ಹಾವೇರಿ: ಏಕವ್ಯಕ್ತಿ ಟ್ರಸ್ಟ್ ಡೀಡ್ ರದ್ದಾಗಬೇಕು, ಸಿರಿಗೆರೆಯ ಶ್ರೀ ಸಾಧು ಸದ್ಧರ್ಮ ಪೀಠಕ್ಕೆ ನೂತನ ಪೀಠಾಧಿಕಾರಿ ನೇಮಕ ಆಗಬೇಕು, ಅಲ್ಲಿಯವರೆಗೂ ನಮ್ಮ ಹೋರಾಟ ನಿಲ್ಲದು. ರಾಜ್ಯಾದ್ಯಂತ ಜನಜಾಗೃತಿ ಆಂದೋಲನ ಮಾಡಲಾಗುವುದು…
ಮಾಜಿ ಸಚಿವ ಬಿ.ಸಿ. ಪಾಟೀಲರ ಹಿರೇಕೆರೂರ ಪಟ್ಟಣದ ನಿವಾಸದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಧು ಸದ್ಧರ್ಮ ವೀರಶೈವ ಸಮಾಜದ ಸಭೆಯಲ್ಲಿ ಹೀಗೆ ನಿರ್ಣಯ ಕೈಗೊಳ್ಳಲಾಯಿತು.
ಬಿ.ಸಿ. ಪಾಟೀಲ ಮಾತನಾಡಿ, ವಿಶ್ವ ಬಂಧು ಮರುಳುಸಿದ್ಧರು ಸ್ಥಾಪಿಸಿದ ಶ್ರೀಮದ್ ಸಾಧು ಸದ್ಧರ್ಮ ಸಮಾಜಕ್ಕೆ ಭವ್ಯವಾದ ಪರಂಪರೆ ಇದೆ. ಲಕ್ಷಾಂತರ ಜನ ಸಮುದಾಯವನ್ನು ಹೊಂದಿರುವ ಈ ಮಠ, ರಾಜ್ಯದಲ್ಲಷ್ಟೇ ಅಲ್ಲ, ರಾಷ್ಟ್ರದಲ್ಲಿಯೂ ತನ್ನ ಸಮಯ ಪ್ರಜ್ಞೆ ಹಾಗೂ ಶಿಸ್ತಿಗೆ ಹೆಸರುವಾಸಿಯಾದ ಮಠವಾಗಿತ್ತು. ಲಿಂಗೈಕ್ಯ ಗುರುಗಳಾದ ಶಿವಕುಮಾರ ಸ್ವಾಮೀಜಿಯವರು ಈ ಮಠವನ್ನು ಸುಜ್ಞಾನಿ ಮಠವಾಗಿಸಲು ಶತಮಾನಗಳ ಕಾಲ ನೊಂದು ಬೆಂದು ಸಮಾಜವನ್ನು ಕಟ್ಟಿ ಬೆಳೆಸಿದರು. ಶರಣರು ಕಂಡ ಈ ಸಮಾಜವನ್ನು ಮತ್ತೆ ಕಟ್ಟಬೇಕೆಂದು ಶ್ರಮಿಸಿದವರು ಲಿಂಗೈಕ್ಯ ಶ್ರೀಗಳು. ಆದರೆ, ಈ ಮಠ ಇಂದು ಓರ್ವ ವ್ಯಕ್ತಿಯ ಕೈಯಲ್ಲಿ ಸಿಕ್ಕು ನಲುಗಿದೆ. ಅದರಿಂದ ಪಾರು ಮಾಡಬೇಕೆಂಬುದೇ ನಮ್ಮ ಸಮಾಜದ ಸದ್ಭಕ್ತರ ಆಶಯವಾಗಿದೆ ಎಂದು ಅಭಿಪ್ರಾಯಪಟ್ಟರು.
ದಾವಣಗೆರೆಯ ಉದ್ಯಮಿ ಅಣಬೇರು ರಾಜಣ್ಣ ಮಾತನಾಡಿ, ವೈಚಾರಿಕ ಪರಂಪರೆಗೆ ನಾಂದಿ ಹಾಡಿದ ಹಾಗೂ ಬಸವೇಶ್ವರರು ಕಟ್ಟ ಬಯಸಿದ ನಮ್ಮ ಸಮಾಜ ಮತ್ತೆ ಮೊದಲಿನಂತಾಗಬೇಕು. ನಾವು ಈಗಿರುವ ಪೂಜ್ಯರ ಧೋರಣೆಯನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಒಪ್ಪುವುದಾದರೆ ಈಗಿರುವ ಪೂಜ್ಯರು ತಾವೇ ಸ್ವತಃ ರಚಿಸಿಕೊಂಡ ಡೀಡ್ ರದ್ದುಪಡಿಸಬೇಕು. ಬೃಹನ್ ಮಠದ ಹಳೆಯ ಡೀಡ್ ಪ್ರಕಾರ ನೂತನ ಪೀಠಾಧಿಪತಿ ಆಯ್ಕೆ ಮಾಡಬೇಕು. ಪೂಜ್ಯರು ನಿವೃತ್ತಿ ಘೊಷಣೆ ಮಾಡಬೇಕು. ಇಲ್ಲವಾದಲ್ಲಿ ನಮ್ಮ ಹೋರಾಟ ಉಗ್ರವಾಗಿರುತ್ತದೆ ಎಂದು ಅಭಿಪ್ರಾಯ ತಿಳಿಸಿದರು.
ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ, ಶಿಕಾರಿಪುರ ತಾಲೂಕಿನ ಸಾಧು ಸಮಾಜದ ಅಧ್ಯಕ್ಷ ಚಂದ್ರಪ್ಪ ಜಂಬೂರ, ರಾಣೆಬೆನ್ನೂರ ತಾಲೂಕಿನ ಸಮಾಜದ ಮಾಜಿ ಅಧ್ಯಕ್ಷ ಮಲ್ಲೇಶಪ್ಪ ಅರಿಕೇರಿ, ರಟ್ಟಿಹಳ್ಳಿ ತಾಲೂಕಿನ ಸಮಾಜದ ಅಧ್ಯಕ್ಷ ಮಾಲತೇಶ ಗಂಗೋಳ, ಸಮಾಜದ ಪ್ರಮುಖರಾದ ಎಸ್.ಬಿ. ತಿಪ್ಪಣ್ಣನವರ, ಬಿ.ಎನ್. ಬಣಕಾರ, ಜಟ್ಟಪ್ಪ ಕರೆಗೌಡ್ರು, ಕೆ.ಬಿ. ಬಾಳಿಕಾಯಿ, ಪ್ರಕಾಶಗೌಡ ಗೌಡರ, ಜಯಣ್ಣ ಹೊಳೆ ಅನ್ವೇರಿ, ಆರ್.ಎನ್. ಗಂಗೋಳ, ಆರ್.ಎನ್. ಬಾಳಿಕಾಯಿ, ದೊಡ್ಡಗೌಡ್ರು ಪಾಟೀಲ ಸೇರಿದಂತೆ ನೂರಾರು ಪ್ರಮುಖರು, ಸದಸ್ಯರು ಪಾಲ್ಗೊಂಡಿದ್ದರು.
ಶ್ರೀ ಶಿವಕುಮಾರ ಶಿವಾಚಾರ್ಯ ಶ್ರೀಗಳು ಇದ್ದಾಗ ಹೇಗೆ ಇತ್ತು, ಇಂದು ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಇವತ್ತು ಸಭೆ ಮಾಡುತ್ತಿರುವುದು ಯಾರ ವಿರುದ್ಧವೂ ಅಲ್ಲ. ಪೀಠದ ವಿರುದ್ಧವೂ ಅಲ್ಲ. ಈಗಿನ ಪೀಠಾಧಿಕಾರಿಗಳ ಧೋರಣೆಯ ಬಗ್ಗೆ. ನಾವು ಅದನ್ನು ಪ್ರತಿಭಟಿಸುವ ಕೆಲಸ ಮಾಡುತ್ತಿದ್ದೇವೆ ಹೊರತು, ನಮಗೆ ಅದರಿಂದ ಸಣ್ಣ ಕೆಲಸವೂ ಆಗಬೇಕಿಲ್ಲ. ಮಠದ ಹಿಂದಿನ ಪರಂಪರೆ, ಘನತೆ ಕಾಯ್ದುಕೊಳ್ಳಬೇಕು ಎಂಬುದೇ ನಮ್ಮ ಉದ್ದೇಶ.
| ಬಿ.ಸಿ. ಪಾಟೀಲ, ಮಾಜಿ ಸಚಿವ