ಸಿದ್ಧಗಂಗೆಯ ಮಹಾಶಿಲ್ಪಿ

ಶಿಲೆಯೊಳಗಣ ಪಾವಕದಂತೆ, ಉದಕದೊಳಗಣ ಪ್ರತಿಬಿಂಬದಂತೆ… ಅಲ್ಲಮಪ್ರಭುವಿನ ಈ ವಚನ ಕೇಳಿದಾಗಲೆಲ್ಲ ‘ನಡೆದಾಡುವ ದೇವರು’ ಎಂದೇ ಪ್ರಸಿದ್ಧರಾದ ತುಮಕೂರಿನ ಸಿದ್ಧಗಂಗಾ ಮಠಾಧೀಶ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ನೆನಪಾಗುತ್ತಾರೆ. ಆಡದಲೆ ಮಾಡುವ ರೂಢಿಯೊಳಗುತ್ತಮರು ಅವರು. ಸಿದ್ಧಗಂಗಾ ಶ್ರೀಗಳು ಸಾರಿದ ತತ್ವ, ಬದುಕುತ್ತಿರುವ ಪರಿ ಇಡೀ ವಿಶ್ವಕ್ಕೇ ಮಾದರಿ. ‘ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯ’ ಎಂಬುದನ್ನು ಕಾರ್ಯರೂಪಕ್ಕಿಳಿಸಿದ ಅಗ್ರಗಣ್ಯರು. ಸಿದ್ಧಗಂಗಾ ಶ್ರೀಗಳು ಈ ನಾಡಿನ ಅಪರೂಪದ ಅಚ್ಚರಿ. ತ್ರಿವಿಧ ದಾಸೋಹದ ಸಾಕಾರಮೂರ್ತಿ. ಪ್ರೀತಿ-ವಾತ್ಸಲ್ಯದ ಮಹಾಮೇರು. ಬಡವ-ಬಲ್ಲಿದರೆನ್ನದೆ ಎಲ್ಲರನ್ನೂ ಸಮಭಾವದಿಂದ ಕಾಣುವ ಸಮದರ್ಶಿ. 111ನೇ ಇಳಿವಯಸ್ಸಿನಲ್ಲೂ ಕ್ರಿಯಾಶೀಲ. ‘ಮಹಾತ್ಮರು ಯಾವುದೇ ಒಂದು ಯುಗ, ದೇಶಕ್ಕೆ ಸೇರಿದವರಲ್ಲ. ಅವರ ಇರುವಿಕೆ ಸಾರ್ವಕಾಲಿಕ, ಸರ್ವತ್ರವಾದದ್ದು’ ಎಂದು ಆಂಗ್ಲ ಸಾಹಿತಿ ಬೆನ್ ಜಾನ್ಸನ್ ಹೇಳಿದ್ದು ತುಮಕೂರಿನ ಸಿದ್ಧಗಂಗಾ ಸ್ವಾಮೀಜಿಯವರಿಗೆ ಅಕ್ಷರಶಃ ಅನ್ವಯವಾಗುತ್ತದೆ. ಗ್ರಾಮೀಣ ಭಾಗದ ಅವಿದ್ಯಾವಂತ ಕುಟುಂಬಗಳ ಲಕ್ಷಾಂತರ ಮಕ್ಕಳಿಗೆ ಊಟ, ವಸತಿ, ಶಿಕ್ಷಣ ನೀಡಿ ವಿದ್ಯಾವಂತರನ್ನಾಗಿ ಮಾಡಿದ ‘ಶಿಲ್ಪಿ’ ಸಿದ್ಧಗಂಗಾ ಶ್ರೀಗಳು. ಅವರು ‘ಕಟೆದ ಶಿಲ್ಪಗಳು’ ಇಂದು ನಾಡಿನೆಲ್ಲೆಡೆ ಉನ್ನತ ಸ್ಥಾನಗಳನ್ನು ಅಲಂಕರಿಸಿವೆ. ಸಿದ್ಧಗಂಗೆಯ ಶಾಲೆಯಲ್ಲಿ ಓದಿದ ಅನೇಕರು ಈಗ ಹಲವು ಕ್ಷೇತ್ರಗಳಲ್ಲಿ ಗಣ್ಯಮಾನ್ಯರಾಗಿದ್ದು, ಆ ಪೈಕಿ ಕೆಲವರು ಚಿಕ್ಕಂದಿನಲ್ಲಿ ತಾವು ಶ್ರೀಗಳೊಂದಿಗೆ ಒಡನಾಡಿದ ಕ್ಷಣಗಳನ್ನು ಇಲ್ಲಿ ನೆನಪಿಸಿಕೊಂಡಿದ್ದಾರೆ.

ಪ್ರಖ್ಯಾತಿ ತಂದುಕೊಟ್ಟ ಚಡ್ಡಿ ಪ್ರಮೇಯ!

| ಮುಖ್ಯಮಂತ್ರಿ ಚಂದ್ರು ಕಲಾವಿದ

ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಹೀಗಾಗಿ 1968ರಲ್ಲಿ ನಾನು ಮಠಕ್ಕೆ ಬಂದೆ. ವಿದ್ಯಾಭ್ಯಾಸದಲ್ಲಿ ವೀಕು. ಕನ್ನಡ ಮೀಡಿಯಂ ವಿದ್ಯಾರ್ಥಿ. ಗ್ರಾಮರ್ ಗೊತ್ತಿರಲಿಲ್ಲ. ಓದ್ತಾ ಇದ್ದೆ. ತಲೆಗೆ ಹತ್ತುತ್ತಿರಲಿಲ್ಲ. ಆದರೆ, ಉಡಾಳತನಕ್ಕೇನೂ ಕಮ್ಮಿಯಿರಲಿಲ್ಲ. ಸ್ವಾಮಿಗಳು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಪಾಠಾನ ಕನ್ನಡದಲ್ಲೇ ಹೇಳಿ ಅರ್ಥ ಮಾಡಿಸುತ್ತಿದ್ದರು.

ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಶ್ರೀಗಳು ಮಲಗುವ ಬಿಲ್ಡಿಂಗ್​ನಲ್ಲೇ ವಾಸಕ್ಕೆ ವ್ಯವಸ್ಥೆಯಿರುತ್ತದೆ. ಅದು ಮಾರ್ಕಾಂಡೇಯ ನಿಲಯ. ನನ್ನ ಕೊಠಡಿ ಸ್ವಾಮೀಜಿಗಳ ಕೊಠಡಿಯ ಪಕ್ಕದಲ್ಲೇ ಇತ್ತು. ಪ್ರತಿ ರಾತ್ರಿ 11 ಗಂಟೆವರೆಗೆ ಓದೋದು ಕಡ್ಡಾಯವಾಗಿತ್ತು. ನನಗೋ ಓದುವ ಆಸಕ್ತಿ ಕಡಿಮೆ. ಆದರೆ ಸ್ವಾಮೀಜಿ ನಿತ್ಯ ತಪಾಸಣೆಗೆ ಬರ್ತಾ ಇದ್ರು. ಆದ್ರೂ ನಾನು ಕದ್ದುಮುಚ್ಚಿ ಪುಸ್ತಕದ ಪಾಠ ತೆಗೆದಿಟ್ಟು ಟ್ರಂಕ್​ಗೆ ತಲೆಕೊಟ್ಟು ಮಲಗ್ತಿದ್ದೆ. ಇದಕ್ಕಾಗಿ ನನ್ನ ಸಹಪಾಠಿಗಳಿಗೆಲ್ಲ ಊರಿಂದ ತರುತ್ತಿದ್ದ ಸ್ವೀಟ್ಸ್, ತಿಂಡಿ ಕೊಟ್ಟು ಫ್ರೆಂಡ್ ಮಾಡ್ಕೊಂಡಿದ್ದೆ. ಅವು› ಸ್ವಾಮೀಜಿ ಬರುವ ಮುನ್ಸೂಚನೆ (ಅವರು ಮರದ ಪಾದುಕೆ ಬಳಸುತ್ತಿದ್ದುದರಿಂದ ಆಗುತ್ತಿದ್ದ ಸದ್ದು) ಸಿಕ್ಕ ತಕ್ಷಣ ಎಬ್ಬಿಸ್ತಾ ಇದ್ರು. ಸ್ವಾಮೀಜಿಗೆ ಈ ವಿಚಾರ ಹೇಗೋ ಗೊತ್ತಾಗಿ, ಅವತ್ತು ರಾತ್ರಿ ಪಾದುಕೆಗಳನ್ನು ಕಂಕುಳಲ್ಲಿಟ್ಟು ರೂಂ ಬಳಿ ಬಂದಿದ್ರು.

ನಾನು ಎಂದಿನಂತೆ ನಿದ್ದೆ ಮಾಡ್ತಿದ್ದೆ. ನನ್ನ ಫ್ರೆಂಡ್ಸ್ ಎಬ್ಬಿಸೋಕೆ ಟ್ರೖೆ ಮಾಡಿದ್ರು. ಕಿಟಕಿಯಿಂದನೇ ಎಬ್ಬಿಸದಂತೆ ತಡೆದು ಒಳಬಂದಿದ್ರು. ಬಂದವರೇ ಕೊಡೆಯ ತುದಿಯಿಂದ ಅಂಗಾಲನ್ನು ಕೆರೆದರು. ನಿದ್ದೆಗಣ್ಣಲ್ಲೇ ಏನೋ ಮಾತಾಡಿದೆ. ಆದರೂ ಏಳಲಿಲ್ಲ. ಕಿವಿಯಲ್ಲಿ ಬಟ್ಟೆ ಸುರುಳಿ ತೂರಿದರು. ಆಗ ಬೈದೇಬಿಟ್ಟೆ. ಎಚ್ಚರವಾಯ್ತು. ನೋಡಿದರೆ ಸ್ವಾಮೀಜಿ. ಗಾಬರಿಯಿಂದ ಸ್ವಾಮಿಗಳ ಕಾಲಿಗೆ ಬಿದ್ದುಬಿಟ್ಟೆ. ಓದಿದ್ದು ತಲೆಗೆ ಹತ್ತುತ್ತಿಲ್ಲ. ಅದ್ಕೆ ಮಲಗಿಬಿಟ್ಟೆ ಸ್ವಾಮಿ. ತಪ್ಪಾಯ್ತು ಅಂದೆ. ಮಾರನೇ ದಿನ ಗಣಿತ ಪರೀಕ್ಷೆಯಿತ್ತು. ಫೈಥಾಗೊರಸ್ ಥಿಯರಿ ಪಾಠ ತೆಗೆದು ಮಲಗಿದ್ದೆ. ಪುಸ್ತಕ ನೋಡಿ ಏನ್ ಓದ್ತಾ ಇದ್ದೆ ಎಂದು ಕೇಳಿದರು. ಗಾಬರಿಯಿಂದ ಫೈಥಾಗೊರಸ್ ಎನ್ನುವ ಪದ ನೆನಪಿಗೆ ಬರಲೇ ಇಲ್ಲ. ಆ ಪ್ರಮೇಯದ ಚಿತ್ರ ನೆನಪಿಗೆ ಬಂತು. ಚಡ್ಡಿ ಪ್ರಮೇಯ ಅಂದುಬಿಟ್ಟೆ. ಸ್ವಾಮೀಜಿ ಸೇರಿ ಅಲ್ಲಿದ್ದೋರೆಲ್ಲ ನಕ್ಬಿಟ್ರು. ಓದ್ಕೊ ಅಂತಷ್ಟೇ ಹೇಳಿ ಸ್ವಾಮೀಜಿ ಹೊರಟರು. ಮಾರನೇ ದಿನ ಪ್ರಾರ್ಥನೆ ಸಮಯದಲ್ಲಿ ನನ್ನನ್ನು ಕರೆದು ಪಕ್ಕಕ್ಕೆ ನಿಲ್ಲಿಸಿಕೊಂಡು, ‘ನಮ್ಮ ಚಂದ್ರಶೇಖರ ಒಂದು ಹೊಸ ಸಿದ್ಧಾಂತ ಕಂಡುಹಿಡಿದಿದಾನೆ. ಅದೇನು ಗೊತ್ತಾ? ಚಡ್ಡಿ ಪ್ರಮೇಯ’ ಅಂದುಬಿಟ್ರು. ಅಲ್ಲಿಂದ ನಾನು ಫೇಮಸ್ ಆಗ್ಬಿಟ್ಟೆ. ಸ್ವಾಮೀಜಿಗಳಿಗೆ ಹತ್ತಿರದವನಾಗಿಬಿಟ್ಟೆ.

ಒಮ್ಮೆ ಹೀಗಾಯ್ತು. ಪಠ್ಯದೊಂದಿಗೆ ಬದುಕಿನ ಪಾಠವನ್ನೂ ಕಲಿಸ್ತಿದ್ರು ಸ್ವಾಮೀಜಿ. ಎಸ್ಸೆಸ್ಸೆಲ್ಸಿ ಮಕ್ಕಳು ಇಟ್ಟಿಗೆ, ಮಣ್ಣನ್ನು ಬೇರೆ ಕಡೆಗೆ ಹಾಕಬೇಕಿತ್ತು. ಉಳಿದವರಿಗೆ ಪ್ರತಿದಿನ 10 ಇಟ್ಟಿಗೆ ಸಾಗಿಸೋಕೆ ಹೇಳಿದರೆ ನನಗೆ ಮಾತ್ರ 13 ಇಟ್ಟಿಗೆ ಹೊರೋಕೆ ಹೇಳಿದ್ರು. ನಾನು ಉಡಾಳ ಅನ್ನೋ ಕಾರಣಕ್ಕೆ ವೀರಭದ್ರಪ್ಪ ಮಾಸ್ತರರಿಗೆ ನನ್ಮೇಲೆ ಕೋಪ ಇತ್ತು ಅನಿಸತ್ತೆ. ಇದ್ರಿಂದ ನಂಗೆ ಬೇಜಾರಾಯ್ತು. ಏನಾದ್ರೂ ಮಾಡಬೇಕಲ್ಲ ಅಂತಿರೋವಾಗಲೇ ಸ್ವಾಮೀಜಿ ಬರ್ತಾ ಇದ್ದದ್ದು ಕಾಣಿಸ್ತು. ತಕ್ಷಣ ಧೊಪ್ ಅಂತಾ ಬಿದ್ದೆ. ಬೇಕಂತಲೇ ಪ್ರಜ್ಞೆ ತಪ್ಪಿದವರ ಹಾಗೆ ನಟಿಸಿದೆ. ಮಕ್ಕಳು ಹುಷಾರು ತಪ್ಪಿದ್ರೆ ಸ್ವಾಮೀಜಿ ಆತಂಕಕ್ಕೊಳಗಾಗ್ತಾ ಇದ್ರು. ನಾನು ಬಿದ್ದಿದ್ದು ನೋಡಿ ಓಡಿಬಂದ್ರು ಸ್ವಾಮೀಜಿ. ನೀರು ಕೊಟ್ಟು ಗಾಳಿ ಹಾಕಿ ಎಚ್ಚರಿಸಿದರು. ಏನಾಯ್ತು ಅಂದ್ರು, ಸತ್ಯದ ಜತೆ ಸುಳ್ಳನ್ನೂ ಹೇಳಿದೆ. 13 ಇಟ್ಟಿಗೆ ಬದಲು 15 ಇಟ್ಟಿಗೆ ಹೊರಿಸ್ತಾ ಇದಾರೆ. ಸುಸ್ತಾಗಿದೆ ಅಂದೆ. ಈ ಮಾತನ್ನು ಕೇಳಿದವರೇ ವೀರಭದ್ರಪ್ಪ ಮಾಸ್ತರರಿಗೆ ಬೈದ್ರು. ಅವ್ನಿಗೆ ಸುಸ್ತಾಗಿದೆ. ಎರಡು ದಿನ ನೀವೇ ಅವನಿಗೆ ರೂಂಗೇ ಊಟ ತೆಗೆದುಕೊಂಡು ಹೋಗಿ ಕೊಡಿ ಅಂದ್ರು.

ಬೇರೆಯವರ ಬಕೆಟ್​ಗೆ ನನ್ನ ಬಟ್ಟೆ

ನಾನು ಉಡಾಳ ಹೇಗೋ ಹಾಗೇ ಸೋಮಾರಿ ಕೂಡ. ಪ್ರತಿ ಶನಿವಾರ ರಾತ್ರಿ ಅವರವರಿಗೆ ಅಂತಾ ನಿಗದಿಮಾಡಿದ ಬಕೆಟ್​ನಲ್ಲಿ ಬಟ್ಟೆ ನೆನೆಸಿಟ್ಟು ಮಾರನೇ ದಿನ ಬೆಳಗ್ಗೆ ಒಗೆಯಬೇಕು. ಬಟ್ಟೆ ಒಗೆಯೋದಂದ್ರೆ ನನಗೆ ಆಗ್ತಿರಲಿಲ್ಲ. ಅದಕ್ಕೇ ಬೇರೆಯವರ ಬಕೆಟ್​ನಲ್ಲಿ ಯಾರಿಗೂ ಗೊತ್ತಾಗದ ಹಾಗೆ ಎರಡೆರಡೇ ಬಟ್ಟೆ ಹಾಕ್ಬಿಡ್ತಿದ್ದೆ. ಅವರೋ ಎಲ್ಲೋ ಮಿಸ್ಸಾಗಿ ಬಂದಿದೆ ಅಂದ್ಕೊಂಡು ಒಗೀತಾ ಇದ್ರು. ಅವರು ಆ ಕಡೆ ಬಟ್ಟೆ ಒಗೀತಾ ಇದ್ರೆ ನಾನು ಅವರ ರೂಂಗೆ ಹೋಗಿ ಟ್ರಂಕ್​ನಲ್ಲಿಟ್ಟಿರ್ತಿದ್ದ ಸ್ವೀಟ್ಸ್ ಕದ್ದು ತೆಗೀತಾ ಇದ್ದೆ! ಸ್ವಾಮೀಜಿಗಳಿಗೆ ಗೊತ್ತಾಯ್ತು. ಬೈತಾರೆ ಅಂತಾ ಭಯವಾಯ್ತು. ಆದರೆ ಬಯ್ಯಲಿಲ್ಲ. ವಿದ್ಯೆ ಒಂದೇ ಅಲ್ಲ, ಸಂದಭೋಚಿತವಾಗಿ ಬದುಕೋದೂ ಮುಖ್ಯ ಎಂದುಬಿಟ್ಟರು. ನನಗಾಗ ಎಲ್ಲಿಲ್ಲದ ಖುಷಿ.

ಸ್ವಾಮೀಜಿಯವರೇ ಉಂಗುರ ತೊಡಿಸಿದ್ದರು

| ಪ್ರೊ.ಮಲ್ಲೇಪುರಂ ವೆಂಕಟೇಶ್ ವಿಶ್ರಾಂತ ಕುಲಪತಿ, ಸಂಸ್ಕೃತ ವಿವಿ

1998ರಲ್ಲಿ ಹಂಪಿ ಕನ್ನಡ ವಿವಿ ರಿಜಿಸ್ಟ್ರಾರ್ ಆದೆ. ನನ್ನ ಅವಧಿಯಲ್ಲೇ ಸಿದ್ಧಗೊಳಿಸಿದ ‘ಶಿವತತ್ವ ರತ್ನಾಕರ’ ವಿಶ್ವಕೋಶದ ಸಂಪುಟಗಳನ್ನು ಸ್ವಾಮೀಜಿಗಳಿಗೆ ಅರ್ಪಿಸಲು ಐದಾರು ವರ್ಷಗಳ ಬಳಿಕ 1999ರಲ್ಲಿ ಮಠಕ್ಕೆ ತೆರಳಿದ್ದೆ. ಸಂಜೆ ಆರರ ಸಮಯ. ಸಾಮೂಹಿಕ ಪ್ರಾರ್ಥನೆ ನಡೆಯುತ್ತಿತ್ತು. ಶ್ರೀಗಳೂ ಪ್ರಾರ್ಥನೆಯಲ್ಲಿದ್ದರು. ನಾನು ಮೂಲೆಯಲ್ಲಿ ಕುಳಿತುಕೊಂಡೆ. ಅದು ಹೇಗೆ ಶ್ರೀಗಳಿಗೆ ಗೊತ್ತಾಯಿತೋ ಗೊತ್ತಿಲ್ಲ. ನಾನು ಕುಳಿತಿದ್ದ ಜಾಗಕ್ಕೆ ಒಬ್ಬರು ಬಂದು ಸ್ವಾಮೀಜಿಯವರು ನಿಮ್ಮನ್ನು ಕರೆಯುತ್ತಿದ್ದಾರೆ. ಬನ್ನಿ ಎಂದರು. ತಮ್ಮ ಪಕ್ಕದಲ್ಲೇ ಖುರ್ಚಿ ಹಾಕಿಸಿ ನನಗೆ ಕುಳಿತುಕೊಳ್ಳಲು ಹೇಳಿದರು. ಆಶೀರ್ವಾದ ಮಾತು ಮುಗಿದ ಬಳಿಕ ಅಲ್ಲಿದ್ದ ವಿದ್ಯಾರ್ಥಿಗಳ ಸಮೂಹಕ್ಕೆ ನನ್ನನ್ನು ಪರಿಚಯಿಸುತ್ತ ‘ಕೆಳವರ್ಗದ ಬಡ ಕುಟುಂಬದಲ್ಲಿ ಹುಟ್ಟಿ ಸಂಸ್ಕೃತ ವಿದ್ವಾಂಸನಾಗಿದ್ದಾನೆ. ನೀವೂ ಬಡವರಿದ್ದೀರಿ. ನೀವೂ ಅವರಂತೆ ಆಗಬೇಕು’ ಎಂದರು. ಮಠದ ವಿದ್ಯಾರ್ಥಿಗಳ ಪೈಕಿ ಕುಲಪತಿಯಂತಹ ಉನ್ನತ ಹುದ್ದೆಗೇರಿದ್ದು ನಾನೊಬ್ಬನೆ. ಸಂಸ್ಕೃತ ವಿವಿ ಕುಲಪತಿಯಾದಾಗ ನನ್ನನ್ನು ಕರೆಸಿ ತಮ್ಮ ಮುದ್ರೆಯಿದ್ದ ಉಂಗುರವನ್ನು ಖುದ್ದಾಗಿ ಸ್ವಾಮೀಜಿಯವರೇ ತೊಡಿಸಿ, ಸಿದ್ಧಗಂಗಾ ಶ್ರೀ ಪ್ರಶಸ್ತಿ ನೀಡಿದ್ದನ್ನು ಎಂದೆಂದಿಗೂ ಮರೆಯಲಾರೆ.

ಅವರ ಸ್ಮರಣೆಯಲ್ಲೇ ನನ್ನ ನಿತ್ಯದ ಊಟ

| ಗೋವಿಂದರಾಜು ಅಂಗವಿಕಲರ ಕಲ್ಯಾಣ ಇಲಾಖೆ ನಿರ್ದೇಶಕರು

ಸಿದ್ಧಗಂಗಾ ಶ್ರೀಗಳು ಎಲ್ಲ ಸಮುದಾಯದ ಬಡವರಿಗೆ ಆದ್ಯತೆ ಕೊಟ್ಟವರು. ಗುರುಗಳ ಆಶೀರ್ವಾದವಿರದಿದ್ದರೆ ನಾನು ಇವತ್ತಿಗೂ ಕೂಲಿ ಕೆಲಸ ಮಾಡುತ್ತಿರುತ್ತಿದ್ದೆ. ಅಂದು ಅವರು ಮಾಡಿದ ನೆರವಿಗೆ ಇಂದಿಗೂ ಅವರ ಸ್ಮರಣೆಯಲ್ಲೇ ಊಟ ಮಾಡುತ್ತಿರುವೆ.

ನಾನು ಐದನೇ ತರಗತಿಗೆ ಮಠಕ್ಕೆ ಸೇರಿದೆ. ಆಗ ನಾಲ್ಕೈದು ಸಾವಿರ ವಿದ್ಯಾರ್ಥಿಗಳಿದ್ರು. ಆಗೆಲ್ಲ ಸ್ವಾಮೀಜಿಯವರೇ ಖುದ್ದಾಗಿ ಗಂಜಿ ಬಡಿಸ್ತಾ ಇದ್ರು. ಅಪ್ಪ-ಅಮ್ಮನೂ ತೋರದ ಪ್ರೀತಿಯನ್ನು ಸ್ವಾಮೀಜಿಯವರಿಂದ ಉಂಡಿದ್ದೇವೆ. ಮಕ್ಕಳಿಗೆ ಇಂಗ್ಲಿಷ್-ಗಣಿತ ಕಷ್ಟ ಎಂಬುದನ್ನು ಅರಿತಿದ್ದ ಸ್ವಾಮೀಜಿ ನಿತ್ಯ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪಾಠ ಮಾಡ್ತಿದ್ರು. ಅವರು ಅಂದು ಹೇಳುತ್ತಿದ್ದ ಪಾಠ, ವ್ಯಾಕರಣ ಈಗಲೂ ನೆನಪಾಗ್ತಿರತ್ತೆ. ನನ್ನನ್ನು ಒಳ್ಳೆಯ ಭಾಷಣಕಾರ ಅಂತಾರೆ. ಆದರೆ ಸ್ವಾಮೀಜಿ ಎದುರು ನಿಂತ್ರೆ ಈಗಲೂ ನಡುಕ ಶುರುವಾಗತ್ತೆ.

ಟೆಲಿಕಾಂ ಸಂಸ್ಥೆಯಲ್ಲಿದ್ದಾಗ ಪ್ರತಿ ಭಾನುವಾರ ಶ್ರೀಗಳ ದರ್ಶನಕ್ಕೆ ಹೋಗ್ತಾ ಇದ್ದೆ. ನನ್ನ ಸೀನಿಯರ್ ಅಕ್ಕನ ಮಗನಿಗೆ ಇಂಜಿನಿಯರಿಂಗ್ ಸೀಟ್ ಕೇಳಲು ಮಠಕ್ಕೆ ನನ್ನನ್ನೂ ಕರೆದೊಯ್ದಿದ್ರು. ಡೊನೇಷನ್ ಎಷ್ಟಾದ್ರೂ ಪರವಾಗಿಲ್ಲ. ನನಗೆ ಸೀಟ್ ಬೇಕೇ ಬೇಕು ಅಂತಾ ಸ್ವಾಮೀಜಿ ಬಳಿ ಪಟ್ಟುಹಿಡಿದ್ರು ನನ್ನ ಸೀನಿಯರ್. ಅಷ್ಟಾದ್ರೂ ಸ್ವಾಮೀಜಿ ಏನೂ ಮಾತನಾಡದೆ ನನ್ನನ್ನು ಕರೆದು ಒಂದು ಪೋಸ್ಟ್ ಕಾರ್ಡ್ ಕೊಟ್ಟು ಓದು ಅಂದ್ರು. ಅದ್ರಲ್ಲಿ ಅತಿ ಹಿಂದುಳಿದ ವರ್ಗಕ್ಕೆ ಸೇರಿದ ಹುಡುಗನೊಬ್ಬ ತನಗೆ ಓದುವ ಆಸೆಯಿದೆ. ಆದ್ರೆ ಕಿತ್ತು ತಿನ್ನುವ ಬಡತನ. ನಿಮ್ಮನ್ನು ಭೇಟಿ ಮಾಡೋದಕ್ಕೆ ಅಂತಾ ಬರೋದಕ್ಕೂ ಬಸ್ಸಿಗೆ ನನ್ನ ಬಳಿ ದುಡ್ಡಿಲ್ಲ ಎಂದು ಬರೆದಿದ್ದ. ಅದಕ್ಕೆ ಸ್ವಾಮೀಜಿಯವರೇ ಆತನಿಗೆ ಹಣ ಕಳಿಸಿದ್ದರು. ಅದರ ರಸೀತಿಯನ್ನೂ ತೋರಿಸಿದರು. ನೋಡಿ, ನೀವು ಶ್ರೀಮಂತರು. ಎಷ್ಟಾದರೂ ಡೊನೇಷನ್ ಕೊಡ್ತೀನಿ ಅಂತೀರಿ. ಈತ ತೀರಾ ಬಡವ. ಹೀಗಾಗಿ ಇರುವ ಒಂದು ಸೀಟು ಈತನಿಗೇ ಮೀಸಲು. ಆತ ಬರದಿದ್ದರೆ ನಿಮಗೆ ಕೊಡುವೆ ಎಂದು ಹೇಳಿದ್ದು ಶ್ರೀಗಳಿಗೆ ಬಡವರ ಬಗೆಗಿದ್ದ ಕಾಳಜಿ ತೋರಿಸಿತು.

ನಾನು ತುಮಕೂರು ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದಾಗಿನ ಮಾತು. ಒಮ್ಮೆ ದರ್ಶನಕ್ಕೆ ಹೋಗಿದ್ದೆ. ಮಠದಲ್ಲಿ ಪ್ರವೇಶ ಪಡೆದಿರುವ ಉತ್ತರ ಕರ್ನಾಟಕದ ಮಕ್ಕಳು ವಿದ್ಯೆಯಲ್ಲಿ ಹಿಂದಿದ್ದಾರೆ. ಅವರನ್ನು ಈಗಲೇ ವಾಪಸ್ ಕಳಿಸಿಬಿಡೋಣ. ಇಲ್ಲದಿದ್ದರೆ ಒಟ್ಟಾರೆ ಫಲಿತಾಂಶಕ್ಕೆ ತೊಂದರೆಯಾಗುತ್ತದೆ ಎಂದ ಮಠದ ಶಿಕ್ಷಣ ವಿಭಾಗದ ಸಿಬ್ಬಂದಿ ಹೇಳ್ತಿದ್ರು. ಅದಕ್ಕೆ ಸ್ವಾಮೀಜಿ, ಏನಾದರೂ ಆಗಲಿ. ಅವರನ್ನು ಈಗಲೇ ಕಳಿಸಿದ್ರೆ ಕಷ್ಟ ಆಗತ್ತೆ. ಈ ವರ್ಷ ಮುಗಿಯಲಿ. ಮುಂದಿನ ವರ್ಷ ಈ ಬಗ್ಗೆ ಯೋಚನೆ ಮಾಡೋಣ ಅಂದ್ಬಿಟ್ರು.

ಒಮ್ಮೆ ಮಠದ ಸುತ್ತಲಿನ ರಸ್ತೆಗಳಿಗೆ ಟಾರ್ ಹಾಕಿಸ್ತಾ ಇದ್ದೆ. ನನಗೆ ಪಾಠ ಮಾಡಿದ್ದ ಗುರುಗಳು ಆಗ ಹೆಡ್​ವಾಸ್ಟರ್ ಆಗಿದ್ರು. ಅವರು ಬಂದು ಈ ಮೈದಾನಕ್ಕೂ ಟಾರ್ ಹಾಕಿಸಬಹುದಾ ಅಂತಾ ಕೇಳಿದ್ರು. ಅಯ್ಯೋ ಗುರುಗಳೇ ಅದ್ಕೇನಂತೆ, ಹಾಕಿಸ್ತೀನಿ ಇರಿ ಎಂದು ಅಲ್ಲೇ ಇದ್ದ ಸಿಬ್ಬಂದಿಗೆ ಸೂಚಿಸಿದೆ. ಎರಡೇ ದಿನದಲ್ಲಿ ಸಿಬ್ಬಂದಿ ಚೆನ್ನಾಗಿಯೇ ಟಾರ್ ಹಾಕಿಸಿದ್ರು. ಮೂರ್ ದಿನ ಬಿಟ್ಟು ಹೆಡ್​ವಾಸ್ಟರ್ ನನ್ನ ಮನೆಗೇ ಬಂದು, ಮೈದಾನಕ್ಕೆ ಟಾರ್ ಹಾಕಿಸಿರೋದು ಬುದ್ಧಿಯವ್ರಿಗೆ ಇಷ್ಟ ಆಗಿಲ್ಲ. ಹೀಗಾಗಿ ನೀವೇ ಬಂದು ಸರಿಮಾಡಬೇಕು ಎಂದರು. ನಾನು ಹೋದಾಗ, ಎಲ್ಲರನ್ನೂ ಕರೆದು ‘ಇವನು ಮಠದ ವಿದ್ಯಾರ್ಥಿ. ಮಠದ ಬಗ್ಗೆ ಭಾರಿ ಗೌರವ. ಹೀಗಾಗಿ ಏನ್ ಹೇಳಿದ್ರೂ ಮಾಡ್ತಾನೆ. ಆದರೆ ಅವನನ್ನು, ಅವನ ಅಧಿಕಾರವನ್ನು ನಾವು ದುರ್ಬಳಕೆ ಮಾಡಿಕೊಳ್ಳಬಾರದು’ ಎಂದು ಹೇಳಿದ್ದನ್ನು ಮರೆಯಲಾಗದು.

ಸ್ವಾಮೀಜಿ ಹೇಳಿದಂತೆ ನಾನು ಮಠಕ್ಕೆ ಅಂದ್ರೆ ಏನ್ ಬೇಕಾದ್ರೂ ಮಾಡ್ತೀನಿ. ಕೆಲಸ ಹೋದ್ರೂ ಪರವಾಗಿಲ್ಲ. ಮಠದ ಸೇವಕನಾಗಿ ಇದ್ದುಬಿಡುತ್ತೇನೆ.

ಅವ್ರೇ ಊಟ ತರ್ತಿದ್ರು

ಪಾಠದ ಜತೆ ಬದುಕೂ ತಿಳಿಯಬೇಕು ಎಂಬುದು ಸ್ವಾಮೀಜಿಯವರ ನಿಲುವು. ದೊಡ್ಡ ಕ್ಲಾಸಿನ ವಿದ್ಯಾರ್ಥಿಗಳಲ್ಲಿ ಕೆಲವರು ಸೇರಿ ಮಠಕ್ಕೆ ಸೌದೆ ತರೋದಕ್ಕೆ ಎಂದು ದೇವರಾಯನದುರ್ಗದ ಕಡೆ ಹೋಗಿದ್ವಿ. ಆಗ ಸ್ವಾಮೀಜಿಯವು› ನಾವಿದ್ದಲ್ಲಿಗೇ ಮಧ್ಯಾಹ್ನದ ಊಟ ತಂದು ಬಡಿಸಿದ್ದರು.

ಸ್ವೀಟ್ ಎತ್ತಿಟ್ಟಿದ್ರು…

ಸ್ವಾಮೀಜಿಯವರ ಜನ್ಮದಿನಕ್ಕೆ ಸಿಹಿ ಮಾಡೋದು ರೂಢಿ. ಆ ವರ್ಷ ವಿದ್ಯಾರ್ಥಿಗಳಿಗೆ ರಜೆ ಇದ್ದಾಗ ಜನ್ಮದಿನ ಬಂದಿತ್ತು. ಹೀಗಾಗಿ ಮಾಡಿದ್ದ ಸ್ವೀಟ್​ನಲ್ಲಿ ಒಂದಷ್ಟನ್ನು ಒಂದು ರೂಂನಲ್ಲಿಟ್ಟು ಬೀಗ ಹಾಕಿದ್ರು. ಆಮೇಲೆ ಅವ್ರೇ ಅಂದ್ರು, ಸ್ವೀಟ್ಸ್ ಹೊರಗಿದ್ರೆ ಖಾಲಿಯಾಗಿಬಿಡತ್ತೆ. ರಜೆಗೆ ಅಂತಾ ಊರಿಗೆ ಹೋಗಿರೋ ಮಕ್ಕಳಿಗೆ ಸಿಗೋದೇ ಇಲ್ಲ. ಅದಕ್ಕೆ ಈ ರೂಂನಲ್ಲಿಟ್ಟಿದೀನಿ ಅಂದ್ರು. ಮಕ್ಕಳ ಮೇಲಿನ ಸ್ವಾಮೀಜಿಯವರ ಅಕ್ಕರೆಗೆ ಏನೆನ್ನಲಿ?

ಸ್ವಾಮೀಜಿ ಕಾಳಜಿ ಅನನ್ಯ

| ವಿ. ಎಸ್. ಉಗ್ರಪ್ಪ ಕಾಂಗ್ರೆಸ್ ಹಿರಿಯ ನಾಯಕರು

ಎಸ್​ಎಸ್​ಎಲ್​ಸಿ, ಪಿಯುಸಿ ಓದುವಾಗ ಬೆಳಗ್ಗೆ 6ಕ್ಕೆ ಸ್ವಾಮೀಜಿಗಳು ನಮಗೆಲ್ಲ ಇಂಗ್ಲಿಷ್ ಪಾಠ ಮಾಡ್ತಿದ್ರು. ಅಲ್ಲಿರುವ ಆಡಿಟೋರಿಯಂನಲ್ಲಿ ಪ್ರತಿದಿನ ಮೈಕ್ ಇಲ್ಲದೆ ಆ ಕಡೆ ಈ ಕಡೆ ಓಡಾಡಿಕೊಂಡು ಸುಮಾರು 600-700, ಒಮ್ಮೊಮ್ಮೆ ಸಾವಿರ ಮಕ್ಕಳಿಗೆ ಪಾಠ ಮಾಡುತ್ತಿದ್ರು. ಸಂಜೆ ಹೊತ್ತಿನಲ್ಲಿ, ವಿಶೇಷವಾಗಿ ಶನಿವಾರ, ಭಾನುವಾರ ನಮ್ಮ ಬಳಿ ಕೆಲಸ ಮಾಡಿಸೋರು. ಪೈರು ಹಾಕಿಸೋದು, ಕೊಯ್ಯೋದು, ಪಕ್ಕದ ಮಾರನಾಯಕನ ಹಳ್ಳಿ, ಬಂಡೆಪಾಳ್ಯ ಮುಂತಾದ ಕಡೆಗಳಿಂದ ಕಲ್ಲು ಹೊತ್ತುಕೊಂಡು ಬಂದು ಹಾಕುವ ಕೆಲಸ ಮಾಡ್ತಾ ಇದ್ವಿ. ಅಲ್ಲಿಗೆ ಸ್ವಾಮೀಜಿಗಳೂ ಬೆತ್ತ ಹಿಡಿದು ಬರೋರು. ಯಾರಾದರೂ ಹುಡುಗರು ಭಾರದ ಕಲ್ಲು ಹೊತ್ತು ಒದ್ದಾಡ್ತಾ ಇದ್ದರೆ ಸ್ವತಃ ಸ್ವಾಮೀಜಿಗಳು ತಾವೇ ಅದನ್ನು ಹೊತ್ತುಕೊಂಡು ಹೋಗೋರು.

ಮರೆಯಲಾಗದ ಘಟನೆಗಳು ಸಾಕಷ್ಟಿವೆ. ಒಮ್ಮೆ, ನಾನು ಹೈಸ್ಕೂಲ್ 2ನೇ ವರ್ಷದಲ್ಲಿ ಓದುತ್ತಿದ್ದ ಸಮಯ.

ಆಗ ತಾನೇ ಜಾತ್ರೆ ಮುಗಿದಿತ್ತು. ಜಾತ್ರೆ ಸಮಯದಲ್ಲಿ ಮಠದ ಸುತ್ತ ಹಳ್ಳಿಯವರು ದನ ಕಟ್ಟುತ್ತಾರೆ. ಹೋರಿ ಕಟ್ಟಿಕೊಂಡು ಬಂದಿರೋರು ಅಲ್ಲಿಯೇ ಮರದ ತುಂಡು ಹುಗಿದು ತಾತ್ಕಾಲಿಕವಾಗಿ ತಂಗಿರುತ್ತಾರೆ. ಹಾಗೆಯೇ ಯಾರೋ ರೈತರು, ತಮ್ಮ ದನವನ್ನು ಅಲ್ಲಿ ಕಟ್ಟಿಕೊಂಡು ಮರದ ತುಂಡನ್ನು ಅಲ್ಲಿಯೇ ಕಟ್ ಮಾಡಿ ಹೋಗಿದ್ದರು. ಅದಾದ ನಾಲ್ಕೇ ದಿನಗಳಲ್ಲಿ ಸ್ಕೂಲ್ ಡೇ ನಿಮಿತ್ತ ಸ್ಪೋರ್ಟ್ಸ್ ನಡೀತಿತ್ತು. ಶಿಕ್ಷಕರು ಕಬ್ಬಡ್ಡಿ ಕೋರ್ಟ್ ಹಾಕೋವಾಗ ಆ ಮರದ ತುಂಡಿದ್ದ ಭಾಗಕ್ಕೆ ಪಟ್ಟೆ ಹಾಕಿದ್ರು. ನಾನು ಕಬ್ಬಡ್ಡಿ ಆಡುತ್ತಿರುವಾಗ ರೈಡ್ ಮಾಡಿ ಎಳೆದಾಡುತ್ತಿರುವಾಗ ಸರಿಯಾಗಿ ಮರದ ತುಂಡಿನ ಮೇಲೆ ಬಿದ್ದೆ. ಬಲಗಾಲಿನ ಚಿಪ್ಪು ಒಡೆದು ರಕ್ತ ಸುರಿಯತೊಡಗಿತು. ಆಗ ಸ್ವಾಮೀಜಿಯವರದ್ದು ವ್ಯಾನ್ ಇತ್ತು. ಅವರೇ ಸ್ವತಃ ನನ್ನನ್ನು ಕ್ಯಾತಸಂದ್ರಕ್ಕೆ ಕರೆದುಕೊಂಡು ಹೋಗಿ ಅಲ್ಲಿನ ಆಸ್ಪತ್ರೆಯಲ್ಲಿ ಡಾ. ತೋಪಯ್ಯ ಎನ್ನುವವರಿಂದ ಚಿಕಿತ್ಸೆ ಕೊಡಿಸಿದ್ರು. ಅವರು ಹೊಲಿಗೆ ಹಾಕಿದ್ರು. ಮೂವ್​ವೆುಂಟ್ ಇರುವ ಕಾಲಾಗಿದ್ದರಿಂದ ಅದರ ಹೊಲಿಗೆಯೂ ಒಮ್ಮೆ ಬಿಚ್ಚಿಹೋಯ್ತು. ಆ ಸಮಯದಲ್ಲಿ ಸ್ವಾಮೀಜಿಗಳು ಎಷ್ಟೋ ಬಾರಿ ಖುದ್ದಾಗಿ ಬಂದು ನೋಡಿದ್ದರು, ವಿಚಾರಿಸುತ್ತಿದ್ದರು. ಅಷ್ಟೆಲ್ಲ ಮಕ್ಕಳಿದ್ದರೂ ಅವರು ಎಲ್ಲರ ಕಡೆಗೂ ಕಾಳಜಿ ವಹಿಸುತ್ತಿದ್ದರು.

ಇನ್ನೊಮ್ಮೆ, ಒಂದು ರಾತ್ರಿ ಎಂಟರ ಸಮಯಕ್ಕೆ ನಾವೆಲ್ಲ ಊಟ ಮಾಡಲು ಕುಳಿತಿದ್ದೆವು. ಅಲ್ಲಿನ ಊಟದ ಶೈಲಿ ಹೇಗೆಂದರೆ, ಒಂದು ಹಿಡಿತುಂಬ ಅನ್ನ, ಮುದ್ದೆ, ಸಾರು. ಎಲ್ಲರಿಗೂ ಬಡಿಸಿದ ಬಳಿಕ, ಆಮೇಲೆ ‘ಸಹನಾಭವತು’ ಶ್ಲೋಕ ಹೇಳಿ ಊಟ ಮಾಡುವುದು. ನಾವು ಊಟಕ್ಕೆ ಕುಳಿತುಕೊಂಡಿದ್ದು ಹಳೆಯ ಹೆಂಚಿನ ಮನೆಯಲ್ಲಿ. ಅದರ ಒಂದು ಭಾಗ ತೆರೆದಿತ್ತು. ಇನ್ನೇನು, ಊಟಕ್ಕೆ ಕೈ ಹಾಕಿದ್ವಿ, ಅಷ್ಟರಲ್ಲಿ ಅಲ್ಲಿದ್ದ ಇಟ್ಟಿಗೆ ಮೇಲೆ ಹಲ್ಲಿ ಇದ್ದುದನ್ನು ನೋಡಿದ ಯಾರೋ ‘ಹಲ್ಲಿ…ಹಲ್ಲಿ ಬಂತು’ ಎಂದು ಕೂಗಿ, ಅದು ಹುಲಿ ಎಂದು ಯಾರಿಗೋ ಕೇಳಿ, ಎಲ್ಲರೂ ಹುಲಿ ಬಂತೆಂದು ಗಾಬರಿಯಿಂದ ಬಟ್ಟಲನ್ನು ಚೆಲ್ಲಾಪಿಲ್ಲಿ ಮಾಡಿ ಓಡಿದ್ದೇ ಓಡಿದ್ದು. ಅನ್ನದ ಮೇಲೆ, ಮುದ್ದೆ ಮೇಲೆ ಬಿದ್ದು ಒದ್ದಾಡಿದೆವು. ಆಗ ಸ್ವಾಮೀಜಿಗಳು ಬಂದು ಎಲ್ಲರಿಗೂ ಧೈರ್ಯ ತುಂಬುವಂತೆ, ‘ಎಲ್ಲಿದೆ ಹುಲಿ ನೋಡೋಣ, ಬನ್ರೋ’ ಎಂದರು. ಆಮೇಲೆ ಆ ಹುಡುಗ ‘ಹುಲಿ ಅಲ್ಲ, ಹಲ್ಲಿ’ ಎಂದ. ಗಂಟೆ ಹನ್ನೊಂದಾದರೂ ಮಕ್ಕಳಿಗೆ ಊಟವಾಗಿರಲಿಲ್ಲವೆಂದು ಪುನಃ ರಾತ್ರಿ ಅಡುಗೆ ಮಾಡಿಸಿ ಊಟ ಹಾಕಿದ್ರು.

ಶಿಸ್ತು ಕಲಿಸಿದ ಹೆಮ್ಮೆಯ ಸ್ವಾಮೀಜಿ

| ಎಲ್.ರೇವಣಸಿದ್ದಯ್ಯ ನಿವೃತ್ತ ಪೊಲೀಸ್ ಮಹಾನಿರ್ದೇಶಕ

ಸ್ವಾಮೀಜಿಯವರಿಗೆ 40 ವರ್ಷವಾಗಿದ್ದಾಗ ನಾನು ಹನ್ನೊಂದು ವರ್ಷದ ವಿದ್ಯಾರ್ಥಿ. ಎಲ್ಲರನ್ನೂ ಸ್ವಂತ ಮಕ್ಕಳಂತೆ ಕಾಣುವವರು. ವಿದ್ಯೆ, ಬುದ್ಧಿ, ಶಿಸ್ತು ಕಲಿಸುವುದಲ್ಲದೆ ಪ್ರತಿಭಾವಂತರನ್ನು ಪ್ರೋತ್ಸಾಹಿಸುವುದೇ ಅವರ ಕಾಯಕವನ್ನಾಗಿಸಿಕೊಂಡಿದ್ದರು. ಅಂತಹವರು ವಿರಳಾತಿವಿರಳ. ವಿದ್ಯಾರ್ಥಿಗಳಿಗೆ ಸ್ವತಃ ಅವರೇ ಪಾಠ ಹೇಳಿಕೊಡುತ್ತಿದ್ದರು. ಇಂಗ್ಲಿಷ್, ಸಂಸ್ಕೃತ ವಿಷಯ ಅವರಿಗೆ ಪ್ರಿಯ. ಅದು ಮಕ್ಕಳಿಗೂ ಬೇಕಿತ್ತು. ಮಠಕ್ಕೆ ಬರುವ ಯಾರನ್ನೂ ವಾಪಸ್ ಕಳುಹಿಸದಿದ್ದರೂ ಸಾವಿರಾರು ಮಕ್ಕಳನ್ನು ಅವರೇ ಖುದ್ದಾಗಿ ಮಾತನಾಡಿಸಿ ಸೇರ್ಪಡೆ ಮಾಡಿಕೊಳ್ಳುತ್ತಿದ್ದರು. ಯಾರಿಗೂ ನಿರಾಸೆ ಮಾಡುತ್ತಿರಲಿಲ್ಲ. ಎಲ್ಲವನ್ನೂ ಅವರೇ ಗಮನಿಸುತ್ತಿದ್ದರು. ಎಲ್ಲ ವಿದ್ಯಾರ್ಥಿಗಳ ಬಗ್ಗೆ ನನಗೆ ಗೊತ್ತಿರಬೇಕು ಎನ್ನುತ್ತಿದ್ದರು. ಊರಿಗೆ ಹೋಗುವಾಗಲೂ ಅವರಿಗೇ ಹೇಳಿಯೇ ಹೋಗಬೇಕಿತ್ತು. ಹಾಗೆ ಹೇಳಲು ಹೋದಾಗ ಪ್ರೀತಿಯಿಂದ ಮಾತನಾಡಿಸಿ ಕುಶಲ ವಿಚಾರಿಸಿ ಕಳುಹಿಸುತ್ತಿದ್ದ ಪರಿ ಅನುಭವಿಸಿದವರಿಗೇ ಗೊತ್ತು. 90 ವರ್ಷದವರೆಗೂ ಮಕ್ಕಳಿರುವ ಕೊಠಡಿಯಲ್ಲೇ ಮಲಗುತ್ತಿದ್ದರು. ಪೂಜೆ ಮುಗಿಸಿ ಹಿಂತಿರುಗುವಾಗ ಕೇಳಿಸುತ್ತಿದ್ದ ಪಾದುಕೆ ಸದ್ದು ಎಲ್ಲ ಮಕ್ಕಳಿಗೆ ಎಚ್ಚರಿಕೆಯ ಸಂದೇಶವಾಗಿರುತ್ತಿತ್ತು. ಯಾವುದಾದರೂ ಗ್ರಂಥ ಅಧ್ಯಯನ ಮಾಡದೆ ಮಲಗುತ್ತಿರಲಿಲ್ಲ. ಅವರೊಬ್ಬರು ಅದ್ಭುತ ವಾಗ್ಮಿ. ಆದರ್ಶ ಶಿಕ್ಷಕ, ಪೋಷಕ, ಮಾರ್ಗದರ್ಶಕರು.

ನಿಗಾ ವಹಿಸಿ ಕೆಲಸ ಮಾಡೆಂದರು

| ಎಚ್. ವಿ. ವೀರಭದ್ರಯ್ಯ ನಿವೃತ್ತ ಕನ್ನಡ ಪ್ರಾಧ್ಯಾಪಕರು, ಸಿದ್ಧಗಂಗಾ ಕಾಲೇಜು, ತುಮಕೂರು

ನಮ್ಮನ್ನೆಲ್ಲ ಸ್ವಾಮೀಜಿಗಳು ಹೇಗೆ ಕಾಪಾಡಿದರು ಎನ್ನುವುದನ್ನು ನೆನಪಿಸಿಕೊಂಡರೆ ರೋಮಾಂಚನವಾಗುತ್ತದೆ. ನಮ್ಮ ಎಲ್ಲ ಕೆಲಸಗಳಲ್ಲಿ ತಾವೂ ಭಾಗಿಯಾಗ್ತಾ ಇದ್ರು. ದಿನವೂ ಕತೆಗಳನ್ನು ಹೇಳುತ್ತಿದ್ರು. ಎಲ್ಲವೂ ಒಳ್ಳೊಳ್ಳೆಯ ಕಥೆಗಳು. ಕೆಲವಂತೂ ಇವತ್ತಿಗೂ ನನಗೆ ನೆನಪಿವೆ. ಒಂದು ಬಾರಿ ಸ್ವಾಮೀಜಿಗಳು ಎಲ್ಲ ವಿದ್ಯಾರ್ಥಿಗಳಿಗೆ ಊಟ ಬಡಿಸುತ್ತ ಬರುತ್ತಿದ್ರು. ಮುಷ್ಟಿ ತುಂಬ ಅನ್ನ ತೆಗೆದು ನೀಡುತ್ತ ಬರುತ್ತಿದ್ದರು. ನನ್ನ ಪಕ್ಕ ಕುಳಿತಿದ್ದ ಸ್ನೇಹಿತ ಕೆಲವು ಅಗುಳುಗಳನ್ನು ಕೆಳಗೆ ಚೆಲ್ಲಿಬಿಟ್ಟ. ಅವರು ಬಡಿಸುತ್ತ ಇದ್ದವರು ‘ಅನ್ನದ ಒಂದು ಅಗುಳನ್ನೂ ವ್ಯರ್ಥ ಮಾಡಬಾರದು. ಅದು ಭಗವಂತನಿಗೆ ದ್ರೋಹ ಮಾಡಿದಂತೆ. ಬಿದ್ದಿರುವುದನ್ನೂ ತೆಗೆದುಕೊಂಡು ತಿನ್ನು, ಏನೂ ಆಗದು’ ಎಂದು ಅಲ್ಲಿ ಸ್ಥಳದಲ್ಲಿಯೇ ಬುದ್ಧಿ ಹೇಳಿದರು.

ಒಮ್ಮೆ, ಕಟ್ಟಡವನ್ನು ಕಟ್ಟುತ್ತಿದ್ರು. ನಾನು ಅಲ್ಲಿಯೇ ಇದ್ದೆ, ಅದು ಹೇಗೋ ಬಿದ್ದುಬಿಟ್ಟೆ. ಸ್ವಾಮೀಜಿಗಳು ಅಲ್ಲಿಯೇ ಇದ್ದವರು ನನ್ನನ್ನು ಎತ್ತಿ ನಿಲ್ಲಿಸಿ ‘ಯಾವುದೇ ಕೆಲಸ ಮಾಡುವಾಗಲೂ ನಿಗಾ ವಹಿಸಿ ಮಾಡಬೇಕು. ಸ್ವಲ್ಪ ಮೈಮರೆತರೂ ಸಮಸ್ಯೆಯಾಗುತ್ತದೆ’ ಎಂದು ಒಂದು ಏಟು ಕೊಟ್ಟೇ ತಿಳಿಹೇಳಿದರು.

ಇನ್ನೊಮ್ಮೆ, ನಾವೆಲ್ಲ ಕಾಡಿನಿಂದ ಸೌದೆ ಆರಿಸಿಕೊಂಡು ತರುತ್ತಿದ್ವಿ. ಒಬ್ಬ ಹುಡುಗನ ತಲೆ ಮೇಲೆ ಸ್ವಲ್ಪ ದೊಡ್ಡದೇ ಆದ ಸೌದೆ ಹೊರೆಯಿತ್ತು. ಅದನ್ನು ಗಮನಿಸಿದ ಸ್ವಾಮೀಜಿಗಳು ಅವನಿಂದ ಸೌದೆ ಹೊರೆಯನ್ನು ಪಡೆದು, ತಾವೇ ಹೊತ್ತು ಬೆಟ್ಟದಿಂದ ಇಳಿದು ಬಂದ ನಂತರ ಅದನ್ನು ಅವನಿಗೆ ಕೊಟ್ಟರು. ಮಕ್ಕಳ ಬಗ್ಗೆ, ವಿದ್ಯಾರ್ಥಿಗಳ ಬಗ್ಗೆ ಅವರಿಗೆ ಅಷ್ಟೊಂದು ಒಲವು. ಇಂಥ ನೂರಾರು ಅನುಭವಗಳಿಗೆ ಸಾಕ್ಷಿಯಾದ ಬದುಕು ನನ್ನದು ಎಂದು ಸಂತಸವೆನಿಸುತ್ತದೆ.

ನಾನೊಂದ ಕನಸ ಕಂಡೆ…

| ಕುಂ. ವೀರಭದ್ರಪ್ಪ ಕಾದಂಬರಿಕಾರ

ಎಸ್ಸೆಸ್ಸೆಲ್ಸಿಯಲ್ಲಿ ಮೂರನೇ ದರ್ಜೆಗೆ ತೃಪ್ತಿಪಟ್ಟುಕೊಂಡಿದ್ದೆ. ಅಂದಮಾತ್ರಕ್ಕೆ ನಾನು ದಡ್ಡನಾಗಿರಲಿಲ್ಲ. ಸಾಹಿತ್ಯದೊಲವು ಹೆಚ್ಚಿದ್ದ ಕಾರಣ ಹೆಚ್ಚಿನ ಫಲಿತಾಂಶ ಸಾಧನೆ ನನ್ನಿಂದ ಸಾಧ್ಯವಾಗಿರಲಿಲ್ಲ. ಕೊನೆಗೂ ಸಾಹಿತ್ಯಕ್ಕಿಂತ ಭವಿಷ್ಯವೇ ಮುಖ್ಯ ಎಂದು ನಿರ್ಧರಿಸಿ ಮಠಕ್ಕೆ ಕಾಲಿಟ್ಟಿದ್ದೆ. ನನ್ನನ್ನು ನೋಡಿ, ನನ್ನ ಕಾವ್ಯವಾಚನ ಕೇಳಿದ ಶ್ರೀಗಳು ಸೀಟನ್ನೂ ಕರುಣಿಸಿದ್ದರು.

ಪ್ರತಿದಿವಸ ಸಂಜೆ ಮಠದಲ್ಲಿ ನಡೆಯುತ್ತಿದ್ದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸುವುದು, ಶ್ರೀಗಳು ಪ್ರತಿದಿವಸ ಹೇಳುತ್ತಿದ್ದ ದೃಷ್ಟಾಂತ ಕಥೆಗಳನ್ನು ಆಲಿಸುತ್ತಿದ್ದುದು, ಭಗವದ್ಗೀತೆ ಹಾಗೂ ನಿಜಗುಣ ಶಿವಯೋಗಿಗಳ ಶ್ಲೋಕ ವಚನಗಳನ್ನು ಕೇಳುತ್ತಿದ್ದುದು ನಮ್ಮೆಲ್ಲರ ಭಾಗ್ಯವಾಗಿತ್ತು. ಶ್ರೀಗಳು ಹೇಳಿದ ಸಹಸ್ರಾರು ಕಥೆಗಳಲ್ಲಿ ಸುಮಾರು ಎರಡು ನೂರು ಕಥೆಗಳು ನನ್ನ ನೆನಪಿನ ಸಂಪುಟದಲ್ಲಿವೆ. ನನ್ನ ಕವಿತೆಗಳು ಚಿಕ್ಕಪುಟ್ಟ ಲೇಖನಗಳು ಶ್ರೀಮಠದ ಮಾಸಪತ್ರಿಕೆ ಶ್ರೀ ಸಿದ್ಧಗಂಗಾದಲ್ಲಿ ಅನಿಯಮಿತವಾಗಿ ಪ್ರಕಟಗೊಳ್ಳುತ್ತಿದ್ದವು, ಅದರ ಸಂಪಾದಕ ಪಂ ಚೆನ್ನಪ್ಪ ಎರೆಸೀಮೆ ಶ್ರೀಗಳ ಸಾನ್ನಿಧ್ಯದಲ್ಲಿ ನನ್ನನ್ನು ಶ್ಲಾಘಿಸಿದ್ದರಿಂದ ನನಗೆ ವಿಶೇಷ ಸೌಲಭ್ಯ ಪ್ರಾಪ್ತವಾಗಿತ್ತು. ಇದನ್ನೇ ಬಳಸಿಕೊಂಡು ಮಠದಿಂದ ತುಮಕೂರಿಗೆ ಹೋಗಿ ರಾಜಕುಮಾರ್ ಅಭಿನಯದ ಚಲನಚಿತ್ರಗಳನ್ನು ನೋಡಿ ಮಠಕ್ಕೆ ಮರಳಿ ಶಿಕ್ಷೆಗೆ ಗುರಿಯಾದ ಪ್ರಸಂಗಗಳಿಗೆ ಕೊರತೆ ಇಲ್ಲ.

ಶ್ರೀಗಳು ಬೆಳಗ್ಗೆ ಎರಡು ಮೂರು ಗಂಟೆಗೆ ಎಚ್ಚರಗೊಳ್ಳುವರೆಂದೂ ಒಂದೆರಡು ತಾಸುಗಳವರೆಗೆ ಲಿಂಗಪೂಜೆ ಮಾಡಿಕೊಳ್ಳುವರೆಂದೂ, ಬಳಿಕ ಪ್ರಾತಃಕಾಲದಲ್ಲಿ ವಿದ್ಯಾರ್ಥಿಗಳು ಎದ್ದು ಓದುತ್ತಿರುವರೋ ಇಲ್ಲವೋ ಎಂದು ಪರಿಶೀಲಿಸಲು ಖುದ್ದು ತಾವೇ ನಡೆದಾಡಿ ಪರೀಕ್ಷಿಸುವರೆಂದೂ! ಅವೆಲ್ಲ ನಿಜವೇ. ತುಮಕೂರಿಗೆ ಹೋಗಿ ಕಾಸಿದ್ದರೆ ಕೈಲಾಸ ನೋಡಿ ಕಳ್ಳನಂತೆ ಮರಳಿ ಮಲಗಿದ್ದೆ. ಬೆಳಗಿನ ಜಾವ ಕನಸು ಕಂಡೆ. ಅದರಲ್ಲಿ ಶ್ರೀಗಳು ಆಗಮಿಸುತ್ತಿರುವ ಪಾದುಕೆ ಸದ್ದು, ಹತ್ತಿರ ಬಂದಂತೆ, ನಾನು ಗಡಬಡಿಸಿ ಎದ್ದಂತೆ, ಶ್ರೀಗಳು ತಮ್ಮ ಪಾದುಕೆಯಿಂದ ನನ್ನ ತಲೆಗೆ ಹೊಡೆದು ಇನ್ನು ಮಲಗಿದ್ದೀ ಏನೋ ಎಂದು ಬಯ್ದಂತೆ! ಅದು ಕನಸಲ್ಲ, ನನಸು! ಪಾದುಕೆ ಏಟು ಆಸ್ವಾದಿಸಲು ಪುಣ್ಯ ಮಾಡಿರಬೇಕು. ನನ್ನ ನೊಸಲ ಮೇಲ್ಭಾಗದಲ್ಲಿ ಬುಗುಟೆ ಕಾಣಿಸಿಕೊಂಡಿತು, ಅದರ ದರ್ಶನ ಪಡೆದ ಹಲವರು ಇದೂ ದ್ವಾದಶಜ್ಯೋತಿರ್ಲಿಂಗಗಳಿಗಿಂತ ಮಿಗಿಲು ಎಂದು ಪ್ರಶಂಸಿಸಿದ್ದು, ಅದನ್ನು ರ್ಸ³ಸಿ ನಮಸ್ಕರಿಸಿದ್ದು, ಇಂಥ ಪ್ರಸಾದ ಸೇವಿಸಲು ನೀನು ಪುಣ್ಯ ಮಾಡಿರುವಿಯಪ್ಪ, ನಿನಗೆ ಒಳ್ಳೆಯ ಭವಿಷ್ಯವಿದೆ ಎಂದು ಕಾರಣಿಕ ನುಡಿದದ್ದು! ನನಗಿನ್ನೂ ನೆನಪಿದೆ.

Leave a Reply

Your email address will not be published. Required fields are marked *