ಕುಮಾರಗಿರಿಯಲ್ಲಿ ಪಂಗುನಿ ಉತ್ತಿರ ಜಾತ್ರೆ

ಚಿಕ್ಕಮಗಳೂರು: ತಾಲೂಕಿನ ಮಲ್ಲೇನಹಳ್ಳಿ ಕುಮಾರಗಿರಿಯಲ್ಲಿ ಗುರುವಾರ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪಂಗುನಿ ಉತ್ತಿರ ಜಾತ್ರೆ, ಕಾವಡಿ ಸಮರ್ಪಣೆ ಹಾಗೂ ಸಾಮೂಹಿಕ ವಿವಾಹ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.

ವಳ್ಳಿ ದೇವಸೇನ ಸಮೇತರಾಗಿ ಇಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ನೆಲೆಸಿರುವುದರಿಂದ ಪ್ರತಿ ವರ್ಷದಂತೆ ತಿರುಕಲ್ಯಾಣ ಮಹೋತ್ಸವ ಹಾಗೂ ಇದರ ಅಂಗವಾಗಿಯೇ ಸಾಮೂಹಿಕ ವಿವಾಹ ನಡೆಯಿತು.

ಬೆಳಗ್ಗೆ 7 ಗಂಟೆಯಿಂದಲೇ ಉತ್ತಿರಾ ನಕ್ಷತ್ರದಲ್ಲಿ ದೇವತಾಕಾರ್ಯಗಳು ಆರಂಭಗೊಂಡವು. ವಿಶೇಷ ಅಲಂಕಾರ ಹಾಗೂ ಮಹಾ ಗಣಪತಿ ಪೂಜೆ, ಪುಣ್ಯಾಹ, ಮಂಗಳ ದ್ರವ್ಯ ಪೂಜೆ, ಧಾರೆ, ಮಾಂಗಲ್ಯ ಧಾರಣೆ, ಲಾಜ ಪೂಜೆ, ಸಮನ್ಮಾಲೆ, ಸಪ್ತಪದಿ ಇನ್ನಿತರೆ ವಿಧಿಗಳ ಮೂಲಕ ಶ್ರೀ ಸುಬ್ರಹ್ಮಣ್ಯಸ್ವಾಮಿ ಕಲ್ಯಾಣ ಮಹೋತ್ಸವ ಸಂಭ್ರಮದಿಂದ ನೆರವೇರಿತು.

ಇದಾದ ನಂತರ ಬೆಳಗ್ಗೆ 9ಕ್ಕೆ 7 ಜೋಡಿ ಸಾಮೂಹಿಕ ವಿವಾಹ ನಡೆಯಿತು. ಜಾತಿ, ಧರ್ಮ, ಪಂಥಗಳ ಭೇದವಿಲ್ಲದೆ ನಡೆಯುವ ವಿವಾಹದಲ್ಲಿ ಈ ಬಾರಿ ಚಿಕ್ಕಮಗಳೂರು, ಮಲ್ಲೇನಹಳ್ಳಿ, ಭದ್ರಾವತಿ, ಶಿವಮೊಗ್ಗ ಹಾಗೂ ಹಾಸನ ಜಿಲ್ಲೆಗಳ ಯುವ ಜೋಡಿಗಳು ಸಪ್ತಪದಿ ತುಳಿದವು.

ಕಾನೂನಿನ ಪ್ರಕಾರ ವಯಸ್ಸಿನ ದೃಢೀಕರಣ ಪತ್ರ ಪಡೆದು, ಪೋಷಕರ ಸಮ್ಮುಖದಲ್ಲೇ ಎಲ್ಲ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಶಾಸ್ತ್ರಬದ್ಧವಾಗಿ ವಿವಾಹ ನೆರವೇರಿಸಲಾಯಿತು. ದೇವಸ್ಥಾನ ಸಮಿತಿಯಿಂದಲೇ ಮಾಂಗಲ್ಯದ ಜೊತೆಗೆ ವಧುವರರಿಗೆ ಹೊಸ ಬಟ್ಟೆ ನೀಡಲಾಯಿತು. ಈ ಬಾರಿ 22 ನೇ ವರ್ಷದ ಸಾಮೂಹಿಕ ವಿವಾಹ ನಡೆದಿದ್ದು, ಈವರೆಗೆ 150 ಕ್ಕೂ ಹೆಚ್ಚು ಜೋಡಿ ಇಲ್ಲಿ ಸಪ್ತಪದಿ ತುಳಿದಿದ್ದಾರೆ.

ಸಾಮೂಹಿಕ ವಿವಾಹದ ನಂತರ ಮಧ್ಯಾಹ್ನ ಅನ್ನ ಪ್ರಸಾದ ನಡೆಯಿತು. ಸಂಜೆ ಉತ್ಸವ ಮೂರ್ತಿಯ ದೇವಸ್ಥಾನ ಪ್ರದಕ್ಷಿಣೆ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ನಡೆಯಿತು. ಪುರೋಹಿತರಾದ ಸಾಯಿನಂದನ ಅಯ್ಯಂಗಾರ್, ಅನಂತ ಶರ್ಮ, ವೆಂಕಟೇಶ ಶರ್ಮ ಹಾಗೂ ನರಸಿಂಹಮೂರ್ತಿ ಪೂಜಾ ವಿಧಿವಿಧಾನ ನಡೆಸಿಕೊಟ್ಟರು.

ಜಿಪಂ ಸದಸ್ಯೆ ಜಸಂತಾ ಅನಿಲ್​ಕುಮಾರ್, ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಅನಿಲ್​ಕುಮಾರ್, ಬಿಜೆಪಿ ಮುಖಂಡ ಶಿವರಾಜ್, ಸಿಪಿಐನ ಜಿ.ರಘು, ದೇವಸ್ಥಾನದ ಧರ್ಮದರ್ಶಿ ಸಮಿತಿ ಗೌರವಾಧ್ಯಕ್ಷ ಎಂ.ಎ.ಕಲ್ಲೇಗೌಡ, ಅಧ್ಯಕ್ಷ ಎ.ಚಿನ್ನಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಸ್.ವಿಜಯಕುಮಾರ್, ಉಪಾಧ್ಯಕ್ಷ ಎ.ಮಹಾಲಿಂಗಂ, ವಿ.ಗುಣಶೇಖರ್, ಎಲ್.ಕೇಶವ, ನಿರ್ದೇಶಕ ಜಿ.ರಘು, ಜಿ.ರಮೇಶ್, ಗೋಪಾಲ್, ಅರಿವಳಗನ್, ಜಿ.ಶಂಕರ್, ಸ್ಥಳೀಯ ಶಿವರಾಜ್ ಇತರರು ಇದ್ದರು.

ಕಾವಡಿ ಹೊತ್ತು ಹರಕೆ ತೀರಿಸಿದ ಭಕ್ತರು:ಹರಕೆ ಹೊತ್ತ ಭಕ್ತಾದಿಗಳು ಕಾವಡಿ ಸಮರ್ಪಣೆ ಮಾಡುವುದು ಇಲ್ಲಿನ ವಿಶೇಷ. ಈ ಬಾರಿ ಕಾವಡಿ ಹೊತ್ತು ತಂದ ರಾಜ್ಯ, ಹೊರ ರಾಜ್ಯ, ಹೊರದೇಶದಿಂದ ಬಂದ ಭಕ್ತರು ಹರಕೆ ತೀರಿಸಿದರು.

ಸಿಂಗಾಪುರದ ಭಾರತಿ ಕೃಷ್ಣಮೂರ್ತಿ ದಂಪತಿ ಕಾವಡಿ ಹರಕೆ ತೀರಿಸಲು ಆಗಮಿಸಿದ್ದರು. ಚಿಕ್ಕಮಗಳೂರು, ಮಲ್ಲೇನಹಳ್ಳಿ, ಭದ್ರಾವತಿ, ಶಿವಮೊಗ್ಗ, ಬೆಂಗಳೂರು, ಆಂಧ್ರಪ್ರದೇಶದ ಕಡಪ ಜಿಲ್ಲೆ ಗಳಿಂದಲೂ ಭಕ್ತರು ಕಾವಡಿಯನ್ನು ಹೊತ್ತು ಕೆನ್ನೆಗಳಿಗೆ ತ್ರಿಶೂಲಗಳನ್ನು ಚುಚ್ಚಿಕೊಂಡು ಹತ್ತಾರು ಕಿ.ಮೀ.ಕಾಲ್ನಡಿಗೆಯಲ್ಲಿ ನಡೆದು ದೇವಸ್ಥಾನಕ್ಕೆ ಬಂದು ಹರಕೆ ತೀರಿಸಿದರು. ಕಾವಡಿ ಹೊತ್ತ ಭಕ್ತರಿಗೆ ದೇವರ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು.

ಜಾತ್ರೆ ಹಿನ್ನೆಲೆಯಲ್ಲಿ ಕುಮಾರಗಿರಿ, ಮಲ್ಲೇನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ದೇವಸ್ಥಾನವನ್ನು ತಳಿರು ತೋರಣ, ಹೂವುಗಳಿಂದ ಅಲಂಕರಿಸಲಾಗಿತ್ತು. ಹೊಸ ಬಟ್ಟೆಗಳನ್ನು ತೊಟ್ಟ ಭಕ್ತರು ಜಾತ್ರೆಯಲ್ಲಿ ಕಲೆತು ಸಂಭ್ರಮಿಸಿದರು.