More

  ಜನವರಿ 8ಕ್ಕೆ ಪೇಜಾವರ ಶ್ರೀಗಳ ಮಹಾರಾಧನೆ

  ಬೆಂಗಳೂರು: ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಮಹಾರಾಧನೆ ಜ.8ರಂದು ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನಡೆಯಲಿದೆ. ಸೋಮವಾರ ವಿದ್ಯಾಪೀಠದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದ್ದು, ಅಷ್ಟಮಠಗಳ ಸಂಪ್ರದಾಯದಲ್ಲಿ ವೃಂದಾವನವಾಗಿ 11ನೇ ದಿನಕ್ಕೆ ಮಹಾರಾಧನೆ ನಡೆಸಲಾಗುತ್ತದೆ. ಆರಾಧನೆ ಅವಧಿಯಲ್ಲಿ ಪ್ರತಿದಿನ ವಿವಿಧ ಧಾರ್ವಿುಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

  2ನೇ ದಿನ ಬ್ರಹ್ಮಕೂರ್ಚ ಹೋಮ ನಡೆದಿದ್ದು, ಮುಂದಿನ ದಿನಗಳಲ್ಲಿ ವಿರಜಾಹೋಮ, ಪವಮಾನ ಹೋಮ, ಮಹಾವಿಷ್ಣು ಮಂತ್ರ ಹೋಮಗಳು ನಡೆಯಲಿವೆ. ಸೋಮವಾರ ಬೆಳಗ್ಗೆಯಿಂದಲೇ ಸಾವಿರಾರು ಜನರು ಆಗಮಿಸಿ ವೃಂದಾವನ ದರ್ಶನ ಪಡೆದರು. ಪಾಠ, ಪ್ರವಚನ ನಡೆಯುತ್ತಿದ್ದ ವಿದ್ಯಾಪೀಠ ಈಗ ಭಾವುಕ ಭಕ್ತರ ತೀರ್ಥ ಕ್ಷೇತ್ರವಾಗಿ ಬದಲಾಗಿದೆ. ವೃಂದಾವನ ಪಕ್ಕದಲ್ಲೇ ಹತ್ತಾರು ವಿದ್ಯಾರ್ಥಿಗಳು, ವಿದ್ವಾಂಸರು ವೇದಮಂತ್ರ, ಸ್ತೋತ್ರಗಳನ್ನು ನಿರಂತರ ಪಠಿಸುತ್ತಿದ್ದರು.

  ಮೊದಲ ಹಸ್ತೋದಕ

  ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು ಸೋಮವಾರ ಮಧ್ಯಾಹ್ನ ಪಟ್ಟದ ದೇವರಿಗೆ ಮಹಾಪೂಜೆ ನೆರವೇರಿಸಿದ ಬಳಿಕ ಗುರುಗಳಾದ ವಿಶ್ವೇಶತೀರ್ಥರ ವೃಂದಾವನದಲ್ಲಿ ತುಳಸಿಗಿಡ ನೆಟ್ಟರು. ಬ್ರಹ್ಮಕೂರ್ಚ ಹೋಮದ ಕಲಶಾಭಿಷೇಕ ಮಾಡಿ ಮೊದಲ ಹಸ್ತೋದಕ ನೀಡಿದರು. ಶ್ರೀಗಳಿಗೆ ಹಾಲುಪಾಯಸ, ಭಕ್ಷ್ಯಗಳನ್ನು ಸಮರ್ಪಿಸಲಾಯಿತು.

  ಉಮಾಭಾರತಿ ಭೇಟಿ

  ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ವೃಂದಾವನಕ್ಕೆ ಸೋಮವಾರ ಭೇಟಿ ನೀಡಿದ್ದ ಅವರ ಶಿಷ್ಯೆ ಉಮಾಭಾರತಿ ಧ್ಯಾನದಲ್ಲಿ ತೊಡಗಿದ್ದರು. ಮಾಜಿ ಸಚಿವ ಆರ್.ವಿ. ದೇಶಪಾಂಡೆ ಸೇರಿ ಇನ್ನಿತರ ಗಣ್ಯರು ಭೇಟಿ ನೀಡಿದ್ದರು.

  ನೆಲ ಸಮತಟ್ಟಾದ ಮೇಲೆ ಐದು ಅಂತಸ್ತಿನ ಕಲ್ಲಿನ ವೃಂದಾವನ ನಿರ್ವಿುಸಲಾಗುತ್ತದೆ. ಅಲ್ಲಿ ಪ್ರತಿದಿನ ದೀಪ ಬೆಳಗಿಸಲು ನಿರ್ಧರಿಸಲಾಗಿದೆ. 12 ದಿನ ನಿರಂತರ ಮಂತ್ರ ಪಠನೆ ನಡೆಯಲಿದೆ. ಮಹಾರಾಧನೆಯಂದು ಹಿಂದುಳಿದ ವರ್ಗದ ಜನರು ವಾಸಿಸುವ ಜಾಗಕ್ಕೆ ಹೋಗಿ ಅನ್ನ ಸಂತರ್ಪಣೆ, ವಸ್ತ್ರದಾನ ಮಾಡಲಾಗುವುದು. ಮಠದ ಆಸ್ಪತ್ರೆಯಲ್ಲಿ 13ನೇ ದಿನದಂದು ಉಚಿತ ಸೇವೆ, ಚಿಕಿತ್ಸೆ ನಡೆಯಲಿದೆ.

  | ವಿದ್ವಾನ್ ಹರಿದಾಸ ಭಟ್ ನಿವೃತ್ತ ಪ್ರಾಂಶುಪಾಲ, ಪೂರ್ಣಪ್ರಜ್ಞ ವಿದ್ಯಾಪೀಠ 

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts