Tuesday, 11th December 2018  

Vijayavani

Breaking News

ಹಿಂದುಗಳ ನೋವಿಗೆ ಉತ್ತರ ಸಿಗಬೇಕು

Thursday, 11.01.2018, 3:03 AM       No Comments

ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು ಎರಡನೇ ಬಾರಿ ಪರ್ಯಾಯಪೀಠ ಏರಲು ಜ.18ರಂದು ಮುಹೂರ್ತ ಸನ್ನಿಹಿತವಾಗಿದೆ. ಈ ಮೂಲಕ ಕೃಷ್ಣ ಮಠದಲ್ಲಿ 32ನೇ ಪರ್ಯಾಯ ಚಕ್ರ ತಿರುಗಲಿದೆ. ತಮ್ಮ ಪ್ರಥಮ ಪರ್ಯಾಯ ಅವಧಿಯಲ್ಲಿ ಶ್ರೀಗಳು ಆರಂಭಿಸಿದ ಚಿಣ್ಣರ ಸಂತರ್ಪಣೆ ಯೋಜನೆ ಇಂದು ರಾಜ್ಯವ್ಯಾಪಿ ವಿಸ್ತರಣೆಯಾಗಿದೆ. 2ನೇ ಪರ್ಯಾಯದಲ್ಲಿ ನಿತ್ಯ ಲಕ್ಷ ತುಳಸಿ ಅರ್ಚನೆ, ಕೃಷ್ಣ ಮಠದ ಗರ್ಭಗುಡಿಯ ಛಾವಣಿಗೆ ಚಿನ್ನದ ಹೊದಿಕೆ.. ಹೀಗೆ ಹಲವು ಯೋಜನೆ-ಯೋಚನೆಗಳನ್ನು ಪಲಿಮಾರು ಶ್ರೀಗಳು ಹಾಕಿಕೊಂಡಿದ್ದಾರೆ. ಮೂಲ ಮಠದ ಮುಖ್ಯಪ್ರಾಣನ ಸನ್ನಿಧಿಯಲ್ಲಿ ಶ್ರೀಗಳು ದಿಗ್ವಿಜಯ 247 ನ್ಯೂಸ್ ಪ್ರತಿನಿಧಿ ರಕ್ಷಿತ್ ಶೆಟ್ಟಿಗೆ ನೀಡಿದ ಸಂದರ್ಶನ ಇಲ್ಲಿದೆ.

# 2ನೇ ಬಾರಿ ಪರ್ಯಾಯ ಪೀಠ ಅಲಂಕರಿಸುತ್ತಿದ್ದೀರಿ,ತಮಗೆ ಏನು ಅನಿಸುತ್ತದೆ?

-ಎರಡು ರೀತಿ ಇದೆ. ಒಂದು ಅಪೂರ್ವ ಲಾಭ. ಕೃಷ್ಣನ ಪೂಜೆ 2 ವರ್ಷ ನಿರಂತರ ಮಾಡಲು ಸಾಧ್ಯ. ಅದರ ಜತೆಗೆ ಮಠಕ್ಕೆ ಬಂದ ಭಕ್ತರು ನೊಂದು ಹೋಗಬಾರದು ಅನ್ನೋ ಕಾಳಜಿ ಹೆಚ್ಚಿದೆ. ಎಲ್ಲವನ್ನೂ ಸಮತೋಲನದಿಂದ ಕೊಂಡೊಯ್ಯುವ ಶಕ್ತಿಯನ್ನು ಭಗವಂತ ಅನುಗ್ರಹಿಸಲಿ ಎಂಬುದು ನಮ್ಮ ಪ್ರಾರ್ಥನೆ.

# ಏನೆಲ್ಲ ವಿಶೇಷತೆಗಳಿವೆ ಈ ಪರ್ಯಾಯದಲ್ಲಿ?

– ಹಲವು ಕನಸುಗಳಿವೆ. ಅದರಲ್ಲಿ ಮುಖ್ಯವಾಗಿ ಜಗತ್ತಿಗೆ ಒಳಿತಾಗಲಿ ಎಂಬ ಉದ್ದೇಶದಿಂದ ಲಕ್ಷ ಬಾರಿ ಪ್ರತಿನಿತ್ಯ ಶ್ರೀ ಕೃಷ್ಣನ ಪಾದಕ್ಕೆ ತುಳಸಿ ಅರ್ಚನೆ. ಉಡುಪಿ ಅನ್ನಬ್ರಹ್ಮನ ಸನ್ನಿಧಿಯಲ್ಲಿ 700 ವರ್ಷದಿಂದ ನಿರಂತರ ನಡೆಯುತ್ತಿರುವ ಅನ್ನದಾನವನ್ನು ಮುಂದುವರಿಸಿಕೊಂಡು ಹೋಗುವುದು. ಹೀಗೆ ಹಲವು ಯೋಚನೆಗಳು ಮನಸ್ಸಿನಲ್ಲಿದೆ.

# ಕೃಷ್ಣನ ಗರ್ಭಗುಡಿಗೆ ಚಿನ್ನದ ಲೇಪನ ಮಾಡಲು ಹೊರಟಿದ್ದೀರಿ…

– ಹೌದು. ದ್ವಾರಕೆಯಿಂದ ಬಂದ ಕೃಷ್ಣ. ದ್ವಾರಕೆ ಸ್ವರ್ಣಮಯ ಪಟ್ಟಣ. ಅಂತಹ ಕೃಷ್ಣನಿಗೆ ಸಣ್ಣದೊಂದು ಸೇವೆ ಮಾಡಬೇಕು ಅನ್ನೋದು ಸಂಕಲ್ಪ. 1 ಲಕ್ಷ ಜನ, 1 ಗ್ರಾಂನಷ್ಟು ಬಂಗಾರ ಕೊಟ್ಟರೆ ಈ ಯೋಜನೆ ಸಾಕಾರವಾಗುತ್ತದೆ. ಅದು ಕೃಷ್ಣನಿಗೆ ಸಲ್ಲುವ ಶಾಶ್ವತ ಅಲಂಕಾರ.

# ಈ ಹಿಂದೆ ಕೃಷ್ಣನಿಗೆ ವಜ್ರಕವಚ ಅರ್ಪಿಸಿದ ಸಂದರ್ಭದಲ್ಲಿ ಅಪಸ್ವರಗಳು ಬಂದಿತ್ತು. ಕುಚೇಲನ ಭಕ್ತಿಗೆ ಮೆಚ್ಚಿದ ಕೃಷ್ಣನಿಗೆ ಇಷ್ಟು ಆಡಂಬರದ ಅಗತ್ಯ ಇದೆಯಾ?

– (ನಗು) ಹೌದು, ಇದು ಎಲ್ಲರೂ ಬೈಯುವ ಯೋಜನೆ ಎಂಬ ಅರಿವು ಇದೆ. ಆದ್ರೆ ಸಂತೋಷ ಪಡುವವರು ಸಂತೋಷ ಪಟ್ಟೇ ಪಡುತ್ತಾರೆ. ಭಕ್ತಿ ಅನ್ನುವುದು ಒಂದು ರೀತಿಯ ಔದಾರ್ಯ. ಬಡವನೊಬ್ಬ ಕುಚೇಲನ ರೀತಿಯಲ್ಲೇ ಪೂಜೆ ಮಾಡಬಹುದು. ನನ್ನ ಅನುಭವದ ಪ್ರಕಾರ ಬೈಯುವವರು ಅದಕ್ಕೆ ಕೊಡುಗೆ ಕೊಡುವುದಿಲ್ಲ. ಕೊಡುವವರು ಬೈಯುವುದಿಲ್ಲ. ಹಾಗಾಗಿ ಅದರ ಬಗ್ಗೆ ಹೆಚ್ಚು ತಲೆಕಡಿಸಿಕೊಂಡಿಲ್ಲ.

# ಸೋದೆ ಮಠದ ವಾದಿರಾಜ ಸ್ವಾಮಿಗಳು ಚಿನ್ನದ ಹೊದಿಕೆ ಮಾಡುವ ನಿರ್ಧಾರದಿಂದ ಹಿಂದೆ ಸರಿದಿದ್ದರು. ನೀವು ಯಾಕೆ ಇಷ್ಟು ದೊಡ್ಡ ಸಂಕಲ್ಪ ಮಾಡಿದ್ದೀರಿ?

– ಸೋದೆ ವಾದಿರಾಜ ಸ್ವಾಮಿಗಳು ಮಹಾನ್ ಜ್ಞಾನಿ. ಅವರು ಈ ಯೋಜನೆಯಿಂದ ಯಾಕೆ ಹಿಂದೆ ಸರಿದರು ಅನ್ನೋದರ ಬಗ್ಗೆ ನೂರಾರು ವಿಚಾರಗಳಿವೆ. ಆದರೆ ನಾನು ಅವರಲ್ಲಿಯೇ ಪ್ರಾರ್ಥಿಸಿದ್ದೇನೆ. ಅವರ ಅನುಗ್ರಹವನ್ನು ಪಡೆದು ಯೋಜನೆ ಪ್ರಾರಂಭಿಸಿದ್ದೇವೆೆ.

# ಸದ್ಯ ಹಿಂದು ಸಮಾಜ ಎದುರಿಸುತ್ತಿರುವ ಸವಾಲುಗಳು ಯಾವುವು?

– ಎಲ್ಲಿಯವರೆಗೆ ಒಂದೇ ನೀತಿ, ಒಂದೇ ಧರ್ಮ ಅನ್ನೋ ಬರೋದಿಲ್ವೋ, ಅಲ್ಲಿವರೆಗೆ ಹಿಂದು ಸಮಾಜಕ್ಕೆ ಅಪಾಯ ತಪ್ಪಿದ್ದಲ್ಲ. ಎಲ್ಲರಿಗೂ ನ್ಯಾಯ ಸಿಗಬೇಕು, ಯಾರಿಗೂ ಅನ್ಯಾಯವಾಗಬಾರದು. ಸದ್ಯ ಹಿಂದುಗಳ ನೋವಿಗೆ ಉತ್ತರ ಸಿಗುತ್ತಿಲ್ಲ. ಹಿಂದುಗಳಿಗೆ ಇರೋದು ಒಂದೇ ದೇಶ. ಹಿಂದು ದೇಶದಲ್ಲಿ ಹಿಂದುಗಳಿಗೆ ಮೊದಲ ಪ್ರಾಶಸ್ಱ ಸಿಗಬೇಕು.

# ಗೋಹತ್ಯೆ ನಿಷೇಧ ವಿಚಾರದಲ್ಲಿ ನಿಮ್ಮ ನಿಲುವೇನು?

– ಗೋಹತ್ಯೆ ತಪ್ಪು. ಗೋಪೂಜೆ ಮಾಡುವ ಹಿಂದು ದೇಶದಲ್ಲಿ ಗೋಹತ್ಯೆ ಮಹಾ ಅಪರಾಧ.

# ಗೋ ಹತ್ಯೆ ನಿಷೇಧ ಜಾರಿಯಾದರೆ, ಮುದಿ ಗೋವುಗಳನ್ನು ಏನು ಮಾಡಬೇಕು? ರೈತನಿಗೆ ಅದು ಹೊರೆ ಅಲ್ವಾ?

– ಈ ರೀತಿ ವಾದ ಮಂಡಿಸುವ ಬುದ್ಧಿಜೀವಿಗಳು ತಮ್ಮ ತಂದೆ, ತಾಯಿ ಮುದುಕರಾದ್ರೆ ಏನು ಮಾಡ್ತಾರೆ? ಗೋವು ಮುದಿಯಾದರೂ ರೈತ ಸಮುದಾಯಕ್ಕೆ ಉಪಯೋಗವಿದೆ. ಅದರ ಮಲಮೂತ್ರಗಳು ಗೊಬ್ಬರ, ಅದರಿಂದ ಕೃಷಿಗೆ ಉಪಯೋಗವಾಗುತ್ತದೆ. ಪ್ರಾಣಿ ದಯಾ ಸಂಘದ ಸದಸ್ಯರು ಬೇರೆ ಎಲ್ಲಾ ವಿಚಾರದಲ್ಲಿ ಮಾತನಾಡುತ್ತಾರೆ. ಗೋ ಹತ್ಯೆಯ ವಿಚಾರದಲ್ಲಿ ಯಾಕೆ ಮಾತಾಡುವುದಿಲ್ಲ? ಗೋವಿನ ಸಂತತಿ ಹೆಚ್ಚಾದಷ್ಟು ದೇಶ ಸುಭಿಕ್ಷವಾಗುತ್ತೆ. ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು.

# ಈ ಬಾರಿಯ ಪರ್ಯಾಯಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸುತ್ತಾರಾ? ಹಿಂದೆಲ್ಲ ಉಡುಪಿಯ ಸನಿಹಕ್ಕೆ ಬಂದವರು ಮಠದ ಹತ್ತಿರವೂ ಸುಳಿದಿಲ್ಲ ಅಲ್ಲವೇ?

– ಆಹ್ವಾನ ನೀಡುವುದು ನಮ್ಮ ಧರ್ಮ. ಬರಬೇಕಾಗಿರೋದು ಅವರ ಧರ್ಮ. ನಾವು ಆಹ್ವಾನ ನೀಡಿದ್ದೇವೆ. ಬರ್ತಾರೆ ಅನ್ನೋ ನಿರೀಕ್ಷೆ ಇದೆ. ಬಂದರೆ ನಮಗೆ ಸಂತಸವಾಗುತ್ತೆ.

# ಉಡುಪಿ ಮಠದಲ್ಲಿ ಪಂಕ್ತಿಭೇದ ಇದೆ ಅನ್ನುವ ಆರೋಪ ಇದೆಯಲ್ಲ…

-ಉಡುಪಿಗೆ ಬೇರೆ ಬೇರೆ ವರ್ಗದ ಜನ ಬರುತ್ತಾರೆ. ತೀರಾ ನೇಮ, ನಿಷ್ಠೆ, ಮಡಿವಂತಿಕೆಯನ್ನು ಆಚರಿಸುವವರೂ ಬರುತ್ತಾರೆ. ಎಲ್ಲರೊಂದಿಗೆ ಅವರಿಗೂ ಊಟ ಹಾಕಿದರೆ ಹಾಗೇ ಹೋಗಿ ಬಿಡುತ್ತಾರೆ. ಅವರು ಹಸಿದುಕೊಂಡು ಹೋದ ದೋಷ ನನ್ನ ಪಾಲಿಗೆ ಬರುತ್ತದೆ. ಇದಕ್ಕೆ ನಾನು ಕಂಡುಕೊಂಡ ಉಪಾಯ, ಯಾರಿಗೆ ಎಲ್ಲಿ ಬೇಕೋ ಅಲ್ಲಿ ಊಟ ಮಾಡಲಿ. ಅವರಿಗೆ ಬೇಕಾದ ಸೂಕ್ತ ವ್ಯವಸ್ಥೆಯನ್ನು ನಾವು ಮಾಡುತ್ತೇನೆ. ಉಡುಪಿಗೆ ಬಂದವರು ಹಸಿದು ಹೋಗಬಾರದು ಅನ್ನೋದು ನಮ್ಮ ಕಾಳಜಿ.

 # ಕರಾವಳಿಯ ಕೋಮು ಸೌಹಾರ್ದತೆಗೆ ಏನು ಸಂದೇಶ ಕೊಡ್ತೀರಿ? ಪೇಜಾವರ ಶ್ರೀಗಳು ಆರಂಭಿಸಿದ ಇಫ್ತಾರ್ ಕೂಟ ಮುಂದುವರಿಸುತ್ತೀರಾ?

– ಸರ್ಕಾರ ಗಟ್ಟಿಯಾದ ನಿರ್ಧಾರ ತೆಗೆದುಕೊಂಡರೆ ಕೋಮು ಗಲಭೆಗಳು ನಡೆಯುವುದಿಲ್ಲ. ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎಂಬ ನೀತಿ ಕೈ ಬಿಡಬೇಕು.

Leave a Reply

Your email address will not be published. Required fields are marked *

Back To Top