ಅರಕಲಗೂಡು: ತಾಲೂಕಿನ ದೇವರಹಳ್ಳಿ ಗ್ರಾಮದಲ್ಲಿ ದೀಪಾವಳಿ ಹಬ್ಬದ ದಿನವಾದ ಶನಿವಾರ ಶ್ರೀ ವೀರಭದ್ರೇಶ್ವರಸ್ವಾಮಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ಶ್ರೀ ವೀರಭದ್ರೇಶ್ವರ ದೇವರಿಗೆ ವಿಶೇಷ ಪೂಜೆ, ಅಭಿಷೇಕ ಮಾಡಲಾಯಿತು. ಉಪವಾಸ ವ್ರತ ಆಚರಿಸಿದ ಭಕ್ತ ಪ್ರಕಾಶ್ ಅವರಿಗೆ ದೇವಸ್ಥಾನದ ಆವರಣದಲ್ಲಿ ಸಾಂಪ್ರದಾಯಿಕವಾಗಿ ಕಂಕಣ ಕಟ್ಟಿ ತಲೆಮೇಲೆ ಪಾರ್ವತಮ್ಮ ಬಿಂದಿಗೆ ಹೊರಿಸಲಾಯಿತು. ಬಿಂದಿಗೆ ಉತ್ಸವದೊಂದಿಗೆ ದೇವರ ಉತ್ಸವ ಮೂರ್ತಿಯನ್ನು ಭಕ್ತರು ಅಲಂಕೃತ ಅಡ್ಡಮೇಲೆ ಹೊತ್ತು ನೃತ್ಯ ಪ್ರದರ್ಶಿಸಿ ಭಕ್ತಿ ಭಾವ ಪ್ರದರ್ಶಿಸಿದರು.
ಗ್ರಾಮದ ಬೀದಿಗಳಲ್ಲಿ ಸಾಗಿದ ಬಿಂದಿಗೆ ನೃತ್ಯ ಕಣ್ತುಂಬಿಕೊಂಡ ಭಕ್ತರು ಈಡುಗಾಯಿ ಒಡೆದು ಹಣ್ಣುಕಾಯಿ ಅರ್ಪಿಸಿ ಭಕ್ತಿ ಸಮರ್ಪಿಸಿದರು. ಜಾತ್ರೆ ಪ್ರಯುಕ್ತ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು.