ಶೃಂಗೇರಿಯ ಉಭಯ ಶ್ರೀಗಳ ಆಶೀರ್ವಾದ ಪಡೆದ ಮಧ್ವರಾಜ್

ಶೃಂಗೇರಿ: ಚಿಕ್ಕಮಗಳೂರು-ಉಡುಪಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಶನಿವಾರ ಶ್ರೀ ಶಾರದಾ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ನರಸಿಂಹವನದ ಗುರುನಿವಾಸದಲ್ಲಿ ಉಭಯಶ್ರೀಗಳಾದ ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಬಳಿಕ ಕಾಂಗ್ರೆಸ್ ಕಚೇರಿಗೆ ತೆರಳಿ ಸಭೆಯಲ್ಲಿ ಮಾತನಾಡಿ, ಶ್ರೀ ಶಾರದೆ ಹಾಗೂ ಉಭಯಶ್ರೀಗಳ ಆಶೀರ್ವಾದ ಪಡೆದು ಕಾರ್ಯಕರ್ತರ ಮೊದಲ ಸಭೆಯನ್ನು ಶೃಂಗೇರಿಯಲ್ಲಿ ಮಾಡುತ್ತಿದ್ದೇನೆ ಎಂದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಉಳಿವಿಗಾಗಿ ಕಾಂಗ್ರೆಸ್ ಮಗನಾಗಿ ಜೆಡಿಎಸ್ ಚಿಹ್ನೆಯಡಿ ಸ್ಪರ್ಧಿಸುತ್ತಿದ್ದೇನೆ. ಶಾಸಕನಾಗಿದ್ದಾಗ ಉಡುಪಿ ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಈಗ ಎಂಟು ವಿಧಾನಸಬಾ ಕ್ಷೇತ್ರಕ್ಕೆ ಕೆಲಸ ಮಾಡುವ ಅವಕಾಶ ದೊರಕಿದೆ. ಸಂಸದೆ ಶೋಭಾ ಕರಂದ್ಲಾಜೆ ಈ ಕ್ಷೇತ್ರವು ಕಾಂಗ್ರೆಸ್​ನಿಂದ ಮುಕ್ತವಾಗಿದೆ ಎಂಬ ಹೇಳಿಕೆ ನೀಡಿದ್ದಾರೆ. ಮುಂದೆ ಮೈತ್ರಿ ಪಕ್ಷಗಳು ಬಿಜೆಪಿಗೆ ಪೈಪೋಟಿ ನೀಡುತ್ತವೆ ಎಂದರು.

ಬಿಜೆಪಿ ಕಾರ್ಯಕರ್ತರು ಗೋ ಬ್ಯಾಕ್ ಶೋಭಾ ಎಂದು ಚಳವಳಿ ಮಾಡಿದ್ದಾರೆ. ನಾನು ಚುನಾವಣೆಯಲ್ಲಿ ಗೆದ್ದರೆ ರಾಜ್ಯ ಹಾಗೂ ಕೇಂದ್ರದಿಂದ ಸಾಕಷ್ಟು ಅನುದಾನ ತರಿಸಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ಕ್ಷೇತ್ರವನ್ನು ಸಿಂಗಾಪುರ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿ ಯುವಕರಿಗೆ ಉದ್ಯೋಗ ನೀಡುತ್ತೇನೆ. ಮಲೆನಾಡಿನ ಜಲ್ವಂತ ಸಮಸ್ಯೆಗಳಾದ ಭೂ ಅಕ್ರಮ-ಸಕ್ರಮ, ಕಸ್ತೂರಿರಂಗನ್ ವರದಿ, ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದರು.

ವಿಧಾನಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ, ಶಾಸಕ ಟಿ.ಡಿ.ರಾಜೇಗೌಡ, ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಎಂ.ಸತೀಶ್, ಕಾಂಗ್ರೆಸ್ ಮುಖಂಡ ಸಚಿನ್ ಮೀಗಾ, ಜಿಲ್ಲಾಧ್ಯಕ್ಷ ವಿಜಯಕುಮಾರ್, ಎಚ್.ಜಿ.ವೆಂಕಟೇಶ್, ಮಾರನಕೂಡಿಗೆ ನಟರಾಜ್, ಡಾ. ಅಂಶುಮಂತ್, ಸá-ಧೀರ್​ಕುಮಾರ್ ಮುರೊಳ್ಳಿ ಹಾಜರಿದ್ದರು.