ಶ್ರೀ ಕೋದಂಡ ರಾಮಚಂದ್ರಸ್ವಾಮಿ ದೇಗುಲದಲ್ಲಿ 14 ಕೋಟಿ ರಾಮನಾಮ ಲಿಪಿ ಸಮರ್ಪಣೆ

ಚಿಕ್ಕಮಗಳೂರು: ಹಿರೇಮಗಳೂರಿನ ಇತಿಹಾಸ ಪ್ರಸಿದ್ಧ ಶ್ರೀ ಕೋದಂಡ ರಾಮಚಂದ್ರಸ್ವಾಮಿ ದೇವಾಲಯದಲ್ಲಿ ಶ್ರೀ ರಾಮನವಮಿ ಉತ್ಸವ ಭಾನುವಾರ ವೈಭವದಿಂದ ಜರುಗಿತು.

ಬೆಳಗ್ಗೆ ಕನ್ನಡ ರಾಮನಿಗೆ ಸುಪ್ರಭಾತ ಸೇವೆ, ವಿಪ್ರರಿಂದ ಸುಂದರಕಾಂಡ ಪಾರಾಯಣ, ಹಾಲು, ಮೊಸರು, ತುಪ್ಪ, ಜೇನುತುಪ್ಪ, ಸಕ್ಕರೆ ಮತ್ತು ಫಲದಿಂದ ಪಂಚಾಮೃತ ಅಭಿಷೇಕ, ಲಕ್ಷ ಮೋದಕ, ಗಣ ಹೋಮ ನೆರವೇರಿತು.

ಆನಂತರ ಒಂದು ಲಕ್ಷ ಆಹುತಿಯೊಂದಿಗೆ ರಾಮತಾರಕ ಮೂಲಮಂತ್ರ ಹೋಮ ನಡೆಯಿತು. ಕಾಲಕಾಲಕ್ಕೆ ಮಳೆ, ಬೆಳೆಯಾಗಿ ಭೂಮಿ ಸಮೃದ್ಧಿಯಾಗಲಿ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಏ.18ರಂದು ತಪ್ಪದೆ ಮತದಾನ ಮಾಡಲು ಭಕ್ತರು ಸಾಮೂಹಿಕ ಸಂಕಲ್ಪ ಕೈಗೊಂಡರು. ಹೋಮದ ಪೂರ್ಣಾಹುತಿ ಬಳಿಕ ಕಳೆದ ಒಂದು ವರ್ಷದ ಅವಧಿಯಲ್ಲಿ ಭಕ್ತರು ಬರೆದಿದ್ದ 14 ಕೋಟಿ ರಾಮನಾಮ ಲಿಪಿಯನ್ನು ರಾಮನಾಮ ಲಿಪಿ ಮಂಟಪದಲ್ಲಿರುವ ಹನುಮಂತನಿಗೆ ಸಮರ್ಪಿಸಲಾಯಿತು.

ದೇವಾಲಯದಲ್ಲಿ ಭಕ್ತರಿಂದ ಸಾಮೂಹಿಕ ಭಜನೆ, ನಾಮ ಸಂಕೀರ್ತನೆ, ಸ್ತೋತ್ರ ಪಠಣ ನಡೆದವು. ಬೆಳಗಿನಿಂದ ಮಧ್ಯಾಹ್ನದವರೆಗೆ ಭಕ್ತರು ದೇವಾಲಯದ ಆವರಣದಲ್ಲಿ ಕುಳಿತು ರಾಮನಾಮ ಲಿಪಿ ಬರೆದು ಕನ್ನಡ ರಾಮನಿಗೆ ಅರ್ಪಿಸಿದರು.

ಹಬ್ಬದ ಪ್ರಯುಕ್ತ ದೇವಾಲಯದಲ್ಲಿ ಪುಳಿಯೊಗರೆ, ಮೊಸರನ್ನ, ಪಾನಕ, ಕೋಸಂಬರಿ, ಮಜ್ಜಿಗೆ ವಿತರಿಸಲಾಯಿತು. ಬೆಳಗಿನಿಂದ ಮಧ್ಯಾಹ್ನದವರೆಗೆ ನಗರ ಸೇರಿದಂತೆ ಸುತ್ತಮುತ್ತಲ ಭಕ್ತರು ಪೂಜೆ ಸಲ್ಲಿಸಿದರು.