ಚಿಕ್ಕಮಗಳೂರಲ್ಲಿ ಈ ಬಾರಿ ಶೇ.1.18ರಷ್ಟು ಮತದಾನ ಹೆಚ್ಚಳ

ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭೆ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಶೇ.1.18ರಷ್ಟು ಮತದಾನ ಹೆಚ್ಚಳವಾಗಿದೆ. ಈ ಬಾರಿ ಶೇ.75.89 ರಷ್ಟು ಮಂದಿ ಹಕ್ಕು ಚಲಾಯಿಸಿದ್ದಾರೆ.

2014ರ ಚುನಾವಣೆಯಲ್ಲಿ ಶೇ.74.71ರಷ್ಟು ಮತದಾನವಾಗಿತ್ತು. ವಿಧಾನಸಭಾ ಕ್ಷೇತ್ರವಾರು ಮತದಾನದ ಪ್ರಮಾಣದಲ್ಲಿ ಈ ಬಾರಿ ಶೃಂಗೇರಿ ಪ್ರಥಮ ಸ್ಥಾನದಲ್ಲಿದೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ತರೀಕೆರೆ ಕ್ಷೇತ್ರ ಹೊರತುಪಡಿಸಿ ಉಳಿದ 7 ಕ್ಷೇತ್ರಗಳಲ್ಲೂ ಮಹಿಳಾ ಮತದಾರರೇ ಅಧಿಕ. 2014ರ ಚುನಾವಣೆಯಲ್ಲೂ ಮತದಾನದಲ್ಲಿ ಮಹಿಳಾ ಮತದಾರರೇ ಮುಂದಿದ್ದರು. ಈ ವರ್ಷವೂ ಮೊದಲ ಸ್ಥಾನವನ್ನೇ ಕಾಯ್ದುಕೊಂಡಿದ್ದಾರೆ. ಆದರೆ ಶೇಕಡವಾರು ಮತ ಚಲಾವಣೆ ಪ್ರಮಾಣದಲ್ಲಿ ಮಾತ್ರ ಸ್ವಲ್ಪ ಹಿಂದೆ ಬಿದ್ದಿದ್ದಾರೆ. ಈ ಚುನಾವಣೆಯಲ್ಲಿ ಶೇ.76.25ರಷ್ಟು ಪುರುಷರು ಮತ ಚಲಾಯಿಸಿದ್ದರೆ, ಮಹಿಳಾ ಮತದಾರರ ಪ್ರಮಾಣ ಶೇ.75.53.

ಈ ಕ್ಷೇತ್ರದಲ್ಲಿ 2014ರಲ್ಲಿ ಇದ್ದ ಒಟ್ಟು ಮತದಾರರ ಸಂಖ್ಯೆ 13,86,516. ಈ ಚುನಾವಣೆಯಲ್ಲಿ ಅದು 15,13,116ಕ್ಕೆ ಏರಿದೆ. ಈ ಚುನಾವಣೆಯಲ್ಲಿ ಚಲಾಯಿಸಿದ ಮತಗಳ ಸಂಖ್ಯೆ 11,48,277. ಇದರಲ್ಲಿ ಮತ ಚಲಾಯಿಸಿದ ಮಹಿಳಾ ಮತದಾರರು 5,85,108, ಪುರುಷರು 5,63,164.

4 ಕ್ಷೇತ್ರಗಳಲ್ಲಿ ಮಹಿಳೆಯರೇ ಮುಂದು: ಮತದಾನದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮಹಿಳೆಯರಿಗಿಂತ ಉಡುಪಿ ಜಿಲ್ಲೆಯ ಮಹಿಳಾ ಮತದಾರರು ಹೆಚ್ಚು ಹಕ್ಕು ಚಲಾಯಿಸಿದ್ದಾರೆ. ಉಡುಪಿ ಜಿಲ್ಲೆಯ ಎಲ್ಲ ನಾಲ್ಲು ವಿಧಾನಸಭಾ ಕ್ಷೇತ್ರಗಳಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಮತ ಚಲಾಯಿಸುವಲ್ಲಿಯೂ ಮಹಿಳೆಯರೇ ಮುಂದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಮೂಡಿಗೆರೆ ಹಾಗೂ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಹಕ್ಕು ಚಲಾವಣೆಯಲ್ಲಿ ಮಾತ್ರ ಪುರುಷರಿಗಿಂತ ಹಿಂದಿದ್ದಾರೆ.

Leave a Reply

Your email address will not be published. Required fields are marked *