ಸಿದ್ಧಗಂಗಾ ಶ್ರೀಗಳು ಆಸ್ಪತ್ರೆಯಿಂದ ಮಠಕ್ಕೆ ಶಿಫ್ಟ್​

ತುಮಕೂರು: ಸಿದ್ಧಗಂಗಾ ಶ್ರೀಗಳ ಅಪೇಕ್ಷೆಯಂತೆ ಅವರನ್ನು ಸಿದ್ಧಗಂಗಾ ಆಸ್ಪತ್ರೆಯಿಂದ ಮಠಕ್ಕೆ ಕರೆದೊಯ್ಯಲಾಗಿದೆ.

ಬುಧವಾರ ಬೆಳಗಿನ ಜಾವ 3.45 ಕ್ಕೆ ಸಿದ್ಧಗಂಗಾ ಶ್ರೀಗಳನ್ನು ಆಂಬುಲೆನ್ಸ್​ನಲ್ಲಿ ಮಠಕ್ಕೆ ಕರೆತರಲಾಯಿತು. ಸ್ವಾಮೀಜಿಯನ್ನು ಮಠಕ್ಕೆ ಶಿಫ್ಟ್​ ಮಾಡುವ ಕುರಿತು ಮಂಗಳವಾರ ಸಭೆ ನಡೆಸಲಾಗಿತ್ತು. ಮಂಗಳವಾರ ರಾತ್ರಿ ಸ್ವಾಮೀಜಿ ತಾವು ಮಠಕ್ಕೆ ತೆರಳಬೇಕು ಎಂದು ಚಡಪಡಿಸಿದ ಹಿನ್ನೆಲೆಯಲ್ಲಿ ಬೆಳಗಿನ ಜಾವ ಅವರನ್ನು ಮಠಕ್ಕೆ ಕರೆದೊಯ್ಯಲಾಗಿದೆ. ಅವರಿಗೆ ತಗುಲಿದ್ದ ಸೋಂಕು ಕಡಿಮೆಯಾಗಿದೆ. ಆಸ್ಪತ್ರೆಯಲ್ಲಿ ನೀಡುತ್ತಿದ್ದ ಚಿಕಿತ್ಸೆಯನ್ನೇ ಮಠದಲ್ಲೇ ಮುಂದುವರಿಸಲಾಗುವುದು. ಸಿದ್ಧಗಂಗಾ ಶ್ರೀಗಳ ಆರೋಗ್ಯದ ಕುರಿತು ಭಕ್ತರು ಆತಂಕ ಪಡುವ ಅಗತ್ಯವಿಲ್ಲ. ಅವರು ನಿಶ್ಯಕ್ತರಾಗಿದ್ದಾರೆ. ಅವರಿಗೆ ಶಕ್ತಿ ಬರಬೇಕಿದೆ. ಈಗ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಸಿದ್ಧಗಂಗಾ ಶ್ರೀಗಳ ಆಪ್ತ ವೈದ್ಯ ಡಾ. ಪರಮೇಶ್ವರ ತಿಳಿಸಿದ್ದಾರೆ.

ಶ್ರೀಗಳು ಮಠಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ನೋಡಲು ಸಾವಿರಾರು ಮಕ್ಕಳು ಕಾಯುತ್ತಿದ್ದರು. ಈ ಸಂದರ್ಭದಲ್ಲಿ ಅವರು ಶ್ರೀಗಳಿಗಾಗಿ ಪ್ರಾರ್ಥನೆ ಸಲ್ಲಿಸಿದರು.