
ಮದ್ದೂರು: ತಾಲೂಕಿನ ತೈಲೂರು ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ತೈಲೂರಮ್ಮನವರ ಜಾತ್ರಾ ಮಹೋತ್ಸವ ಮಾ.14ರಿಂದ 20 ವರೆಗೆ ಅದ್ದೂರಿಯಾಗಿ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಶ್ರೀ ತೈಲೂರಮ್ಮ (ಪಟ್ಟಲದಮ್ಮ) ಸೇವಾ ಟ್ರಸ್ಟ್ ಅಧ್ಯಕ್ಷ ಡಾ.ಟಿ.ಚಂದ್ರು ತಿಳಿಸಿದ್ದಾರೆ.
ಮಾ.14 ರಂದು ಬೆಳಗ್ಗೆ 10 ಗಂಟೆಗೆ ಮೀಸಲು ಗಂಗೆ ಪೂಜೆ, 11ಗಂಟೆಗೆ ಹೋಮ ಮತ್ತು ತೈಲೂರಮ್ಮನವರಿಗೆ ಅಭಿಷೇಕ, ತೀರ್ಥ ಪ್ರಸಾದ ವಿನಿಯೋಗ, ಗ್ರಾಮದ ದೇವತೆ ಶ್ರೀ ಮಾರಮ್ಮನವರಿಗೆ ವಿಶೇಷ ಪೂಜೆ ಮಧಾಹ್ನ 1 ಗಂಟೆಗೆ ಕೊಂಡಕ್ಕೆ ಸೌಧೆ, ಸಾಯಂಕಾಲ 6 ಗಂಟೆಗೆ ಬಂಡಿ ಉತ್ಸವ, ರಾತ್ರಿ 8 ಗಂಟೆಗೆ ಕೊಂಡಕ್ಕೆ ಅಗ್ನಿ ಸ್ಪರ್ಶ, ರಾತ್ರಿ 10 ಗಂಟೆಗೆ ಗಂಗಾಮತಸ್ಥರ ಶ್ರೀ ಮಂಚಮ್ಮ ದೇವರ ಕರಗೋತ್ಸವ, ರಾತ್ರಿ 11 ಗಂಟೆಗೆ ಮಂಚಮ್ಮ ದೇವರ ಕರಗೋತ್ಸವ, 1 ಗಂಟೆಗೆ ದಂಡಮ್ಮ ದೇವರ ಕರಗೋತ್ಸವ, ಪ್ರಾತಃಕಾಲ 5 ಗಂಟೆಗೆ ತೈಲೂರು ಅಮ್ಮನವರ ಕೊಂಡಕ್ಕೆ ದಯಮಾಡಿಸುವವರು.
ಶುಕ್ರವಾರ ರಾತ್ರಿ 8 ಗಂಟೆಗೆ ಬೆಂಗಳೂರು ತಾತಗುಣಿ ಮುನಿರತ್ನಮ್ಮ ಜಯರಾಮಯ್ಯ ಕುಟುಂಬದವರಿಂದ ದೀಪಾಲಂಕಾರ, ಪುಷ್ಪಾಲಂಕಾರ ಮತ್ತು ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. ಮಾ.15 ರಂದು ಬೆಳಗ್ಗೆ 8ರಿಂದ ಮಧ್ಯಾಹ್ನ 1ರವರೆಗೆ ತೈಲೂರು ಅಮ್ಮನವರಿಗೆ ಮತ್ತು ಮಾದನಾಯಕನಹಳ್ಳಿ ಸಿದ್ದರಾಮೇಶ್ವರ ಸ್ವಾಮಿಗೆ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಮಧ್ಯಾಹ್ನ 3 ಗಂಟೆಗೆ ಸಿಡಿ ಮಹೋತ್ಸವ, ಸಾಯಂಕಾಲ ವಿವಿಧ ದೇವರುಗಳ ಉತ್ಸವ ಅದ್ದೂರಿಯಾಗಿ ನಡೆಯಲಿದೆ. ಮಾ.16 ರಂದು ರಾತ್ರಿ ಮಾದನಾಯಕನಹಳ್ಳಿ ಸಿದ್ದರಾಮೇಶ್ವರಸ್ವಾಮಿ ಮತ್ತು ತೈಲೂರಮ್ಮನವರ ಉತ್ಸವ, ಮಾ.17ರ ರಾತ್ರಿ ಬೂದಗುಪ್ಪೆ ಗ್ರಾಮದಲ್ಲಿ ಶ್ರೀ ಮಾರಮ್ಮ, ಮಂಚಮ್ಮ ಹಾಗೂ ಬಸವೇಶ್ವರಸ್ವಾಮಿ ಉತ್ಸವ, ಮಾ.19ರಂದು ಮಾದಪುರದೊಡ್ಡಿ ಗ್ರಾಮದಲ್ಲಿ ತೈಲೂರಮ್ಮ ಮತ್ತು ಮಾರಮ್ಮನವರ ಉತ್ಸವ, ಮಾ.20 ರಂದು ಅಗರಲಿಂಗನದೊಡ್ಡಿ ಗ್ರಾಮದಲ್ಲಿ ತೈಲೂರಮ್ಮ ಮತ್ತು ಬಸವೇಶ್ವರಸ್ವಾಮಿ ಉತ್ಸವ ನಡೆಯಲಿದೆ.
ಮಾ.18 ಮತ್ತು 19ರಂದು ಗ್ರಾಮದಲ್ಲಿ ನಡೆಯುವ ವೀರಹಬ್ಬ (ಈರಬ್ಬ)ಕ್ಕೆ ಭಕ್ತಾಧಿಗಳು ಧವಸ ಧಾನ್ಯಗಳನ್ನು ನೀಡುವ ಜತೆಗೆ ತೈಲೂರು ಅಮ್ಮನವರ ಜಾತ್ರಾ ಮಹೋತ್ಸವಕ್ಕೆ ಸುತ್ತಮುತ್ತ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.