ಬಾಂಬ್​ ಸ್ಫೋಟ ಸಂತ್ರಸ್ತ ಕನ್ನಡಿಗರ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದ್ರು ಕೊಲಂಬೋಕ್ಕೆ ತೆರಳಿರುವ ಬಿಜೆಪಿ ಶಾಸಕ

ಬೆಂಗಳೂರು: ಬಾಂಬ್​ ಸ್ಫೋಟದಿಂದ ಗಾಯಗೊಂಡ ತಮ್ಮ ಸಂಬಂಧಿ ಪುರುಷೋತ್ತಮ್​ ಅವರ ಆರೋಗ್ಯ ವಿಚಾರಿಸಲು ಕೊಲಂಬೋಕ್ಕೆ ತೆರಳಿರುವ ಬಿಜೆಪಿ ಯಲಹಂಕ ಶಾಸಕ ವಿಶ್ವನಾಥ್​ ಅಲ್ಲಿನ ವಾಸ್ತವ ಸ್ಥಿತಿಯನ್ನು ದಿಗ್ವಿಜಯ ನ್ಯೂಸ್​ ಗೆ ತಿಳಿಸಿದ್ದಾರೆ.

ನಾವು ಅಂದುಕೊಂಡಿದ್ದಕ್ಕಿಂತ ಜಾಸ್ತಿ ಹಾನಿಯಾಗಿದೆ. ಇಂದು ಬೆಳಗ್ಗೆ 6 ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿತ್ತು. ಜನರಲ್ಲಿ ತುಂಬ ಭಯ ಇದೆ. ಎಲ್ಲೆಡೆ ಮಿಲ್ಟ್ರಿ, ಪೊಲೀಸ್​ ಬಿಗಿ ಭದ್ರತೆ ಇದೆ ಎಂದು ತಿಳಿಸಿದ್ದಾರೆ.
ನಾವು ಶ್ರೀಲಂಕಾಕ್ಕೆ ಬಂದಾಗ ರಾತ್ರಿ 2 ಗಂಟೆ. ಏರ್​ಪೋರ್ಟ್​ನಲ್ಲಿ ಮೂರು ತಾಸು ಕಾದಿದ್ದೇವೆ. ರಾತ್ರಿ 21 ಬಾಂಬ್​ಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ. ಒಟ್ಟು 9 ಕಡೆ ಸ್ಫೋಟವಾಗಿದೆ. 300 ಜನರು ಮೃತಪಟ್ಟಿದ್ದು, 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಬಹುತೇಕ ಎಲ್ಲರಿಗೂ ಐಸಿಯುವಿನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ನನಗೆ ಶಾಂಘ್ರೆಲಾ ಹೋಟೆಲ್​ನಲ್ಲಿ ಆದ ಸಾವುನೋವುಗಳ ಬಗ್ಗೆ ಮಾಹಿತಿ ಸಿಕ್ಕಿಲ್ಲ. ನನ್ನ ಬೀಗರಾದ ಪುರುಷೋತ್ತಮ್​ ಅವರು ಕೆಲಸದ ನಿಮಿತ್ತ ಟ್ರಿಪ್​ಗೆ ಬಂದು ಕಿಂಗ್ಸ್​ಬೆರ್ರಿ ಹೋಟೆಲ್​ನಲ್ಲಿ ಉಳಿದುಕೊಂಡಿದ್ದರು. ಇಲ್ಲಿ ಕರ್ನಾಟಕದವರು ಬರೀ ಏಳೆಂಟು ಜನರಲ್ಲ, ಹಲವು ಜನರು ನಾಪತ್ತೆಯಾಗಿದ್ದಾರೆ. ಮೃತಪಟ್ಟಿದ್ದಾರೆ. ನಾನೂ ಕೂಡ ಒಂದು ಪಟ್ಟಿ ತರಿಸಿಕೊಂಡಿದ್ದೇನೆ. ಇಲ್ಲಿನ ರಾಯಭಾರಿಗಳೂ ನಮಗೆ ಸಹಾಯ ಮಾಡುತ್ತಿದ್ದಾರೆ. ಗಾಯಗೊಂಡ ಕರ್ನಾಟಕ ಮೂಲದವರು ಸುಮಾರು 7-8 ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಅವರನ್ನೆಲ್ಲರನ್ನೂ ಭೇಟಿಯಾಗುತ್ತೇನೆ. ಇನ್ನೂ ಎರಡು ಮೂರು ದಿನ ಇಲ್ಲಿಯೇ ಇರುತ್ತೇನೆ ಎಂದಿದ್ದಾರೆ.

ನಮಗೆ ಎಲ್ಲಿಂದಲೂ ಸರಿಯಾಗಿ ಮಾಹಿತಿ ಸಿಗುತ್ತಿಲ್ಲ. ಆಸ್ಪತ್ರೆಗಳಲ್ಲೆಲ್ಲ ತುಂಬ ಆತಂಕದ ವಾತಾವರಣವೇ ಇರುವುದರಿಂದ ಮಾತನಾಡಲು ಆಗುತ್ತಿಲ್ಲ. ಏನೇ ಆಗಲಿ ನಾಪತ್ತೆಯಾದ ಕನ್ನಡಿಗರ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *