆಶೀರ್ವದಿಸಲಿದ್ದಾರೆ.