ಸಹಾಯಧನದ ಹಣ ಬೆಳೆ ಸಾಲಕ್ಕೆ ಜಮಾ

ಶೃಂಗೇರಿ: ತೋಟಗಾರಿಕೆ ಮತ್ತು ಕೃಷಿ ಇಲಾಖೆಯಿಂದ ಬಂದ ಸಹಾಯಧನವನ್ನು ಶೃಂಗೇರಿ ಎಸ್​ಬಿಐ ವ್ಯವಸ್ಥಾಪಕರು ಬೆಳೆ ಸಾಲಕ್ಕೆ ಜಮಾ ಮಾಡಿದ್ದಾರೆ ಎಂದು ಕೃಷಿಕರಾದ ಕೊಚ್ಚವಳ್ಳಿ ರಾಮಚಂದ್ರ ಹಾಗೂ ರಾಜಮ್ಮ ದೂರಿದ್ದಾರೆ.

ಶೃಂಗೇರಿಯ ಎಸ್​ಬಿಐನಲ್ಲಿ ಕೊಚ್ಚುವಳ್ಳಿ ರಾಮಚಂದ್ರ 67 ಸಾವಿರ ಹಾಗೂ ರಾಜಮ್ಮ 78 ಸಾವಿರ ರೂ. ಬೆಳೆಸಾಲ ಪಡೆದಿದ್ದರು. ಜೂ.25ರಂದು ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ರಾಮಚಂದ್ರ ಅವರ ಖಾತೆಗೆ 53 ಸಾವಿರ ಹಾಗೂ ರಾಜಮ್ಮ ಅವರ ಖಾತೆಗೆ 50,100 ರೂ. ಸಹಾಯಧನ ಜಮಾ ಆಗಿದೆ.

ಫಸಲ್ ಭೀಮಾ ಯೋಜನೆ ವಿಮಾ ಕಂತು ಪಾವತಿಗೆ ಈ ವಾರ ಕೊನೇ ಆಗಿರುವುದರಿಂದ ಶನಿವಾರ ಬ್ಯಾಂಕ್​ನಿಂದ ಹಣ ಪಡೆಯಲು ಹೋದ ಸಂದರ್ಭ ಖಾತೆಯಲ್ಲಿ ಹಣವೇ ಇರಲಿಲ್ಲ. ಈ ಬಗ್ಗೆ ವ್ಯವಸ್ಥಾಪಕರನ್ನು ವಿಚಾರಿಸಿದರೆ ಬೆಳೆ ಸಾಲಕ್ಕೆ ಜಮಾ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ರಾಮಚಂದ್ರ ಮತ್ತು ರಾಜಮ್ಮ ತಾಲೂಕು ಎಪಿಎಂಸಿ ಅಧ್ಯಕ್ಷ ರಮೇಶ್ ಭಟ್, ಮಾನವಹಕ್ಕು ಸಂರಕ್ಷಣಾ ಸಮಿತಿ ಅಧ್ಯಕ್ಷ ಅಂಗುರ್ಡಿ ದಿನೇಶ್ ಸಾಲಕ್ಕೆ ಜಮಾ ಮಾಡಿಕೊಂಡ ಹಣವನ್ನು ಫಲಾನುಭವಿಗಳ ಉಳಿತಾಯ ಖಾತೆಗೆ ವಾಪಸ್ ಜಮಾ ಮಾಡುವಂತೆ ಒತ್ತಾಯಿಸಿದ್ದರು. ಆಗ ವ್ಯವಸ್ಥಾಪಕರು ಸೋಮವಾರ ಖಾತೆಗೆ ಹಣ ಮರುಪಾವತಿಸುವುದಾಗಿ ಒಪ್ಪಿಕೊಂಡಿದ್ದರು.

ತಾಲೂಕು ರೈತ ಸಂಘದ ಅಧ್ಯಕ್ಷ ಕಾನುವಳ್ಳಿ ಚಂದ್ರಶೇಖರ್, ಮಾಜಿ ಅಧ್ಯಕ್ಷ ಕೆಲವಳ್ಳಿ ಗುಂಡಪ್ಪ ಮತ್ತು ಪದಾಧಿಕಾರಿಗಳು ಸೋಮವಾರ ಬ್ಯಾಂಕ್​ಗೆ ಭೇಟಿ ನೀಡಿ ಪರಿಶೀಲಿಸಿದಾಗ ರಾಮಚಂದ್ರ ಮತ್ತು ರಾಜಮ್ಮ ಅವರ ಖಾತೆಗೆ ಹಣ ಮರುಪಾವತಿ ಆಗಿರಲಿಲ್ಲ.