ಕೋಟೆ ಕಡೆಗೆ ಶ್ರೀ ಶಿವಮೂರ್ತಿ ಮುರುಘಾ ಶರಣರ ನಡಿಗೆ; ಮೂಲ ಸೌಕರ್ಯಗಳಿಗೆ ಒತ್ತಾಯಿಸಿ ಜಾಗೃತಿ ಜಾಥಾ

ಚಿತ್ರದುರ್ಗ: ನಗರದ ಐತಿಹಾಸಿಕ ಕೋಟೆ ಸಂರಕ್ಷಣೆಗೆ ಕೇಂದ್ರ ಮತ್ತು ರಾಜ್ಯಸರ್ಕಾರಗಳನ್ನು ಒತ್ತಾಯಿಸಿ ಮುರುಘಾ ಮಠದ ಡಾ.ಶಿವಮೂರ್ತಿ ಶರಣರ ನೇತೃತ್ವದಲ್ಲಿ ಬುಧವಾರ ಮುಂಜಾನೆ ನಮ್ಮ ನಡಿಗೆ ಕೋಟೆ ಸಂರಕ್ಷಣೆಗೆ ಕಡೆಗೆ ಜಾಗೃತಿ ಜಾಥಾ ನಡೆಯಿತು. ಬೆಳಗ್ಗೆ 7.15ಕ್ಕೆ ಸರಿಯಾಗಿ ಕೋಟೆ ಪ್ರವೇಶ ದ್ವಾರಕ್ಕೆ ಶರಣರು ಆಗಮಿಸಿದರು.

ಅವರ ಮುಂದಾಳತ್ವದಲ್ಲಿ ನೂರಾರು ಜನರು ಕೋಟೆಯನ್ನೇರಿ ವಿವಿಧ ಸ್ಥಳಗಳಿಗೆ ತೆರಳಿದರು. ಈ ವೇಳೆ ಶರಣರು ಭರಮಣ್ಣ ನಾಯಕರ ಸಮಾಧಿಗೆ ಹಾಗೂ ಬೆಟ್ಟದಲ್ಲಿರುವ ಮುರುಘಾ ಮಠಕ್ಕೂ ತೆರಳಿ ಗದ್ದುಗೆಗೆ ನಮಿಸಿದರು.

ಕೋಟೆ ಅಭಿವೃದ್ಧಿಯಾಗಲಿ, ಕೋಟೆಯನ್ನು ಕಟ್ಟಲು ಇಂದು ಆಗಲ್ಲ, ಅದನ್ನು ಉಳಿಸಿಕೊಳ್ಳೋಣ. ಪ್ರವಾಸಿಗರಿಗೆ ಮೂಲ ಸೌಕರ್ಯ ಕಲ್ಪಿಸಿ ಎಂದೆಲ್ಲ ಘೋಷಣೆಗಳೊಂದಿಗೆ ಜಾಥಾ ಕೋಟೆ ಗಾಳಿ ಗೋಪುರ, ಪ್ರದೇಶಗಳಲ್ಲಿ ಮೊದಲಾದೆಡೆ ಸಾಗಿತು.

ಗೂಗಲ್‌ನಲ್ಲಿ ಹುಡುಕಿದರೂ ಸಿಗಲ್ಲ

ಈ ವೇಳೆ ಮಾತನಾಡಿದ ಶರಣರು ಗೂಗಲ್ ಮ್ಯಾಪ್‌ನಲ್ಲಿ ಕೋಟೆಗೆ ದಾರಿ ಸಿಗಲ್ಲವೆಂದು ಬೇಸರಿಸಿದರು. ಜಗತ್ತಿನ ಹಲವು ದೇಶಗಳಿಗೆ ಭೇಟಿ ಕೊಟ್ಟಿದ್ದೇನೆ. ದುರ್ಗದಲ್ಲಿರುವ ಏಳು ಸುತ್ತಿನ ಕೋಟೆ ಜಗತ್ತಿನಲ್ಲಿ ಎಲ್ಲೂ ಇಲ್ಲ. ಇದನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಬೇಕು. ರಸ್ತೆ ಸಹಿತ ಹಲವು ಮೂಲ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿದರು.

ಕೇಂದ್ರ ಸರ್ಕಾರದ ಸ್ವದೇಶಿ ದರ್ಶನ್ ಯೋಜನೆ ಐತಿಹಾಸಿಕ ಸ್ಥಳಗಳ ಟೂರ್‌ ಸರ್ಕ್ಯೂಟ್ ಸೇರ್ಪಡೆಗೆ ಚಿತ್ರದುರ್ಗ ಕೋಟೆ ಸಹಿತ ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳ ವಿವಿಧ ಪ್ರವಾಸಿ ತಾಣಗಳ ಸೇರ್ಪಡೆಗೆ ಸಲ್ಲಿಸಿರುವ ಪ್ರಸ್ತಾವನೆಗೆ ಶೀಘ್ರ ಮಂಜೂರಾತಿ ಸಿಗಲಿ ಎಂಬ ಒತ್ತಾಯವೂ ಕೇಳಿ ಬಂತು.

ತಿಪಟೂರಿನ ಶ್ರೀ ರುದ್ರಮುನಿ ಸ್ವಾಮಿ,ಮುಖಂಡರಾದ ಕೆಇಬಿ ಷಣ್ಮುಖಪ್ಪ, ಡಾ.ಮಲ್ಲಿಕಾರ್ಜುನಪ್ಪ, ಡಾ.ಚಿತ್ರಶೇಖರ್, ಪರಮಶಿವಯ್ಯ, ಕೆ.ಎಂ.ವಿರೇಶ್,ನಾಗರಾಜ್ ಸಗಂ, ಮಲ್ಲಿಕಾರ್ಜುನ್, ಪೈಲ್ವಾನ್ ತಿಪ್ಪೇಸ್ವಾಮಿ ಮೊದಲಾದವರು ಇದ್ದರು.

Leave a Reply

Your email address will not be published. Required fields are marked *