ಮುಚ್ಚಿಹೋಗಿದ್ದ ಮಂದ್‌ಗೆ ಮರುಜೀವ

ಶ್ರೀಮಂಗಲ: ಕೊಡವ ಸಂಸ್ಕೃತಿಯಲ್ಲಿ ಮಂದ್‌ಗೆ ಮಹತ್ವದ ಸ್ಥಾನಮಾನವಿದೆ. ಮಂದ್ ಕೊಡವ ಸಂಸ್ಕೃತಿಯ ಬೇರಾಗಿದ್ದು, ಮಂದ್‌ಗಳನ್ನು ಒತ್ತುವರಿ ಮಾಡುವುದರಿಂದ ಕೊಡವ ಸಂಸ್ಕೃತಿಯ ಬೆಳವಣಿಗೆಗೆ ಧಕ್ಕೆಯಾಗಲಿದೆ. ಆದ್ದರಿಂದ ಮಂದ್‌ಗಳನ್ನು ಒತ್ತುವರಿ ಮಾಡಿಕೊಂಡಿರುವವರು ಸ್ವಯಂ ಪ್ರೇರಿತರಾಗಿ ಬಿಟ್ಟು ಸಹಕಾರ ನೀಡಬೇಕೆಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ಹೇಳಿದರು.

ಬಲ್ಯಮುಂಡೂರು ಗ್ರಾ.ಪಂ. ವ್ಯಾಪ್ತಿಯ ತೂಚಮಕೇರಿ ಗ್ರಾಮದಲ್ಲಿ ಕಳೆದ 15 ವರ್ಷದಿಂದ ಮುಚ್ಚಿಹೋಗಿದ್ದ ಪೊಲೆಮಲೆಕೇರಿ ಮಂದ್‌ನ್ನು ಕೊಡವ ಸಾಹಿತ್ಯ ಅಕಾಡೆಮಿ ಮತ್ತು ತೂಚಮಕೇರಿ ಪುತ್ತರಿ ಕೋಲಾಟ ಸಮಿತಿ ಆಯೋಜಿಸಿದ್ದ ಮಂದ್ ಪುನರಾರಂಭ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮಂದ್‌ಗಳನ್ನು ಒತ್ತುವರಿ ಮಾಡುವ ಮೂಲಕ ಕೊಡವ ಸಂಸ್ಕೃತಿಗೆ ಧಕ್ಕೆ ಮಾಡುವಂತಹ ಕೆಲಸಕ್ಕೆ ಯಾರೂ ಮುಂದಾಗಬಾರದು ಎಂದು ಮನವಿ ಮಾಡಿದರು.

ಪುತ್ತರಿ ಕೋಲಾಟ ಸಮಿತಿಯ ಅಧ್ಯಕ್ಷ ಮೂಕಳಮಾಡ ಅರಸು ನಂಜಪ್ಪ ಮಾತನಾಡಿ, ಪುರಾತನ ಹಾಗೂ ಪೂರ್ವಜರು ನಡೆಸಿಕೊಂಡು ಬಂದ ಈ ಮಂದ್ ಕಾರಣಾಂತರದಿಂದ 2001ರಿಂದ ನಿಂತುಹೋಗಿತ್ತು. ಇದೀಗ ಅಕಾಡೆಮಿಯ ಸಹಕಾರದಲ್ಲಿ ಮಂದ್ ತೆರೆದಿರುವುದು ಸಂತಸ. ಭಾಷೆ, ಸಂಸ್ಕೃತಿ ಉಳಿದರೆ ಮಾತ್ರ ಒಂದು ಜನಾಂಗ ಉಳಿಯಲು ಸಾಧ್ಯ. ಹಿಂದಿನ ಕಾಲದಲ್ಲಿ ಮಂದ್ ನ್ಯಾಯಾಲಯದಂತೆ ಕಾರ್ಯನಿರ್ವಹಿಸಿ, ವಿವಾದಗಳನ್ನು ಇತ್ಯರ್ಥಪಡಿಸಲಾಗುತ್ತಿತ್ತು ಎಂದು ಸ್ಮರಿಸಿದರು.

ಸರ್ವೇ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಅಜ್ಜಿಕುಟ್ಟೀರ ಬಿ. ಭೀಮಯ್ಯ ಮಾತನಾಡಿ, ಪೊಲೆಮಲೆಕೇರಿ ಊರ್ ಮಂದ್ ಆಗಿದ್ದು, ಈ ವ್ಯಾಪ್ತಿಗೆ ಬರುವ ಗುದ್ದ್ದರ್‌ವಡೆ ನಾಡ್ ಮಂದ್ ಆಗಿದೆ. ಇಲ್ಲಿ ಐದು ಗ್ರಾಮಗಳು ಸೇರಿ ಮಂದ್ ನಡೆಸಲಾಗುತ್ತಿತ್ತು. ಆದರೆ, ಕಾರಣಾಂತರದಿಂದ 1954ರಲ್ಲಿ ಮುಚ್ಚಿ ಹೋಯಿತು. ಮುಂದಿನ ದಿನಗಳಲ್ಲಿ ಈ ಮಂದ್ ತೆರೆಯಲು ಈ ಭಾಗದ ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಕೊಡವ ಜಾನಪದ ತಜ್ಞ ಕಾಳಿಮಾಡ ಮೋಟಯ್ಯ ಮಾತನಾಡಿ, ತೆರೆದ ಮಂದ್ ಮುಂದೆ ಎಂದೂ ಮುಚ್ಚದಂತೆ ಶಾಶ್ವತವಾಗಿ ನಡೆಸಿಕೊಂಡು ಹೋಗುವುದು ಗ್ರಾಮಸ್ಥರ ಜವಾಬ್ದಾರಿಯಾಗಿದೆ. ಮಕ್ಕಳನ್ನು ಮಂದ್‌ಗೆ ಕರೆತರುವುದು ಹಾಗೂ ಮಕ್ಕಳೊಂದಿಗೆ ಹಬ್ಬಗಳನ್ನು ಆಚರಿಸುವ ಮೂಲಕ ಕೊಡವ ಸಂಸ್ಕೃತಿಯ ಮಹತ್ವವನ್ನು ಅವರಿಗೆ ತಿಳಿಸಿಕೊಡಬೇಕು ಎಂದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತೂಚಮಕೇರಿ ಪುತ್ತರಿ ತಕ್ಕ ಪೆಮ್ಮಂಡ ಸಿ. ನಾಣಯ್ಯ ಚಾಲನೆ ನೀಡಿದರು. ಸಮಾಜ ಸೇವಕ ಪೆಮ್ಮಂಡ ಬಿ.ಅಯ್ಯಪ್ಪ, ಮಹಾದೇವ ದೇವಸ್ಥಾನ ಭಂಡಾರ ತಕ್ಕ ಕುಲ್ಲಚೀರ ಮೊಣ್ಣಪ್ಪ, ದೇವತಕ್ಕ ಮೂಕಳಮಾಡ ಅಪ್ಪಾಜಿ ಹಾಜರಿದ್ದರು.

ಪೆಮ್ಮಂಡ ಪುಷ್ಪ ಪ್ರಾರ್ಥಿಸಿದರು. ಕಾರ್ಯಕ್ರಮದ ಸಂಚಾಲಕ ಚಂಗುಲಂಡ ಸೂರಜ್ ಸ್ವಾಗತಿಸಿ, ಆಂಗೀರ ಕುಸುಮ ನಿರೂಪಿಸಿದರು. ಬೊಳ್ಳಜೀರ ಅಯ್ಯಪ್ಪ ವಂದಿಸಿದರು.

ಸಾಧಕರಿಗೆ ಸನ್ಮಾನ: ಕೊಡವ ಸಂಸ್ಕೃತಿ ಹಾಗೂ ಜಾನಪದ ಕಲೆ ಬೆಳವಣಿಗೆಗೆ ಶ್ರಮಿಸಿದ ಸಾಧಕರನ್ನು ಸನ್ಮಾನಿಸಲಾಯಿತು. ಅಜ್ಜಿಕುಟ್ಟೀರ ಬಿ. ಭೀಮಯ್ಯ, ಕಾಳಿಮಾಡ ಮೋಟಯ್ಯ, ಪೆಮ್ಮಂಡ ಅಯ್ಯಪ್ಪ, ಚೆಪ್ಪುಡಿರ ಕಿಟ್ಟು ಅಯ್ಯಪ್ಪ ಅವರನ್ನು ಸನ್ಮಾನಿಸಲಾಯಿತು. ಗ್ರಾಮಸ್ಥರು ಅಕಾಡೆಮಿಯ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ, ಕಾರ್ಯಕ್ರಮದ ಸಂಚಾಲಕ ಚಂಗುಲಂಡ ಸೂರಜ್ ಅವರನ್ನು ಸನ್ಮಾನಿಸಿದರು.