ಶೃಂಗೇರಿ: ಹಿಂದು ಧರ್ಮವು ಅವನತಿಯ ಹಂತದಲ್ಲಿದ್ದಾಗ ಶ್ರೀ ಶಂಕರಾಚಾರ್ಯರು ಶಿವಸ್ವರೂಪಿ ರೂಪದಲ್ಲಿ ಅವತರಿಸಿ, ಹಿಂದು ಧರ್ಮದ ಪುನರುತ್ಥಾನ ಮಾಡಿದ ಮಹಾನುಭಾವರಾಗಿದ್ದಾರೆ ಎಂದು ಗಾಡಿಕೆರೆ ಗೌತಮಿ ಮಧುಕರ ಹೇಳಿದರು.
ತಾಲೂಕಿನ ಅಳಲೆಗುಡ್ಡ ಶ್ರೀ ವಿನಾಯಕ ದೇವಸ್ಥಾನದ ಆವರಣದಲ್ಲಿ ಶನಿವಾರ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾ ಏರ್ಪಡಿಸಿದ್ದ ಶ್ರೀ ಶಂಕರ ಜಯಂತ್ಯುತ್ಸವದಲ್ಲಿ ಜಾಗೃತ ಪಂಚಕ ಹಾಗೂ ಮೋಹಮುದ್ಗರದ ವಿಶ್ಲೇಷಣೆ ಮಾಡಿ ಮಾತನಾಡಿದರು.
ಅದ್ವೈತ ತತ್ವವನ್ನು ಪ್ರತಿಪಾದಿಸಿದ ಶಂಕರರು ತಮ್ಮ ಅಲ್ಪ ಜೀವಿತಾವಧಿಯಲ್ಲಿ ದೇಶದ ಉದ್ದಗಲಕ್ಕೆ ಸಂಚರಿಸಿ ಸನಾತನ ಧರ್ಮದ ಬಗ್ಗೆ ಜಾಗೃತಿ ಮೂಡಿಸಿದರು. ತಮ್ಮ ಜೀವನ ನಂತರವೂ ಧರ್ಮ ಪ್ರಚಾರ ಮುಂದುವರಿಸಲು ದೇಶದ ನಾಲ್ಕು ದಿಕ್ಕಗಳಲ್ಲಿ ಆಮ್ನಾಯ ಪೀಠವನ್ನು ಸ್ಥಾಪಿಸಿದರು ಎಂದರು.
ಕೊಪ್ಪದ ಶ್ರೀ ಹರಿಹರ ನಾಮಸ್ಮರಣ ತಂಡದಿಂದ ಶ್ರೀ ಶಂಕರಾಚಾರ್ಯ ವಿರಚಿತ ಜಾಗೃತ ಪಂಚಕ ಹಾಗೂ ಮೋಹ ಮುದ್ಗರದ ಗಾಯನ ಹಾಗೂ ವಿಶ್ಲೇಷಣೆ ನಡೆಯಿತು. ಗಾಯಕರಾಗಿ ಪ್ರಮೀಳಾ ಪ್ರಭಾಕರ್, ರೂಪಾ ರಾಜೇಂದ್ರ, ಪ್ರತೀಕ್ಷಾ ಹಾಗೂ ವಿಶ್ಲೇಷಣೆಯನ್ನು ಗೌತಮಿ ಮಧುಕರ ಮಾಡಿದರು. ಗಾಡಿಕೆರೆ ಸತ್ಯನಾರಾಯಣ ಹಿಮ್ಮೇಳ ನಿರ್ವಹಿಸಿದರು. ಗುರುವಂದನಾ, ಶ್ರೀ ಶಂಕರ ಅಷ್ಟೋತ್ತರ ಪಠಣವನ್ನು ಸಾಮೂಹಿಕವಾಗಿ ನಡೆಸಲಾಯಿತು.
ಹೆಬ್ಬಾರ ಸಮಾಜದ ಅಧ್ಯಕ್ಷ ಎ.ಎಂ.ಶ್ರೀಧರ ರಾವ್, ಕಾರ್ಯದರ್ಶಿ ಅಶೋಕ್, ಮಹಾಸಭಾ ಉಪಾಧ್ಯಕ್ಷ ಹೆಬ್ಬಿಗೆ ಗಣೇಶ್, ವೆಂಕಟರಾವ್, ಸೋಮಣ್ಣ, ಕೃಷ್ಣಸ್ವಾಮಿ, ಅನ್ನಪೂರ್ಣ, ಶ್ರೀಲಕ್ಷ್ಮೀ, ಭಾಗ್ಯಲಕ್ಷ್ಮೀ, ಭಾರತಿ, ವಿಜಯಲಕ್ಷ್ಮೀ, ಕಲ್ಪನಾ, ಆರತಿ, ರಮಾದೇವಿ ಇತರರಿದ್ದರು.