ಧರ್ಮದಿಂದ ವಿಮುಖನಾದರೆ ಶಾಂತಿ ಸಿಗದು

ಬಾಳೆಹೊನ್ನೂರು: ಸಂಸ್ಕಾರಯುಕ್ತ ಬದುಕಿನಿಂದ ಉತ್ಕರ್ಷ ಪ್ರಾಪ್ತಿಯಾಗುತ್ತದೆ. ಸುಖದ ಬದುಕಿಗೆ ಶಿಕ್ಷಣ ಮತ್ತು ಅಧ್ಯಾತ್ಮದ ಅರಿವು ಮುಖ್ಯ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಶ್ರೀ ರಂಭಾಪುರಿ ಪೀಠದಲ್ಲಿ ಪೌರ್ಣಿಮೆ ಧರ್ಮ ಸಮಾರಂಭದಲ್ಲಿ 2019ನೇ ದಿನದರ್ಶಿಕೆ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.

ಜೀವನೋತ್ಸಾಹಕ್ಕೆ ಧರ್ವಚರಣೆಯೇ ಹೆದ್ದಾರಿ. ಸತ್ಯ-ಧರ್ಮದಿಂದ ಮನುಷ್ಯ ವಿಮುಖನಾದರೆ ಬದುಕಿನಲ್ಲಿ ಶಾಂತಿ ಸಿಗುವುದಿಲ್ಲ. ಧರ್ಮದಲ್ಲಿ ಮಾರ್ಗವಿದೆ ವೇಗವಿಲ್ಲ. ವಿಜ್ಞಾನದಲ್ಲಿ ವೇಗವಿದೆ ಮಾರ್ಗವಿಲ್ಲ. ವಿಜ್ಞಾನವಿಲ್ಲದ ಧರ್ಮ ಕುಂಟು. ಧರ್ಮವಿಲ್ಲದ ವಿಜ್ಞಾನ ಕುರುಡು ಎಂದು ತತ್ವಜ್ಞಾನಿ ಐನ್​ಸ್ಟೀನ್ ಎಚ್ಚರಿಸಿದ್ದಾರೆ ಎಂದರು.

ಧರ್ಮ, ವಿಜ್ಞಾನದ ಸಮನ್ವಯದಿಂದ ಜೀವ ಜಗತ್ತು ನೆಮ್ಮದಿಯಿಂದ ಬದುಕಲು ಸಾಧ್ಯ. ಫಲವಿತ್ತ ರೆಂಬೆ, ಗೊನೆ ಹೊತ್ತ ಬಾಳೆ, ತೆನೆ ಹೊತ್ತ ದಂಟು ಸದಾ ಬಾಗಿರುವಂತೆ ಮನುಷ್ಯ ಯಾವಾಗಲೂ ವಿನಮ್ರ ಭಾವನೆಯಿಂದ ಬಾಳಿದರೆ ಬದುಕು ಸಾರ್ಥಕ. ಈ ದೇಶದ ಅಭ್ಯುದಯಕ್ಕೆ ಪ್ರಾಚೀನ ಸಾಹಿತ್ಯ, ಸಂಸ್ಕೃತಿ ಆಚರಣೆ ಮುಖ್ಯ ಎಂದರು.

ಭೌತಿಕ ಸಂಪತ್ತಿದ್ದರೂ ಕೆಲವನ್ನು ಪಡೆಯಲು ಸಾಧ್ಯವಾಗದು. ಹಣದಿಂದ ಔಷಧ ಕೊಂಡರೂ ಆರೋಗ್ಯ ಸಿಗುವುದಿಲ್ಲ. ಹಣದಿಂದ ಆಹಾರ ಕೊಂಡರೂ ಪಚನ ಶಕ್ತಿ ಕೊಳ್ಳಲಾಗದು. ಹಣದಿಂದ ಹಾಸಿಗೆ ಕೊಂಡರೂ ನಿದ್ರೆ ಕೊಳ್ಳಲಾಗದು. ಹಣದಿಂದ ಪುಸ್ತಕ ಕೊಳ್ಳಬಹುದು ಆದರೆ ಜ್ಞಾನ ಕೊಳ್ಳಲಾಗದು. ಹಣದಿಂದ ಮನೆ ಕೊಳ್ಳಬಹುದಾದರೂ ಮನಃಶಾಂತಿ ಕೊಳ್ಳಲಾಗದು. ಗಳಿಸಿದ ಸಂಪತ್ತಿನ ಜತೆಗೆ ಒಂದಿಷ್ಟು ಜ್ಞಾನ ಪಡೆದು ಬಾಳಿದರೆ ಬದುಕು ಸುಂದರವಾಗುತ್ತದೆ ಎಂದು ಕಿವಿಮಾತು ಹೇಳಿದರು.

ಮಳಲಿಮಠ, ಕೊಟ್ಟೂರು, ಚನ್ನಗಿರಿ ಮತ್ತು ಬೇರುಗಂಡಿ ಮಠದ ಶ್ರೀಗಳು, ನೆಲಮಂಗಲ ವೀರಶೈವ ಸಮಾಜದ ಮುಖಂಡರು ಭಾಗವಹಿಸಿದ್ದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೊಷ, ದಾರುಕ ಶಾಸ್ತ್ರಿಗಳಿಂದ ಭಕ್ತಿ ಗೀತೆ ಜರುಗಿತು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು.