ಪ್ರಾಮಾಣಿಕ ಉದ್ಯಮಿಗೆ ಯಶಸ್ಸು ಖಂಡಿತ

ಹೊನ್ನಾವರ: ‘ಸಾರಿಗೆ ಮತ್ತು ಸಂಚಾರ ಉದ್ದಿಮೆ ಅತ್ಯಂತ ಪವಿತ್ರ ಮತ್ತು ಕಷ್ಟಕರವಾದ ಉದ್ದಿಮೆಯಾಗಿದೆ. ಯಾರು ಪ್ರಾಮಾಣಿಕ ರೀತಿಯಲ್ಲಿ ಉದ್ಯಮವನ್ನು ನಡೆಸುತ್ತಾರೆ ಅಂಥವರಿಗೆ ಜೀವನದಲ್ಲಿ ಯಶಸ್ಸು ದೊರೆಯುತ್ತದೆ’ ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹೇಳಿದರು.

ತಾಲೂಕಿನ ರ್ಕಯಲ್ಲಿರುವ ಎಸ್​ಆರ್​ಎಲ್ ಗ್ರೂಪ್​ನ ಮಾಲೀಕ ವೆಂಕಟ್ರಮಣ ಹೆಗಡೆ ಕವಲಕ್ಕಿ ಅವರ ಶ್ರೀಕುಮಾರ ರೋಡ್​ಲೈನ್ಸ್ ಮತ್ತು ಟ್ರಾವೆಲ್ಸ್​ನ ಕೇಂದ್ರ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು. ವೆಂಕಟ್ರಮಣ ಹೆಗಡೆ ಅವರು ಚಿಕ್ಕ ಊರಿನಲ್ಲಿ ಇದ್ದರೂ ಸಮಾಜ ಸೇವೆ ಮತ್ತು ದೊಡ್ಡ ಉದ್ಯಮ ನಡೆಸುವ ಮೂಲಕ ಯಶಸ್ಸು ಸಾಧಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಇರುವ 30 ಬಸ್ಸು ಮತ್ತು 70 ಲಾರಿಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುತ್ತಾ ಬಂದಿದ್ದಾರೆ ಎಂದು ಹೇಳಿದರು.

ಅನೇಕ ವರ್ಷಗಳಿಂದ ಟ್ರಾನ್ಸ್​ಪೋರ್ಟ್ ಉದ್ದಿಮೆ ಡೋಲಾಯಮಾನ ಸ್ಥಿತಿಯಲ್ಲಿತ್ತು. ಅನೇಕರು ಅಡ್ಡದಾರಿಯಿಂದ ಕೆಲಸ ಮಾಡಿ ವ್ಯವಹಾರಕ್ಕೆ ಕಳಂಕ ತಂದಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಕಾನೂನಿನಲ್ಲಿ ಸಾಕಷ್ಟು ಬದಲಾವಣೆ ಮತ್ತು ಜಿಎಸ್​ಟಿ ಬಂದ ನಂತರ ಟ್ರಾನ್ಸ್​ಪೋರ್ಟ್ ಉದ್ದಿಮೆಯಲ್ಲಿ ಬೆಳೆಯಲು ಅವಕಾಶ ಸಿಕ್ಕಂತಾಗಿದೆ. ಈ ವರ್ಷದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಅತ್ಯಂತ ದುಬಾರಿಯಾಗಿರುವುದರಿಂದ ಎಲ್ಲ ಟ್ರಾನ್ಸ್ ಪೋರ್ಟ್ ಕಂಪನಿಗಳು ಬಹಳ ಕಷ್ಟ ಮತ್ತು ನಷ್ಟದಲ್ಲಿ ಇದೆ. ಡೀಸೆಲ್ ಹಾಗೂ ಪೆಟ್ರೋಲ್ ದರಗಳು ಕಡಿಮೆಯಾದರೆ ಉದ್ಯಮಕ್ಕೆ ಕಷ್ಟ ಬರುವುದಿಲ್ಲ. ನಮ್ಮ ಕಂಪನಿ ಹೇಗೆ ಬೆಳೆದಿದೆಯೋ ಹಾಗೆ ವೆಂಕಟ್ರಮಣ ಹೆಗಡೆ ಅವರ ಸಂಸ್ಥೆಯೂ ಉತ್ತಮವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಸ್​ಆರ್​ಎಲ್ ಮತ್ತು ವಿಆರ್​ಎಲ್​ಗಳಂತಹ ಸಂಸ್ಥೆಗಳು ಇಂದು ಅತ್ಯಂತ ಅಗತ್ಯವಾಗಿ ಬೇಕಾಗಿದೆ. ಈ ಕಂಪನಿಗಳಿಂದ ಎಷ್ಟೋ ಕುಟುಂಬಗಳಿಗೆ, ಪ್ರಯಾಣಿಕರಿಗೆ ಮತ್ತು ವಸ್ತು ಸಾಗಾಣಿಕೆಗೆ ಅನುಕೂಲವಾಗಿದೆ. ಉದ್ಯೋಗದ ಸೃಷ್ಟಿಯಾಗಬೇಕು ಎಂದಾದರೆ ಖಾಸಗಿ ವಲಯಗಳು ಬೆಳೆಯಬೇಕು ಮತ್ತು ಯುವ ಪೀಳಿಗೆಗಳು ಇದರ ಜವಾಬ್ದಾರಿಯನ್ನು ಹೊರಬೇಕು ಎಂದರು. ಕಾರ್ಯಕ್ರಮದಲ್ಲಿ ಎಸ್​ಆರ್​ಎಲ್ ಸಂಸ್ಥೆಯಲ್ಲಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿದ 70 ಜನರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಿಬ್ಬಂದಿ ಸಂಸ್ಥೆಯ ಚೇರ್ಮನ್ ವೆಂಕಟ್ರಮಣ ಹೆಗಡೆ ಕವಲಕ್ಕಿ ಅವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಿ ಗೌರವಿಸಿದರು. ಲೆಕ್ಕಪತ್ರ ವಿಭಾಗವನ್ನು ವಿಧಾನ ಪರಿಷತ್ ಸದಸ್ಯ ಶ್ರೀಕಾಂತ ಎಲ್. ಘೊಟ್ನೇಕರ್ ಉದ್ಘಾಟಿಸಿದರು. ಬಿಡಿ ಭಾಗಗಳ ವಿಭಾಗವನ್ನು ದುರ್ಗಾಂಬಾ ಮೋಟಾರ್ಸ್​ನ ಸದಾನಂದ ಛಾತ್ರಾ ಉದ್ಘಾಟಿಸಿದರು. ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಪ್ರತಿನಿಧಿ ಮೋಹನ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಸುನೀಲ ನಾಯ್ಕ, ಶಿರಸಿ ಕೆಡಿಸಿಸಿ ಬ್ಯಾಂಕ್​ನ ಉಪಾಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ, ಕೆಡಿಸಿಸಿ ಮುಖ್ಯಸ್ಥ ಆರ್.ಎಸ್.ಜೋಶಿ, ಜಿಪಂ ಸದಸ್ಯ ಶಿವಾನಂದ ಹೆಗಡೆ ಕಡತೋಕ, ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, ರ್ಕ ಗ್ರಾಪಂ ಅಧ್ಯಕ್ಷ ಶ್ರೀಕಾಂತ ಮೊಗೇರ ಇತರರು ಇದ್ದರು. ವೆಂಕಟ್ರಮಣ ಹೆಗಡೆ ಸ್ವಾಗತಿಸಿದರು. ಎಸ್.ಜಿ. ಹೆಗಡೆ ನಿರೂಪಿಸಿ ವಂದಿಸಿದರು.