ಹಗಲು ದರ್ಬಾರಿನೊಂದಿಗೆ ಶೃಂಗೇರಿ ದಸರಾ ಸಂಪನ್ನ

ಶೃಂಗೇರಿ: ಮಲೆನಾಡಿನ ಆಧ್ಯಾತ್ಮಿಕ ಪರಂಪರೆಯ ಶೃಂಗೇರಿ ಕ್ಷೇತ್ರದ ಅಧಿದೇವತೆ ಶ್ರೀ ಶಾರದೆಯ ಶರನ್ನವರಾತ್ರಿ ಮಹಾರಥೋತ್ಸವ ಶನಿವಾರ ಹಗಲು ದರ್ಬಾರಿನೊಂದಿಗೆ, ಅದ್ದೂರಿ ಮೆರವಣಿಗೆ ಮೂಲಕ ಮುಕ್ತಾಯಗೊಂಡಿತು.

ಶನಿವಾರ ಶ್ರೀ ಶಾರದೆ ಗಜಲಕ್ಷ್ಮೀಯಾಗಿ ಕಂಗೊಳಿಸಿದಳು. ಮಂದಸ್ಮಿತ ವದನೆಯಾಗಿ ಪ್ರಸನ್ನಳಾದ ಶ್ರೀ ಗಜಲಕ್ಷ್ಮೀ ಶಿಷ್ಯರನ್ನು ಅನುಗ್ರಹಿಸಿದಳು. ಅಲಂಕೃತ ರಥದಲ್ಲಿ ಶ್ರೀ ಶಾರದೆಯ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮುಖ್ಯಬೀದಿಯಲ್ಲಿ ಮೆರವಣಿಗೆ ಸಾಗಿಬಂತು. ಉರಿಬಿಸಿಲನ್ನೂ ಲೆಕ್ಕಿಸದೆ ಆಗಮಿಸಿದ್ದ ಭಕ್ತರು ಶ್ರೀ ಶಾರದೆಯನ್ನು ಸ್ತುತಿಸಿ ಶ್ರದ್ಧಾಭಕ್ತಿ ಮೆರೆದರು.

ಬೆಂಗಳೂರು, ಆಂಧಪ್ರದೇಶ, ಗುಂಟೂರು, ಕೇರಳ, ತಮಿಳುನಾಡು, ಮೈಸೂರು, ಉಡುಪಿ, ಮಂಗಳೂರು, ಹಾಸನ, ಕಮಲಶಿಲೆ, ಕುಂದಾಪುರ ಹೀಗೆ ವಿವಿಧೆಡೆಯಿಂದ ಆಗಮಿಸಿದ ಭಕ್ತರು ಉತ್ಸವದಲ್ಲಿ ಸಂಭ್ರಮದಿಂದ ಪಾಲ್ಗೊಂಡರು. 30 ಸಾವಿರಕ್ಕೂ ಹೆಚ್ಚು ಭಕ್ತರು ಶ್ರೀಮಠಕ್ಕೆ ಆಗಮಿಸಿ ಶ್ರೀ ಶಾರದೆಯ ಸನ್ನಿಧಿಯಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಭಾಗಿಯಾದರು.

ಶ್ರೀಮಠದ ವಸತಿ ಗೃಹ ಹಾಗೂ ಖಾಸಗಿ ವಸತಿಗೃಹಗಳು ಭರ್ತಿಯಾಗಿದ್ದವು. ಗಾಂಧಿಮೈದಾನದ ವಾಹನ ನಿಲುಗಡೆ ಭರ್ತಿಯಾಗಿದ್ದು ಎಲ್ಲ ಬೀದಿಗಳಲ್ಲಿ ವಾಹನ ದಟ್ಟಣೆಯಿಂದಾಗಿ ವಾಹನಗಳನ್ನು ನಿಲ್ಲಿಸಲು ಪರದಾಡಬೇಕಾಯಿತು.

ಸ್ಥಳೀಯರಿಂದ ಗಾನಸುಧೆ: ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ಭಾರತೀ ಸಂಗೀತ ಶಾಲೆಯ ಸಾವಿತ್ರಿ ಪ್ರಭಾಕರ್ ಅವರ ಶಿಷ್ಯರಾದ ಎಂ.ಆರ್.ಪಂಚಮಿ ಹಾಗೂ ಶಾರದಾ ಅವರ ಹಾಡುಗಾರಿಕೆ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಪಕ್ಕವಾದ್ಯಗಳಲ್ಲಿ ನೈಭಿಪ್ರಭಾಕರ್ ಹಾಗೂ ತಂಡದವರು ಸಾಥ್ ನೀಡಿದರು.

ಸೂಕ್ತ ನಿರ್ವಹಣೆ: ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಜನರು ಶಿಸ್ತುಬದ್ಧವಾಗಿ ಮೆರವಣಿಗೆಯಲ್ಲಿ ಸಾಗಿ ಬರಲು ಶ್ರೀ ನವರಾತ್ರಿ ಉತ್ಸವ ಸಮಿತಿ,ಪೊಲೀಸ್ ಇಲಾಖೆ, ಗೃಹರಕ್ಷಕ ದಳ ಸಾಕಷ್ಟು ಶ್ರಮಿಸಿದವು. ಜನರು ಹಾಗೂ ವಾಹನ ದಟ್ಟಣೆಯನ್ನು ಪಿಎಸ್​ಐ ಪ್ರಮೋದ್​ಕುಮಾರ್ ಮತ್ತು ತಂಡದವರು ಸಮರ್ಥವಾಗಿ ನಿರ್ವಹಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು.

ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ಜೋರಾಗಿತ್ತು. ಮೆರವಣಿಗೆಯಲ್ಲಿ ಭಾಗವಹಿಸಿದವರಿಗೆ ಸ್ಥಳೀಯರು ಪಾನಕ ನೀಡಿ ಸತ್ಕರಿಸಿದರು. ರಥೋತ್ಸವದಲ್ಲಿ ಶ್ರೀಮಠದ ಆಡಳಿತಾಧಿಕಾರಿ ಡಾ. ವಿ.ಆರ್.ಗೌರೀಶಕರ್, ಶಾಸಕ ಟಿ.ಡಿ.ರಾಜೇಗೌಡ, ಶ್ರೀಮಠದ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ಕಿರಿಯ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ

ರಸ್ತೆಗಳಲ್ಲಿ ಹಾಕಲಾದ ವ್ಯೆವಿಧ್ಯಮಯ ರಂಗೋಲಿ, ರಸ್ತೆ ಬದಿ ಶೃಂಗರಿಸಿದ ತಳಿರು ತೋರಣಗಳು, ಶ್ರೀಮಠದ ಆನೆಗಳು, ತಟ್ಟಿರಾಯಗಳು, ಛತ್ರಿಛಾಮರಗಳ ನಡುವೆ ದರ್ಬಾರು ವೇಷದಲ್ಲಿ ಅಡ್ಡಪಲ್ಲಕ್ಕಿಯಲ್ಲಿ ಶ್ರೀಮಠದ 37ನೇ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಆಸೀನರಾಗಿದ್ದರು. ಪಟ್ಟಣದ ನಿವಾಸಿಗಳು ಶ್ರೀಗಳಿಗೆ ಫಲಗಳನ್ನು ಸಮರ್ಪಿಸಿ ಭಕ್ತಿಭಾವ ಮೆರೆದರು.

 

ಹಗಲು ದರ್ಬಾರ್

ಶನಿವಾರ ಶ್ರೀಮಠದಲ್ಲಿ ಹಗಲು ದರ್ಬಾರ್ ನೆರವೇರಿತು. ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಅವರು ಸಿಂಹಾಸನದಲ್ಲಿ ಆಸೀನರಾದ ಬಳಿಕ ನಾಲ್ಕು ವೇದಗಳ ಪಾರಾಯಣಗಳು, ಪಂಚಾಂಗ ಶ್ರವಣ, ಸಂಗೀತ ಸೇವೆ, ಸರ್ವವಾದ್ಯ ಸೇವೆಗಳು ನಡೆದವು. ಬಳಿಕ ಶ್ರೀ ಶಾರದೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಹಗಲು ದರ್ಬಾರ್ ನೋಡಲು ಶ್ರೀಮಠದ ಒಳಪ್ರಾಂಗಣದಲ್ಲಿ ಸಾವಿರಾರು ಭಕ್ತರು ಬೆಳಗ್ಗೆಯಿಂದಲೇ ಜಮಾಯಿಸಿದರು. ಬೆಳಗ್ಗೆ ಉಭಯಶ್ರೀಗಳು ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು. ದೇವೀಭಾಗವತ,ದುರ್ಗಾ ಸಪ್ತಶತಿ, ಪ್ರಸ್ಥಾನತ್ರಯ ಭಾಷ್ಯಪಾರಾಯಣ, ಶ್ರೀಸೂಕ್ತ ಜಪ, ಶ್ರೀದುರ್ಗಾ ಜಪ ಮಂತಾದ ಧಾರ್ವಿುಕ ಕಾರ್ಯಕ್ರಮ ನೆರವೇರಿದವು.

 

ಆಕರ್ಷಕ ಸ್ತಬ್ಧ ಚಿತ್ರಗಳು

ಉಡುಪಿ ಹಾಗೂ ಕಮಲ ಚೆಂಡೆವಾದ್ಯಗಳು, ಕಡೂರು ಶ್ರೀಬಸವ ಪ್ರಿಯ ಮಹಿಳಾ ಕಲಾತಂಡದ ವೀರಗಾಸೆ ನೃತ್ಯ, ಮರಕಾಲು ಕುಣಿತ, ವೈಕುಂಠಪುರದ ಅದ್ದೂರಿ ಬ್ಯಾಂಡ್ಸ್ ಹಾಗೂ ಮೀಗಾ ಗೆಳೆಯರ ಬಳಗದ ಅವರ ನಾಸಿಕ್ ಬ್ಯಾಂಡ್, ಹುಲಿವೇಷ, ಕೆಸರುಕೂಡಿಗೆ ಅವರ ವಿಶೇಷ ಜಾನಪದ ಕುಣಿತ, ಕಲಾವಿದ ರಕ್ತೇಶ್ವರಿ ರಮೇಶ್ ಅವರ ರಚಿಸಿದ ಬೃಹತ್ ಆಕಾರದ ಡೈನೋಸಾರ್, ವಡಗಿನಬೈಲು ಅವರ ಶಿವತಾಂಡವ ನೃತ್ಯ, ಗೀರ್ವಾಣಿ ಸಂಘದವರ ಭಜನಾತಂಡ, ರಾಜಸ್ಥಾನಿ ಮಹಿಳೆಯರ ಆಕರ್ಷಕ ಕೋಲಾಟ, ಸ್ಥಳೀಯ ಶಾಲಾ ಮಕ್ಕಳ ನೃತ್ಯಗಳು, ತಾಲೂಕಿನ ವಿವಿಧ ಭಜನಾ ಮಂಡಳಿಗಳು, ವೈವಿಧ್ಯ ದೇವರ ರೂಪದಲ್ಲಿ ಕಾಣಿಸಿಕೊಂಡ ಪುಟ್ಟ ಮಕ್ಕಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಮೂಡಿ ಬಂದ ಸ್ತಬ್ಧಚಿತ್ರಗಳು ಮೆರವಣಿಗೆಗೆ ಮೆರುಗು ನೀಡಿದವು.