ಶ್ವೇತಾ ವೆಂಕಟೇಶ್ ಶಿಷ್ಯೆಯ ರಂಗ್‌ಮಂಚ್ ಪ್ರವೇಶ್
ಬೆಂಗಳೂರು: ನಗರದ ಪ್ರಖ್ಯಾತ ನೃತ್ಯ ಸಂಸ್ಥೆ ಸಾಯಿ ಆರ್ಟ್ಸ್ ಇಂಟರ್‌ನ್ಯಾಷನಲ್‌ನ ಗುರು ಶ್ವೇತಾ ವೆಂಕಟೇಶ್ ಶಿಷ್ಯೆ, ಹೆಸರಾಂತ ನೃತ್ಯ ದಂಪತಿ- ಚೇತನಾ- ಚಂದ್ರಪ್ರಭಾ ಅವರ ಪುತ್ರಿ ಶ್ರೀಚರಿತಾ ಗಂಗಟ್ಕರ್ ‘ ಕಥಕ್ ರಂಗ್‌ಮಂಚ್ ಪ್ರವೇಶ್’ಗೆ ಅಣಿಯಾಗಿದ್ದಾರೆ. ಮಲ್ಲೇಶ್ವರದ ವಯ್ಯಲಿಕಾವಲ್ ಚೌಡಯ್ಯ ಸ್ಮಾರಕ ಭವನದಲ್ಲಿ ಜೂ. 18ರ ಸಂಜೆ 6.30ಕ್ಕೆ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ವಿದುಷಿಯರಾದ ದುರ್ಗಾ ಆರ್ಯ, ಶುಭಾ ಧನಂಜಯ, ವಿದುಷಿ ಸುಪರ್ಣಾ ವೆಂಕಟೇಶ, ರಾಮಕಥಾ ಖ್ಯಾತಿಯ ವಿದ್ವಾನ್ ಸತ್ಯನಾರಾಯಣ ರಾಜು ಮತ್ತು ಸಾಯಿ ವೆಂಕಟೇಶ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಪ್ರಸ್ತುತಿ: ವೇದಿಕೆಯಲ್ಲಿ ಶ್ರೀ ಚರಿತಾ ಅವರು ಜೈಪುರ್ ಮತ್ತು ಮುಘಲ್ ಘರಾನಾ ಪ್ರಸ್ತುತಪಡಿಸಲಿದ್ದಾರೆ. ನಂತರ ದೇವಿ ನೃತ್ಯ ಹಾಗೂ ದಾಸರ ಪದ ‘ ಕೃಷ್ಣ ನೀ ಬೇಗನೆ ಬಾರೋ … ಕೃತಿಗೆ ಹೆಜ್ಜೆ ಹಾಕುತ್ತಿದ್ದಾರೆ. ಪ್ರಖ್ಯಾತ ಕಲಾವಿದ ಶಂಕರ ಶಾನುಭಾಗ್ ಗಾಯನ, ಶ್ವೇತಾ ಅವರ ಪದಾಂತ, ಕಾರ್ತಿಕ ಭಟ್ ತಬಲಾ, ಮೈಸೂರು ಸಮೀರ ರಾವ್ ಕೊಳಲು, ಶ್ರುತಿ ಸೀತಾರ್ ಮತ್ತು ಗುರುಮೂರ್ತಿ ವೈದ್ಯ ಪಖವಾಜ್ ಸಹಕಾರವಿದೆ.
ರಾಜಧಾನಿಯ ಅಗ್ರ ಪಂಕ್ತಿಯ ನೃತ್ಯ ದಂಪತಿಗಳಲ್ಲಿ ಕೂಚುಪುಡಿ- ಭರತನಾಟ್ಯ ಸಮನ್ವಯಮಾಡಿಕೊಂಡು ಹಿರಿಮೆ ಸಾಧಿಸಿರುವ ಜೋಡಿ ಚಂದ್ರಪ್ರಭಾ- ಚೇತನ್ ಅವರ ಹೆಮ್ಮೆಯ ಪುತ್ರಿಯೇ ಶ್ರೀಚರಿತಾ. ಈಕೆ ವಿದ್ಯಾಂಜಲಿ ಅಕಾಡೆಮಿಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ಎಳವೆಯಲ್ಲೇ ಕಲಾಸಕ್ತಿ ಮೈಗೂಡಿಸಿಕೊಂಡಿದ್ದು, ಭರತನಾಟ್ಯ- ಕಥಕ್‌ನ ಪಾಠಾಂತರಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ತನ್ನ ಕ್ರಿಯಾಶೀಲತೆ ಹೊಮ್ಮಿಸುತ್ತಿರುವುದು ಗಮನಾರ್ಹವಾಗಿದೆ. ಈಗಾಗಲೇ ತಂದೆ- ತಾಯಿ ಬಳಿಯೇ ಭರತನಾಟ್ಯ ಕಲಿತು 2 ವರ್ಷದ ಹಿಂದೆಯೇ ರಂಗ ಪ್ರವೇಶ ಮಾಡಿರುವ ಈಕೆ, ಕಥಕ್ ಬಗ್ಗೆ ಅಪಾರ ಆಸಕ್ತಿ ತೋರಿದ ಫಲವಾಗಿ ಗುರು ಶ್ವೇತಾರ ಗರಡಿಯಲ್ಲಿ ಪಳಗುತ್ತಿರುವುದು ಗಮನೀಯ ಸಂಗತಿ.
ಬಹುವಿಧ ಪ್ರತಿಭೆ: ಕರ್ನಾಟಕ ಶಾಸ್ತ್ರೀಯ ಸಂಗೀತ, ಕಥಕ್ ಮತ್ತು ಭರತನಾಟ್ಯದಲ್ಲಿ ಜೂನಿಯರ್ ಪರೀಕ್ಷೆಯನ್ನು ಅತ್ಯುನ್ನತ ಶ್ರೇಣಿಯಲ್ಲಿ ಶ್ರೀಚರಿತಾ ಪೂರ್ಣಗೊಳಿಸಿದ್ದಾಳೆ. ಶಾಲಾ ವ್ಯಾಸಂಗದಲ್ಲೂ ಮೊದಲ ಸ್ಥಾನದಲ್ಲೇ ಇದ್ದು, ಥ್ರೋ ಬಾಲ್, ಹ್ಯಾಂಡ್ ಬಾಲ್, ಪೆನ್ಸಿಲ್ ಸ್ಕೆಚ್ ಡ್ರಾಯಿಂಗ್‌ನಲ್ಲೂ ವಿಶೇಷ ಪ್ರೌಢಿಮೆ ತೋರಿ, ಅನೇಕ ಬಹುಮಾನ ಪಡೆದಿರುವುದು ಬಹುಮುಖೀ ಕಲಾಸಕ್ತಿಯ ಪ್ರತೀಕವಾಗಿದೆ.