731 ಕುಟುಂಬಕ್ಕಿಲ್ಲ ಸ್ವಂತ ಸೂರು

ಶೃಂಗೇರಿ: ಅರಣ್ಯ ಪ್ರದೇಶ ಹೊಂದಿರುವ ತಾಲೂಕಿನಲ್ಲಿ ವಸತಿ ಸಮಸ್ಯೆ ನಾಲ್ಕು ದಶಕದಿಂದ ಪರಿಹಾರವಾಗಿಲ್ಲ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲೇ 281ಕ್ಕೂ ಹೆಚ್ಚು ವಸತಿ ರಹಿತರಿಗೆ 12 ವರ್ಷಗಳಿಂದ ವಸತಿ ನೀಡಲು ಸಾಧ್ಯವಾಗಿಲ್ಲ.

ತಾಲೂಕು 443 ಚದರ ಕಿಮೀ ಪ್ರದೇಶ ಹೊಂದಿದ್ದು ಶೇ.35ರಷ್ಟು ಭಾಗ ಸಾಗುವಳಿ ಭೂಮಿ, ಶೇ. 65 ಭಾಗ ಅರಣ್ಯ ಪ್ರದೇಶ ಹೊಂದಿದೆ. ಭೌಗೋಳಿಕವಾಗಿ ತಾಲೂಕು ದೊಡ್ಡದಾಗಿದ್ದರೂ ಇಲ್ಲಿ ನಾಲ್ಕು ದಶಕದಿಂದ ವಾಸ ಮಾಡುತ್ತಿರುವ ಆರ್ಥಿಕವಾಗಿ ಹಿಂದುಳಿದವರು ಇನ್ನೂ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಸರ್ಕಾರಕ್ಕೆ ವಸತಿಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಲೇ ಇದ್ದಾರೆ. ತಾಲೂಕಿನಲ್ಲಿ 2017-18ರಲ್ಲಿ ವಸತಿ ಯೋಜನೆಗಾಗಿ ಒಂಭತ್ತು ಗ್ರಾಪಂಗಳಿಂದ 731 ಅರ್ಜಿ ಸಲ್ಲಿಕೆಯಾಗಿವೆ.

30 ವರ್ಷಗಳಿಂದ ಪಟ್ಟಣದಲ್ಲಿ ವಾಸವಾಗಿದ್ದೇನೆ. ಮನೆಗೆಲಸ ಮಾಡಿ ತಿಂಗಳಿಗೆ ದೊರಕುವ 4000 ರೂ. ಸಂಬಳದಲ್ಲಿ ಮನೆಬಾಡಿಗೆ 1,500 ರೂ.ನೀಡುತ್ತಿದ್ದೇನೆ. ಉಳಿದ 2,500 ರೂ.ಹಣದಲ್ಲಿ ಕುಟುಂಬದ ನಿರ್ವಹಣೆ ಮಾಡಬೇಕು. ಪ್ರತಿ ವರ್ಷ ಪಪಂ ವಸತಿ ಯೋಜನೆಯಡಿ ಅರ್ಜಿ ತೆಗೆದುಕೊಳ್ಳುತ್ತಿದ್ದಾರೆ. ಆದರೆ ಬಾಡಿಗೆಮನೆ ವಾಸ ತಪ್ಪಲಿಲ್ಲ ಎನ್ನುವುದು ಪಟ್ಟಣದ ಜ್ಯೋತಿ ಅವರ ಅಳಲು.

ಪಪಂ ವ್ಯಾಪ್ತಿಯಲ್ಲಿ ವಸತಿ ಯೋಜನೆಯಡಿ ಜಾಗಕ್ಕಾಗಿ ಮೆಣಸೆ ಗ್ರಾಪಂ ವ್ಯಾಪ್ತಿಯ ಕಲ್ಕಟ್ಟೆ ಗ್ರಾಮದಲ್ಲಿ ಸುಮಾರು ನಾಲ್ಕು ಎಕರೆ ಜಾಗ ಗುರುತಿಸಿದೆ. ಆದರೆ ಜಾಗ ಸೊಪ್ಪಿನ ಬೆಟ್ಟಕ್ಕೆ ಸೇರಿದೆ. ಪಪಂ ವ್ಯಾಪ್ತಿಯಲ್ಲಿ 281ಕ್ಕೂ ಹೆಚ್ಚು ಮಂದಿ ವಸತಿ ರಹಿತರಿದ್ದಾರೆ. ವಸತಿಗಾಗಿ ಅರ್ಜಿ ಸಲ್ಲಿಸಿದವರಿಗೆ ಹಲವು ಗ್ರಾಪಂಗಳಲ್ಲಿ ಜಾಗ ಗುರುತಿಸಲಾಗಿದೆ. ಆದರೆ ಸರ್ಕಾರದ ಅನುಮೋದನೆಗಾಗಿ ಕಾದುಕುಳಿತಿವೆ.

ಹಕ್ಕುಪತ್ರಕ್ಕಾಗಿ ಕಾದ ಅರ್ಜಿದಾರರು: ಕರ್ನಾಟಕ ಭೂಕಂದಾಯ ಅನಿಯಮ 1964ರ ಕಲಂ ಪ್ರಕಾರ 94ಸಿ ಮತ್ತು 94ಸಿ.ಸಿ ಅಡಿಯಲ್ಲಿ ಸುಮಾರು 13,000 ಜನರು ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಜಾಗ ಸಿಕ್ಕರೆ ಸಣ್ಣ ಮನೆಯನ್ನಾದರೂ ಕಟ್ಟಿಕೊಳ್ಳುತ್ತೇವೆ ಎಂದು ಹೇಳುತ್ತಾರೆ ತಾಲೂಕಿನ ಗೌರಿ, ಶ್ರಿದೇವಿ, ಮಂಜುಳಾ, ರಾಘು, ಹರೀಶ್.